
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ, ಮೇಕೆದಾಟು, ಎತ್ತಿನಹೊಳೆ, ಮತ್ತು ಭದ್ರಾ ಮೇಲ್ದಂಡೆ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ವೇಗ ನೀಡುವ ಘೋಷಣೆ ಮಾಡಲಾಗಿದೆ. ಮೇಕೆದಾಟು ಯೋಜನೆಗೆ ಕಾನೂನು ಜಯ ಸಿಕ್ಕಿರುವುದನ್ನು ಪ್ರಸ್ತಾಪಿಸಿದ್ದಾರೆ.
ಬೆಂಗಳೂರು (ಮಾ.6): “ನದಿಗಳು ನಮ್ಮ ಸಂಸ್ಕೃತಿಯ ಜೀವವಾಹಿನಿ” ಎಂಬ ಪೂರ್ಣಚಂದ್ರ ತೇಜಸ್ವಿಯವರ ನುಡಿಗಳೊಂದಿಗೆ ಜಲಸಂಪನ್ಮೂಲ ವಲಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಬಹುನಿರೀಕ್ಷಿತ ನೀರಾವರಿ ಯೋಜನೆಗಳಿಗೆ ವೇಗ ನೀಡುವ ಘೋಷಣೆ ಮಾಡಿದ್ದಾರೆ. ವಿಶೇಷವಾಗಿ ತಮಿಳುನಾಡಿನ ಕಾನೂನು ತಕರಾರುಗಳ ನಡುವೆಯೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಸಿಕ್ಕಿರುವ ಕಾನೂನು ಜಯವನ್ನು ಬಜೆಟ್‌ನಲ್ಲಿ ಎತ್ತಿ ತೋರಿಸಲಾಗಿದೆ.
ಮೇಕೆದಾಟು ಯೋಜನೆಗೆ ಸಿಕ್ಕಿತು ‘ಜಯದ’ ವೇಗ
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ಕರ್ನಾಟಕಕ್ಕೆ ಸಂದ ಮಹತ್ವದ ಜಯ ಎಂದು ಸಿಎಂ ಹೇಳಿದ್ದಾರೆ. ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿ (DPR) ಅನ್ನು ಶೀಘ್ರವೇ ಸಿದ್ಧಪಡಿಸಲಾಗುವುದು. ಅರಣ್ಯ ಪ್ರದೇಶದ ಬಳಕೆ ಮತ್ತು ಯೋಜನಾ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ
ಎತ್ತಿನಹೊಳೆ: ಎರಡನೇ ಹಂತದ ಬಾಕಿ ಇರುವ 18.73 ಕಿ.ಮೀ ಕಾಲುವೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ನೀರು ಸಂಗ್ರಹಕ್ಕಾಗಿ ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿ ಬಳಿ 1.2 ಟಿ.ಎಂ.ಸಿ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣವಾಗಲಿದೆ.
ಭದ್ರಾ ಮೇಲ್ದಂಡೆ: ಕೇಂದ್ರ ಸರ್ಕಾರ ಘೋಷಿತ 5,300 ಕೋಟಿ ರೂ. ನೀಡದಿದ್ದರೂ, ರಾಜ್ಯ ಸರ್ಕಾರವೇ 11,343 ಕೋಟಿ ರೂ. ವೆಚ್ಚ ಭರಿಸಿದೆ. 2027ರ ವೇಳೆಗೆ 135 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಪೂರ್ಣಗೊಳಿಸಿ 157 ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ.
ಉತ್ತರ ಕರ್ನಾಟಕದ ನೀರಾವರಿಗೆ ಬಂಪರ್
ಆಲಮಟ್ಟಿ ಎತ್ತರ (UKP Stage-III): ಅಣೆಕಟ್ಟನ್ನು 524.256 ಮೀಟರ್‌ಗೆ ಎತ್ತರಿಸುವ ಕಾಮಗಾರಿಯಿಂದ ಸಂತ್ರಸ್ತರಾಗುವ ರೈತರಿಗೆ ಬಂಪರ್ ಪರಿಹಾರ ಘೋಷಿಸಲಾಗಿದೆ. ಖುಷ್ಕಿ ಜಮೀನಿಗೆ ಎಕರೆಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ 40 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಈ ವರ್ಷವೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ.
ಮಹದಾಯಿ: ಕಳಸಾ-ಬಂಡೂರಾ ಯೋಜನೆಗೆ ಕೇಂದ್ರದಿಂದ ಅರಣ್ಯ ತೀರುವಳಿ ವಿಳಂಬವಾಗುತ್ತಿರುವುದಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದು, ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ.
ತುಂಗಭದ್ರಾ ಗೇಟ್ ಬದಲಾವಣೆ: ಅಣೆಕಟ್ಟಿನ ಶಿಥಿಲಗೊಂಡಿರುವ 33 ಗೇಟುಗಳನ್ನು ಮುಂಗಾರು ಪೂರ್ವದಲ್ಲೇ ಬದಲಿಸಲಾಗುವುದು. ಹೂಳಿನ ಸಮಸ್ಯೆ ನೀಗಿಸಲು ಕೊಪ್ಪಳದ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಆಂಧ್ರ ಮತ್ತು ತೆಲಂಗಾಣದೊಂದಿಗೆ ಚರ್ಚಿಸಲಾಗುವುದು.
ಇತರೆ ಪ್ರಮುಖ ಘೋಷಣೆಗಳು
ಉಡುತೊರೆಹಳ್ಳ ಯೋಜನೆ: ಚಾಮರಾಜನಗರದ ಹನೂರಿನಲ್ಲಿ 12 ಸಾವಿರ ಎಕರೆಗೆ ನೀರುಣಿಸಲು 490 ಕೋಟಿ ರೂ. ಮೊತ್ತದ ಯೋಜನೆ.
ಬಾಬಾ ನಗರ ಜಲಾಶಯ: ವಿಜಯಪುರ ಜಿಲ್ಲೆಯ ತುಬಚಿ-ಬಬಲೇಶ್ವರ ಯೋಜನೆಯಡಿ 0.67 ಟಿ.ಎಂ.ಸಿ ಸಾಮರ್ಥ್ಯದ ಜಲಾಶಯ ನಿರ್ಮಾಣಕ್ಕೆ ತಾತ್ವಿಕ ಅನುಮೋದನೆ.
ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾಲ್ಕು ನಿಗಮಗಳಡಿ ಪೂರ್ಣಗೊಳ್ಳುವ ಹಂತದಲ್ಲಿನ 12 ನೀರಾವರಿ ಯೋಜನೆಗಳು, 22 ಕೆರೆ ತುಂಬುವ ಯೋಜನೆಗಳು ಮತ್ತು ಮೂರು ಆಧುನೀಕರಣ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ 1.16 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದಿದ್ದಾರೆ. ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಇತರೆ ನದಿ ಕಣಿವೆಗಳಲ್ಲಿ ಒಟ್ಟಾರೆ 8,045 ಕೋಟಿ ರೂ. ಮೊತ್ತದ 75 ನೀರಾವರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. ರಾಜ್ಯದ ಕಾಡಾ ಪ್ರಾಧಿಕಾರದಡಿ ಹತ್ತಿಕುಣಿ ಹಾಗೂ ತುಂಗಭದ್ರಾ ಎಡದಂಡೆ ಶಾಖಾ ಕಾಲುವೆಯಡಿ ಬರುವ 4,745 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ Pressurised Piped Network ಪದ್ಧತಿಯನ್ನು ಅಳವಡಿಸಿ ನೀರಾವರಿ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು.