
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ಕೊಡಗು ಜಿಲ್ಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ವನ್ಯಪ್ರಾಣಿ ಹಾವಳಿ ನಿಯಂತ್ರಣ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ರಸ್ತೆ ಅಭಿವೃದ್ಧಿ, ಮತ್ತು ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ಸಿಗಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ (ಮಾ.6): ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 17ನೇ ಬಜೆಟ್ ಅನ್ನು ಮಂಡಿಸುತ್ತಿದ್ದು, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವನ್ಯಪ್ರಾಣಿ ಹಾವಳಿ ನಿಯಂತ್ರಣ, ಕ್ರೀಡಾ ಕ್ಷೇತ್ರದ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿಗೆ ಅನುದಾನ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಅಪಾರ ನಿರೀಕ್ಷೆಗಳಿದೆ.
ಕೊಡಗು ಜಿಲ್ಲೆಯಲ್ಲಿನ ಎರಡೂ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಶಾಸಕರಿದ್ದಾರೆ. ವಿರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಎ.ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಂಬಾ ಹತ್ತಿರ ಇದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಕೂಡ ಆತ್ಮೀಯರಾಗಿದ್ದಾರೆ. ಇದರಿಂದ ಕೊಡಗು ಜಿಲ್ಲೆಗೆ ಈ ಬಾರಿಯ ಬಜೆಟ್ ನಲ್ಲಿ ಪ್ರಮುಖ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಯಿದೆ.
ಕೊಡಗು ಜಿಲ್ಲೆಯಲ್ಲಿನ ಬಹುತೇಕ ರಸ್ತೆಗಳು ಹಾನಿಗೊಳಗಾಗಿದೆ. ಕಳೆದ ಬಾರಿಯ ಬಜೆಟ್ ನಲ್ಲಿ ರಸ್ತೆಗೆ ಅನುದಾನ ದೊರಕಿತ್ತು. ಈ ಬಾರಿಯ ಬಜೆಟ್ ನಲ್ಲಿ ಕೂಡಾ ರಸ್ತೆ ಅಭಿವೃದ್ಧಿಗೆ ಮತ್ತಷ್ಟು ಅನುದಾನ ದೊರಕುವ ಬಗ್ಗೆ ಜಿಲ್ಲೆಯ ಜನರು ನಿರೀಕ್ಷೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆಳಿಲ್ಲ. ತೀರಾ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಪಕ್ಕದ ಮೈಸೂರು, ಮಂಗಳೂರಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ಆದ್ದರಿಂದ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗು ಈ ಹಿಂದಿನಿಂದಲೇ ಇದೆ. ಈ ಬಾರಿಯ ಬಜೆಟ್ ನಲ್ಲಾದರೂ ಘೋಷಣೆಯಾಗಬಹುದೆಂಬ ನಿರೀಕ್ಷೆಯಿದೆ.
ಹೆಚ್ಚಿನ ಅನುದಾನ ಒದಗಿಸುವ ನಿರೀಕ್ಷೆ:
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ಸಮಸ್ಯೆ ತಾರಕಕ್ಕೆ ಏರಿದ್ದು, ಜನರು ಕಾಡಾನೆ ದಾಳಿಗೆ ಒಳಗಾಗಿ ಮೃತಪಡುತ್ತಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟವರಿಗೆ ಸರ್ಕಾರ ಪರಿಹಾರ ನೀಡುತ್ತಿದೆ. ಆದರೆ ಈ ಸಂಘರ್ಷ ಮಾತ್ರ ನಿಂತಿಲ್ಲ. ನಿರಂತರವಾಗಿ ಸಂಘರ್ಷ ನಡೆಯುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಮಾತ್ರ ಇನ್ನೂ ಕಂಡಿಲ್ಲ. ಹೆಚ್ಚು ವೆಚ್ಚ ಆಗುವುದರಿಂದ ಅರಣ್ಯದ ಗಡಿಯ ಎಲ್ಲಾ ಕಡೆಗಳಲ್ಲಿ ರೈಲ್ವೇ ಬೇಲಿ ಅಳವಡಿಸಿಲ್ಲ. ಆದ್ದರಿಂದ ಈ ಬಾರಿಯ ಬಜೆಟ್ ನಲ್ಲಿ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸುವ ನಿರೀಕ್ಷೆಯಿದೆ.
ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು, ರಾಜ್ಯ, ರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಮೈದಾನದ ಪರಿಸ್ಥಿತಿ ತೀರಾ ಶೋಚನೀಯ ಸ್ಥಿತಿಯಲ್ಲಿದೆ ಆದ್ದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸುಸಜ್ಜಿತ ಮೈದಾನ ಆಗಬೇಕೆಂಬ ಬೇಡಿಕೆಯಿದ್ದು, ಈ ಬಾರಿ ಆಗಲಿದೆ ಎಂಬ ಭರವಸೆಯಲ್ಲಿ ಜಿಲ್ಲೆಯ ಕ್ರೀಡಾಪ್ರೇಮಿಗಳಿದ್ದಾರೆ.
ಜಿಲ್ಲೆ ಗಮನ ಸೆಳೆದಿದೆ:
ಸಾಕಷ್ಟು ಪ್ರವಾಸಿ ತಾಣಗಳ ಮೂಲಕ ಕೊಡಗು ಜಿಲ್ಲೆ ಗಮನ ಸೆಳೆದಿದೆ. ಆದರೆ ಇಂದಿಗೂ ಕೂಡ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ ವ್ಯವಸ್ಥೆ ಕೊರತೆ ಇದೆ. ಅಲ್ಲದೆ ಪ್ರವಾಸಿ ತಾಣಗಳನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುದಾನ ದೊರಕುವ ನಿರೀಕ್ಷೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮಿಗಳಿದ್ದಾರೆ.
ಕಳೆದ ಬಾರಿಯ ಕೊಡುಗೆ
ವಿರಾಜಪೇಟೆಯಲ್ಲಿ ಸುಮಾರು 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಕುಶಾಲನಗರ ತಾಲೂಕು ಆಸ್ಪತ್ರೆಯಲ್ಲಿ ನವೀಕರಿಸುವುದು, ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳ ಪುನರ್ ನಿರ್ಮಾಣಕ್ಕೆ ರು.200 ಕೋಟಿ, ಕೂಡಿಗೆ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕೆ ರು.3 ಕೋಟಿ, ಮಡಿಕೇರಿ-ದೋಣಿಗಲ್(ಎನ್ ಹೆಚ್ 75), (ಮಾದಾಪುರ-ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮಾರ್ಗ)95 ಕಿ.ಮೀ ರಸ್ತೆಯನ್ನು ಕೆ-ಶಿಪ್-4 ಯೋಜನೆಯಡಿ ರಸ್ತೆ ಅಭಿವೃದ್ಧಿ, ಬುಡಕಟ್ಟು ವಸತಿ ಶಾಲೆ 12ನೇ ತರಗತಿಯ ವರೆಗೆ ವಿಸ್ತರಣೆ ಮತ್ತಿತರ ಯೋಜನೆ ಘೋಷಣೆ ಮಾಡಲಾಗಿತ್ತು.
ಈ ಬಾರಿಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಅಪಾರ ನಿರೀಕ್ಷೆಯಿದೆ. ಈ ಬಗ್ಗೆ ಜಿಲ್ಲೆಯ ಶಾಸಕರಾದ ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರು ಸರ್ಕಾರಕ್ಕೆ ಮನವಿ ನೀಡಿದ್ದು, ಅದರಂತೆ ಪ್ರಮುಖ ಯೋಜನೆಗಳು ಕೊಡಗಿಗೆ ಘೋಷಣೆಯಾಗುವ ನಿರೀಕ್ಷೆಯಿದೆ.
-ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು
ಕೊಡಗು ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಕ್ರೀಡಾಂಗಣ ಇಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೂಡ ಇಲ್ಲ. ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟಿದೆ. ಕಾಡಾನೆ-ಮಾನವ ಸಂಘರ್ಷ ತಾರಕಕ್ಕೆ ಏರುತ್ತಿದೆ. ಆದ್ದರಿಂದ ಈ ಬಾರಿಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಬೇಕು.
-ಎಡಿಕೇರಿ ಪ್ರಸನ್ನ, ಉದ್ಯಮಿ, ಸಮಾಜ ಸೇವಕರು