
17 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಐಐಎಸ್‌ಸಿ ನಿವೃತ್ತ ಪ್ರೊಫೆಸರ್ ಪುರುಷೋತ್ತಮ ಲಾಲ್ ಸಬ್ ದೇವ್ ಮತ್ತು ಅವರ ಕುಟುಂಬದ ತ್ರಿವಳಿ ಕೊಲೆ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ನಾಲ್ವರು ವಲಸೆ ಕಾರ್ಮಿಕರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಗಾಳ ಮೂಲದ ನಾಲ್ವರು ವಲಸೆ ಕಾರ್ಮಿಕರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ
ಬೆಂಗಳೂರು: 17 ವರ್ಷದ ಹಿಂದೆ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಭಾರತೀಯ ವಿಜ್ಞಾನ ಕೇಂದ್ರದ (ಐಐಎಸ್‌ಸಿ) ನಿವೃತ್ತ ಪ್ರೊಫೆಸರ್ ಮತ್ತು ಖ್ಯಾತ ಗಣಿತಜ್ಞ ಪುರುಷೋತ್ತಮ ಲಾಲ್ ಸಬ್ ದೇವ್, ಅವರ ಪತ್ನಿ ರೀಟಾ ಮತ್ತು ಪುತ್ರ ಮುನ್ನಾ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಪಶ್ಚಿಮ ಬಂಗಾಳ ಮೂಲದ ನಾಲ್ವರು ವಲಸೆ ಕಾರ್ಮಿಕರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ಆರೋಪಿಗಳಾದ ಸುಚಿತ್ರಾ ಹಲ್ದಾರ್, ಆಕೆಯ ಪತಿ ದೀಪಕ್ ಹಲ್ದಾರ್, ಮೊಹಮ್ಮದ್ ಸರ್ಬಾಲ್ ಮತ್ತು ಬಿದನ್ ಶಿಕಾರಿ ಅವರನ್ನು ಖುಲಾಸೆಗೊಳಿಸಿ ಬೆಂಗಳೂರಿನ 65ನೇ ಹೆಚ್ಚುವರಿ ಸಿಟಿ ಸಿಲ್ಕ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು ಮತ್ತು ಆರೋಪಿಗಳನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ (ಆರ್ .ಟಿ.ನಗರ ಠಾಣಾ ಪೊಲೀಸರು) ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ಪುರಸ್ಕರಿಸಿರುವ ನ್ಯಾ । ಎಚ್.ಪಿ. ಸಂದೇಶ್ ಮತ್ತು ನ್ಯಾ| ವೆಂಕಟೇಶ್ ಟಿ.ನಾಯಕ್ ನೇತೃತ್ವದ ವಿಭಾಗೀಯ ಪೀಠ, ನಾಲ್ವರು ಆರೋಪಿಗಳನ್ನು ಕೊಲೆ ಪ್ರಕರಣದಲ್ಲಿ ಅಪರಾಧಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಸದ್ಯ ಹೊರಗಿರುವ ನಾಲ್ವರು ಆರೋಪಿಗಳು ಎರಡು ವಾರಗಳಲ್ಲಿ ಆಧೀನ ನ್ಯಾಯಾಲಯದ ಮುಂದೆ ಶರಣಾಗಬೇಕು. ಉಳಿದ ಅವಧಿಯ ಶಿಕ್ಷೆಯನ್ನು ಪೂರೈಸಲು ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ.
