
ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮನಸ್ಸು ಶಾಂತವಾಗಿದ್ದರೆ ವಾಹನ ಚಾಲನೆ, ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಲು ಸಾಧ್ಯ. ಅದರಿಂದ ರಸ್ತೆ ಸುರಕ್ಷತೆ ಸಾಧ್ಯವಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರು : ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮನಸ್ಸು ಶಾಂತವಾಗಿದ್ದರೆ ವಾಹನ ಚಾಲನೆ, ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಲು ಸಾಧ್ಯ. ಅದರಿಂದ ರಸ್ತೆ ಸುರಕ್ಷತೆ ಸಾಧ್ಯವಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರಿಗೆ ಇಲಾಖೆ ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ಸೇಫ್ ಎ ಥಾನ್’ ಹೆಸರಿನ 5-ಕೆ ವಾಕಥಾನ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಪಘಾತ ಹಾಗೂ ರಸ್ತೆ ಸುರಕ್ಷತೆ
ಅಪಘಾತ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಬೇರೆಯವರನ್ನು ದೂಷಿಸುವ ಬದಲು ನಾವು ಎಚ್ಚರಿಕೆ ವಹಿಸಬೇಕು. ಬೆಂಗಳೂರಿನಂತಹ ಮಹಾ ನಗರದಲ್ಲಿ ಅವಸರ, ಗಡಿಬಿಡಿಯಿಂದಲೇ ಬಹುತೇಕ ಅಪಘಾತ ಸಂಭವಿಸುತ್ತವೆ. ನಾವು ಸ್ವಲ್ಪ ಬೇಗ ಹೊರಟರೆ ಅವಸರದ ಪ್ರಶ್ನೆಯೇ ಬರುವುದಿಲ್ಲ. ಅವಸರದಲ್ಲಿದ್ದಾಗ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ. ಅದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ರಸ್ತೆ ಸುರಕ್ಷತೆಯು ಕೇವಲ ನಿಯಮ ಪಾಲನೆಯಲ್ಲ
ಸಾರಿಗೆ ಆಯುಕ್ತ ಎ.ಎಂ. ಯೋಗೀಶ್ ಮಾತನಾಡಿ, ರಸ್ತೆ ಸುರಕ್ಷತೆಯು ಕೇವಲ ನಿಯಮ ಪಾಲನೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಅಮೂಲ್ಯ ಜೀವವನ್ನು ಉಳಿಸುವ ಒಂದು ಮಹತ್ತರ ಜವಾಬ್ದಾರಿ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಅವಸರ ಎಂಬ ಕಾರಣಕ್ಕೋ ಅಥವಾ ಶೋಕಿಗಾಗಿಯೋ ಅತಿ ವೇಗದಲ್ಲಿ ವಾಹನ ಚಲಾಯಿಸಬಾರದು. ಇದರಿಂದ ಹೆಚ್ಚಿನ ಅಪಾಘತ ಉಂಟಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಕ್ರಿಕೆಟಿಗ ಸುನೀಲ್ ಜೋಶಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಚೇತನ್ ಭಾಗವಹಿಸಿದ್ದರು.