
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸೆಂತಾಲ್ ಸಮ್ಮೇಳನ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಷ್ಟಾಚಾರದ ಸ್ವಾಗತ ನೀಡುವಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಉದ್ದೇಶಪೂರ್ವಕ ವೈಫಲ್ಯ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ.
ಸಿಲಿಗುರಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸೆಂತಾಲ್ ಸಮ್ಮೇಳನ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಷ್ಟಾಚಾರದ ಸ್ವಾಗತ ನೀಡುವಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಉದ್ದೇಶಪೂರ್ವಕ ವೈಫಲ್ಯ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ. ವಿಶೇಷವೆಂದರೆ ತೀರಾ ಅಪರೂಪ ಎಂಬಂತೆ ಸ್ವತಃ ರಾಷ್ಟ್ರಪತಿಗಳೇ ಈ ವಿಷಯದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ‘ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಟಿಎಂಸಿ ನಿಜವಾಗಿಯೂ ಎಲ್ಲಾ ಮಿತಿಗಳನ್ನು ಮೀರಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಹಾಯ್ದಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿಗರ ಹೇಳಿಕೆಗೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಬಿಜೆಪಿ ತುಂಬಾ ಕೆಳಮಟ್ಟಕ್ಕೆ ಇಳಿದಿದೆ. ಅವರು ರಾಜ್ಯಕ್ಕೆ ಕಳಂಕ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.
ಆಗಿದ್ದೇನು?:
ಶನಿವಾರ ಸೆಂತಾಲ್ ಸಮ್ಮೇಳನದಲ್ಲಿ ಭಾಗವಹಿಸಲು ರಾಷ್ಟ್ರಪತಿ ಮುರ್ಮು ಬಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ನಿಯಮದಂತೆ ರಾಷ್ಟ್ರಪತಿಗಳ ಸ್ವಾಗತಕ್ಕೆ ಮುಖ್ಯಮಂತ್ರಿ ಅಥವಾ ಸಚಿವರು ಆಗಮಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ, ಡಾರ್ಜಿಲಿಂಗ್ ಮೇಯರ್ ಗೌತಮ್ ದೇಬ್ ಅವರನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿ ಮೂಲಕ ರಾಷ್ಟ್ರಪತಿಗಳಿಗೆ ಕೋರಲಾಗಿದೆ. ಜೊತೆಗೆ, ಈ ಮೊದಲು ಬಿಧಾನನಗರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಜನದಟ್ಟಣೆ ಕಾರಣ ನೀಡಿ ರಾಜ್ಯ ಸರ್ಕಾರ ಗೋಸಾಯಿಪುರಕ್ಕೆ ಸ್ಥಳಾಂತರಿಸಿತ್ತು. ಅಲ್ಲಿಯ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಉಪಸ್ಥಿತರಿದ್ದರು. ಹೆಚ್ಚು ಜನ ಸೇರದ ಪ್ರದೇಶಕ್ಕೆ ಉದ್ದೇಶಪೂರ್ವಕವಾಗಿ ಸ್ಥಳಾಂತರಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಮುರ್ಮು ಅಸಮಾಧಾನ:
ಶಿಷ್ಟಾಚಾರ ಉಲ್ಲಂಘನೆ ಕುರಿತು ಕಾರ್ಯಕ್ರಮದ ವೇದಿಕೆಯಲ್ಲೇ ಅಸಮಾಧಾನ ಹೊರಹಾಕಿದ ಮುರ್ಮು, ‘ರಾಷ್ಟ್ರಪತಿಗಳು ಒಂದು ಸ್ಥಳಕ್ಕೆ ಭೇಟಿ ನೀಡಿದರೆ, ಸಿಎಂ, ಸಚಿವರು ಬರಬೇಕು. ಆದರೆ ಅವರು ಬರಲಿಲ್ಲ. ನಾನು ಕೂಡ ಬಂಗಾಳದ ಮಗಳು. ಮಮತಾ ದೀದಿ ಕೂಡ ನನ್ನ ಸಹೋದರಿ, ನನ್ನ ತಂಗಿ. ಅವರು ನನ್ನ ಮೇಲೆ ಕೋಪಗೊಂಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅದಕ್ಕಾಗಿಯೇ ಇದು ಸಂಭವಿಸಿರಬಹುದು’ ಎಂದಿದ್ದಾರೆ.