ಇದನ್ನೂ ಓದಿ: ಖಮೇನಿ ಸಾವನ್ನಪ್ಪಿ 5 ದಿನದ ನಂತರ ಕಡೆಗೂ ಸಂತಾಪ ಸೂಚಿಸಿದ ಭಾರತ ಸರ್ಕಾರ
20 ತಿಂಗಳ ನಂತರ ಬಂಧನ: ಅಲ್ಲದೆ, ಈ ಪ್ರಕರಣದಲ್ಲಿ ವಲಸೆ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಮನೆಕೆಲಸದವರಾಗಿ ಸೇರಿ ಆ ನಂತರ ಪಿತೂರಿ ನಡೆಸಿ ಅಪರಾಧವೆಸಗಿದ್ದಾರೆ. ಘಟನೆ ನಡೆದ 20 ತಿಂಗಳ ನಂತರ ಅವರ ಬಂಧನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಲಸೆ ಕಾರ್ಮಿಕರು ಮನೆಗೆಲಸದ ನೆಪದಲ್ಲಿ ಮನೆಗಳನ್ನು ಸೇರಿ ಅಪರಾಧ ಕೃತ್ಯಗಳಲ್ಲಿ ತೊಡಗುವ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ವಲಸೆ ಕಾರ್ಮಿಕರ ನಿಯಮಗಳನ್ನು ಬಿಗಿಗೊಳಿಸಲು ಇದು ಸಕಾಲ. ವಲಸೆ ಕಾರ್ಮಿಕರ ಮೇಲೆ ನಿಗಾ ಇಡಬೇಕಿದೆ. ಅದಕ್ಕಾಗಿ ವಲಸೆ ಕಾರ್ಮಿಕ ಮತ್ತು ಕ್ರಿಮಿನಲ್ ನಿಯಂತ್ರಣ ಕಾರ್ಯತಂತ್ರಗಳಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಪೀಠ ಹೇಳಿದೆ. ವಲಸೆ ಕಾರ್ಮಿಕರ ಹಿನ್ನೆಲೆಯನ್ನು ಪೊಲೀಸರು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಅವರ ನೋಂದಣಿಗೆ ಪೋರ್ಟಲ್ ವ್ಯವಸ್ಥೆ ಮಾಡಬೇಕು. ಅವರ ಮಾಹಿತಿ ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಮಾಡಬೇಕು. ಇಂತಹ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಮಿಕ ಮತ್ತು ಅಪರಾಧ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.
ಮನೆಕೆಲಸದರಾಗಿ ಬಂದು ಮನೆ ಮಂದಿಯನ್ನೇ ಮುಗಿಸಿದರು
ಐಐಎಸ್‌ಸಿ ನಿವೃತ್ತ ಪ್ರೊಫೆಸರ್ ಹಾಗೂ ಖ್ಯಾತ ಗಣಿತಶಾಸ್ತ್ರಜ್ಞರಾದ ಪುರುಷೋತ್ತಮಲಾಲ್ ಸಬ್ ದೇವ್ (21), ಪತ್ನಿ ರೀಟಾ(62), ಪುತ್ರ ಮುನ್ನಾ(35) ಜತೆ ಆರ್.ಟಿ.ನಗರದ 80ಅಡಿ ರಸ್ತೆಯಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆ ಮನೆಗೆ ಕೆಲಸಕ್ಕೆ ಮೊದಲು ಸೇರಿದ ಸುಚಿತ್ರಾ, ನಂತರ ತನ್ನ ಪತಿಯನ್ನೂ ಕರೆ ತಂದಿದ್ದರು. ಇಬ್ಬರೂ ಔಟ್ ಹೌಸ್‌ನಲ್ಲಿಯೇ ನೆಲೆಸಿದ್ದರು. ಬಳಕ ಇತರೆ ಅಪರಾಧಿಗಳ ಜತೆ ಸೇರಿ ಸಂಚು ರೂಪಿಸಿ 2009ರ ಫೆ.16ರಂದು ಮೂವರನ್ನು ಕತ್ತು ಹಿಸುಕಿ ಕೊಂದು ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು. ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ 2016ರ ಫೆ.29ರಂದು ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಸರ್ಕಾರ ಹೈಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ: ಅಯ್ಯೋ ಹಲ್ಲಿ ಅಂತ ನೀವು ಓಡಿ ಹೋಗುವ ಬದಲು ಹಲ್ಲಿಗಳನ್ನೇ ಓಡಿಸಿ: ಇಲ್ಲಿದೆ ಪರಿಣಾಮಕಾರಿ ಮನೆ ಮದ್ದು