
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ‘ಪಾಸ್ ವಿತೌಟ್ ಹಿಂದಿ’ ನಿಯಮವನ್ನು ತಕ್ಷಣ ಜಾರಿಗೆ ತರಬೇಕೆಂದು ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ’ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ಈ ಶೈಕ್ಷಣಿಕ ವರ್ಷದ ಪರೀಕ್ಷೆಗೆ ನಿಯಮ ಘೋಷಿಸದಿದ್ದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ
‘ಹಿಂದಿ ಹೇರಿಕೆ ವಿರೋಧಿ’ ಸಂಘಟನೆ ಒತ್ತಾಯ
ಬೆಂಗಳೂರು (ಮಾ.6): ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ‘ಪಾಸ್ ವಿತೌಟ್ ಹಿಂದಿ’ ಎಂಬ ನಿಯಮವನ್ನು ರಾಜ್ಯ ಸರ್ಕಾರ ತಕ್ಷಣ ಪ್ರಕಟಿಸಬೇಕು. ಇಲ್ಲದಿದ್ದರೆ ಮಾ.10ರಂದು ಮಲ್ಲೇಶ್ವರದಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಗೆ ಮುತ್ತಿಗೆ ಹಾಕುವುದಾಗಿ ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ’ ಸಂಘಟನೆ ಎಚ್ಚರಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರರು ರಾಜ್ಯ ಶಿಕ್ಷಣ ಪರೀಕ್ಷಾ ಪದ್ಧತಿಯೊಳಗೆ ಹಿಂದಿ ಭಾಷೆ ಕಲಿಕೆಯನ್ನು ಹಂತಹಂತವಾಗಿ, ಬಲವಂತವಾಗಿ ಹೇರಲಾಗುತ್ತಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳ ಮುನ್ನಡೆಗೆ ತೊಡಕಾಗಿ ಪರಿಣಮಿಸಲಿದೆ. ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 1.42 ಲಕ್ಷ ಕನ್ನಡಿಗ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಘೋಷಿಸಿ ಅವರ ಬದುಕು ಅತಂತ್ರಗೊಳಿಸಲಾಗಿತ್ತು. ಈ ಶೈಕ್ಷಣಿಕ ವರ್ಷದ ಪರೀಕ್ಷೆಗಳು ಮಾ.18ರಂದು ಶುರುವಾಗಲಿದ್ದು, ಅದರೊಳಗೆ ಸರ್ಕಾರ ಪಾಸ್ ವಿತೌಟ್ ಹಿಂದಿ ನಿಯಮ ಘೋಷಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಜಯ್‌ಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ಕದಂಬ ಪಡೆಯ ಮಂಜು ಗಣಪತಿಪುರ ಸೇರಿದಂತೆ ಮತ್ತಿತರರು ಇದ್ದರು.
ದ್ರಾವಿಡ ಕನ್ನಡಿಗರ ಸಂಘಟನೆಯ ಅಬಿಗೌಡ ಮಾತನಾಡಿ, ಥೋರಟ್ ಆಯೋಗದ ವರದಿಯನ್ನು ಶಾಸನಸಭೆಯಲ್ಲಿ ಹಾಗೂ ಸಾರ್ವಜನಿಕ ಚರ್ಚೆಗೆ ಒದಗಿಸಬೇಕು. ದ್ವಿಭಾಷಾ ನೀತಿ ಜಾರಿಯಾಗುವವರೆಗೆ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಹಿಂದಿ ಪರೀಕ್ಷೆ ಕಡ್ಡಾಯಗೊಳಿಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು. ಹಿಂದಿ ಭಾಷಾ ಶಿಕ್ಷಕರ ನೇಮಕಾತಿ ರದ್ದುಪಡಿಸಬೇಕು. ಈಗಾಗಲೇ ನೇಮಕಗೊಂಡಿರುವ ಶಿಕ್ಷಕರನ್ನು ಕನ್ನಡ ಭಾಷಾ ಶಿಕ್ಷಕರಾಗಿ ನಿಯೋಜಿಸಲು ಕ್ರಮವಹಿಸಬೇಕು. ರಾಜ್ಯದ ಯಾವುದೇ ಹಂತದ ಶಿಕ್ಷಣ ಪಠ್ಯಕ್ರಮದೊಳಗೆ ಹಿಂದಿ ಭಾಷೆ ರಾಷ್ಟ್ರಭಾಷೆ ಎಂಬ ಬಿಂಬಿಸುವ ಕಲ್ಪಿತ ವಿಷಯವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.