ಇದೇ ವೇಳೆ, ‘ಕಾರ್ಯಕ್ರಮವನ್ನು ಬಿಧಾನನಗರದಲ್ಲಿ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು. ಅಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅನೇಕ ಜನ ಹಾಜರಾಗಬಹುದಿತ್ತು. ಆದರೆ ಸರ್ಕಾರ ಅಲ್ಲಿ ಕಾರ್ಯಕ್ರಮ ನಡೆಸಲು ಏಕೆ ಅನುಮತಿ ನೀಡಲಿಲ್ಲ ಎಂದು ತಿಳಿದಿಲ್ಲ. ಜನರು ಆಗಮಿಸಲು ಕಷ್ಟಕರವಾದ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಅಸಮಾಧಾನ ತೋರಿದರು.
ನಾಚಿಕೆಗೇಡು:
ರಾಷ್ಟ್ರಪತಿಗಳ ಸ್ವಾಗತಕ್ಕೆ ಆಗಮಿಸದ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ‘ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಟಿಎಂಸಿ ನಿಜವಾಗಿಯೂ ಎಲ್ಲಾ ಮಿತಿಗಳನ್ನು ಮೀರಿದೆ’ ಎಂದು ಹರಿಹಾಯ್ದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಇದು ನಾಚಿಕೆಗೇಡಿನ ಮತ್ತು ಹಿಂದೆಂದೂ ನಡೆದಿರದಂತಹ ಘಟನೆ. ಇದರಿಂದ ಪ್ರಜಾಪ್ರಭುತ್ವ ಮತ್ತು ಬುಡಕಟ್ಟು ಸಮುದಾಯಗಳ ಸಬಲೀಕರಣದಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿರಾಶೆಗೊಂಡಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳು ವ್ಯಕ್ತಪಡಿಸಿದ ನೋವು ಮತ್ತು ಯಾತನೆ ಭಾರತದ ಜನರ ಮನಸ್ಸಿನಲ್ಲಿ ಅಪಾರ ದುಃಖವನ್ನುಂಟು ಮಾಡಿದೆ. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ನಿಜವಾಗಿಯೂ ಎಲ್ಲಾ ಮಿತಿಗಳನ್ನು ಮೀರಿದೆ’ ಎಂದು ಕಿಡಿ ಕಾರಿದ್ದಾರೆ.
ಬುಡಕಟ್ಟು ಮಹಿಳೆಗೆ ಅವಮಾನ
ಇದು ನಾಚಿಕೆಗೇಡಿನ ಮತ್ತು ಹಿಂದೆಂದೂ ನಡೆದಿರದಂತಹ ಘಟನೆ. ಇದರಿಂದ ಪ್ರಜಾಪ್ರಭುತ್ವ ಮತ್ತು ಬುಡಕಟ್ಟು ಸಮುದಾಯಗಳ ಸಬಲೀಕರಣದಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿರಾಶೆಗೊಂಡಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳು ವ್ಯಕ್ತಪಡಿಸಿದ ನೋವು ಮತ್ತು ಯಾತನೆ ಭಾರತದ ಜನರ ಮನಸ್ಸಿನಲ್ಲಿ ಅಪಾರ ದುಃಖವನ್ನುಂಟು ಮಾಡಿದೆ. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ನಿಜವಾಗಿಯೂ ಎಲ್ಲಾ ಮಿತಿಗಳನ್ನು ಮೀರಿದೆ.
ನರೇಂದ್ರ ಮೋದಿ, ಪ್ರಧಾನಿ
ವರ್ಷಕ್ಕೊಮ್ಮೆ ಬಂದರೆ ಸ್ವಾಗತಿಸುವೆ
ಬಿಜೆಪಿ ತುಂಬಾ ಕೆಳಮಟ್ಟಕ್ಕೆ ಇಳಿದಿದೆ. ಅವರು ರಾಜ್ಯಕ್ಕೆ ಕಳಂಕ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ನೀವು ವರ್ಷಕ್ಕೊಮ್ಮೆ ಬಂದರೆ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ನೀವು ಚುನಾವಣೆಯ ಸಮಯದಲ್ಲಿ ಬಂದರೆ, ನಾನು ಜನರ ಕೆಲಸಗಳಲ್ಲಿ ನಿರತಳಾಗಿರುವುದರಿಂದ ನಿಮ್ಮ ಕಾರ್ಯಕ್ರಮಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ.
ಮಮತಾ ಬ್ಯಾನರ್ಜಿ, ಬಂಗಾಳ ಸಿಎಂ