
ಜಗತ್ತು ಈಗ ಮಿಸೈಲ್, ಬಾಂಬ್ಗಳ ಮೂಲಕ ಯುದ್ಧದ ಕಾರ್ಮೋಡದಲ್ಲಿ ದಿನದೂಡುತ್ತಿದ್ದರೆ, ಕ್ರಿಕೆಟ್ ಅಭಿಮಾನಿಗಳು ಈಗ ಐಸಿಸಿ ಟಿ20 ವಿಶ್ವಕಪ್ ಸಮರದ ‘ಫೈನಲ್ ವಾರ್’ಗೆ ಸಜ್ಜಾಗಿದ್ದಾರೆ.
ಅಹಮದಾಬಾದ್: ಜಗತ್ತು ಈಗ ಮಿಸೈಲ್, ಬಾಂಬ್ಗಳ ಮೂಲಕ ಯುದ್ಧದ ಕಾರ್ಮೋಡದಲ್ಲಿ ದಿನದೂಡುತ್ತಿದ್ದರೆ, ಕ್ರಿಕೆಟ್ ಅಭಿಮಾನಿಗಳು ಈಗ ಐಸಿಸಿ ಟಿ20 ವಿಶ್ವಕಪ್ ಸಮರದ ‘ಫೈನಲ್ ವಾರ್’ಗೆ ಸಜ್ಜಾಗಿದ್ದಾರೆ. ಒಂದೆಡೆ ಸತತ 2ನೇ ಬಾರಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಆತಿಥೇಯ ಭಾರತ ತನ್ನ ತವರಿನಲ್ಲೇ ಆಡಲು ಸಜ್ಜಾಗಿದ್ದರೆ, ಹಾಲಿ ಚಾಂಪಿಯನ್ನರನ್ನು ಸದೆಬಡಿದು ಚೊಚ್ಚಲ ಕಪ್ ಗೆಲ್ಲಲು ನ್ಯೂಜಿಲೆಂಡ್ ಕಾಯುತ್ತಿದೆ. 10ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ಗೆ ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ವೇದಿಕೆ ಒದಗಿಸಿಕೊಡಲಿದೆ.
ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡೇ ಈ ಬಾರಿ ಟೂರ್ನಿಗೆ ಕಾಲಿಟ್ಟಿರುವ ಟೀಂ ಇಂಡಿಯಾ, ಫೈನಲ್ನಲ್ಲೂ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ಸದಾ ಸವಾಲೊಡ್ಡುವ ಕಿವೀಸ್ ತಂಡವೇನೂ ಸುಲಭದಲ್ಲಿ ಕಪ್ ಬಿಟ್ಟುಕೊಡುವುದಿಲ್ಲ ಎಂಬುದು ಖಚಿತ. ‘ಚಾಂಪಿಯನ್’ ಪಟ್ಟದೊಂದಿಗೇ ತವರಿಗೆ ಮರಳಲು ಕಾಯುತ್ತಿರುವ ನ್ಯೂಜಿಲೆಂಡ್, ಅಹಮದಾಬಾದ್ನಲ್ಲಿ ಭಾರತೀಯ ಪ್ರೇಕ್ಷಕರ ಸದ್ದಡಗಿಸುವ ಪಣತೊಟ್ಟಿದೆ.
ಟೀಮ್ vs ಟೀಮ್:
ಫೈನಲ್ಗೇರಿದ ಈ 2 ತಂಡಗಳ ಆಟ ಗಮನಿಸಿದರೆ ಇದು ಒಂದು ತಂಡದ ಬೌಲಿಂಗ್, ಮತ್ತೊಂದು ತಂಡದ ಬ್ಯಾಟಿಂಗ್ ಪಡೆಯ ನಡುವಿನ ಪೈಪೋಟಿ ಎನಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಉಭಯ ತಂಡಗಳೂ ಇಲ್ಲಿ ಬಲಿಷ್ಠ. ಸಂಘಟಿತ ಆಟವೇ ಫೈನಲ್ಗೇರಿದ್ದರ ಮಾನದಂಡ. ಹೀಗಾಗಿ ಪ್ರಶಸ್ತಿ ಕಾದಾಟದಲ್ಲಿ ತೀವ್ರ ಪೈಪೋಟಿ ಕಂಡುಬರುವುದಂತೂ ಖಚಿತ. ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾರನ್ನು ಹೊರತುಪಡಿಸಿ ಇತರೆಲ್ಲಾ ಬ್ಯಾಟರ್ಸ್ ಕೆಲ ಪಂದ್ಯಗಳಲ್ಲಾದರೂ ಅಬ್ಬರಿಸಿದ್ದಾರೆ. ಆರಂಭದಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್, ಶಿವಂ ದುಬೆ ಅಬ್ಬರಿಸಿದ್ದರೆ, ಈಗ ಅವರ ಜೊತೆ ಸಂಜು ಸ್ಯಾಮ್ಸನ್ ಸ್ಫೋಟಕ ಆಟವಾಡುತ್ತಿದ್ದಾರೆ. ಸಂಜು ಕಾಲಿಟ್ಟಾಗಲೇ ತಂಡದ ಚಿತ್ರಣ ಬದಲಾಗಿದ್ದು, ಬ್ಯಾಟಿಂಗ್ ಪಡೆ ಬಲಿಷ್ಠವಾಗಿ ತೋರುತ್ತಿದೆ. ಅತ್ತ ನ್ಯೂಜಿಲೆಂಡ್ನಲ್ಲಿ ಫಿನ್ ಆ್ಯಲೆನ್, ಟಿಮ್ ಸೀಫರ್ಟ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್ರಂತದ ಸ್ಫೋಟಕ ಆಟಗಾರರಿದ್ದಾರೆ.
ವಿಶ್ವ ಶ್ರೇಷ್ಠ ಆಲ್ರೌಂಡರ್ಸ್:
ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಆಲ್ರೌಂಡರ್ಗಳು ಎರಡೂ ತಂಡಗಳ ಪ್ಲಸ್ ಪಾಯಿಂಟ್. ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಹಾಗೂ ಬಲಿಷ್ಠ ಹೊಡೆತಗಳ ಮೂಲಕ ಭಾರತಕ್ಕೆ ನೆರವಾದರೆ, ಅಕ್ಷರ್ ಸ್ಪಿನ್ ದಾಳಿ ಹಾಗೂ ತಮ್ಮ ಅಮೋಘ ಫೀಲ್ಡಿಂಗ್ ಮೂಲಕ ಭಾರತಕ್ಕೆ ಆಸರೆಯಾಗುತ್ತಿದ್ದಾರೆ. ಅತ್ತ ಕಿವೀಸ್ ತಂಡದಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್, ಫಿಲಿಪ್ಸ್, ಚಾಪ್ಮನ್, ಡ್ಯಾರಿಲ್ ಸೇರಿ ಪ್ರಮುಖರಿದ್ದಾರೆ.
ಇನ್ನು, ಭಾರತದ ಸ್ಪಿನ್ ಪಡೆಯನ್ನು ಮುನ್ನಡೆಸುತ್ತಿರುವ ವಿಶ್ವ ನಂ.1 ಬೌಲರ್ ವರುಣ್ ಚಕ್ರವರ್ತಿ ಸೂಪರ್-8 ಹಂತ ಆರಂಭಗೊಂಡ ಬಳಿಕ ದುಬಾರಿಯಾಗುತ್ತಿದ್ದಾರೆ. ಓವರ್ಗೆ 11.6 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಲಯದ ಕಾರಣದಿಂದ ಅವರನ್ನು ಫೈನಲ್ ಪಂದ್ಯದಿಂದ ಹೊರಗಿಡಲಾಗುತ್ತೆಯೇ ಎಂಬ ಕುತೂಹಲವಿದೆ. ಅವರು ಆಡದಿದ್ದರೆ ಕುಲ್ದೀಪ್ಗೆ ಅವಕಾಶ ಸಿಗಬಹುದು. ಪಿಚ್ ಸ್ಪಿನ್ನರ್ಸ್ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿಲ್ಲದ ಕಾರಣ ವರುಣ್ ಬದಲು ಸಿರಾಜ್ರನ್ನು ಆಡಿಸಿದರೂ ಅಚ್ಚರಿಯಿಲ್ಲ. ಅತ್ತ ಕಿವೀಸ್ ತಂಡ ತನ್ನ ಸ್ಪಿನ್ನರ್ಗಳನ್ನು ಆರಂಭದಲ್ಲೇ ದಾಳಿಗಿಳಿಸುವುದು ಬಹುತೇಕ ಖಚಿತ. ಅಭಿಷೇಕ್ ಸ್ಪಿನ್ನರ್ಗಳನ್ನು ಎದುರಿಸಲು ಪರದಾಡುತ್ತಿದ್ದು, ಸ್ಪಿನ್ನರ್ ಮೆಕಾಂಚಿ ಮೂಲಕ ಅಭಿಷೇಕ್ರನ್ನು ಕಟ್ಟಿಹಾಕಲು ಕಿವೀಸ್ ಯೋಜಿಸುತ್ತಿದೆ.
ಬೂಮ್ರಾರ ನಿರ್ಣಾಯಕ ‘4 ಓವರ್’:
ವೇಗದ ಬೌಲಿಂಗ್ ವಿಭಾಗದಲ್ಲೂ ಉಭಯ ತಂಡಗಳು ಸರಿಸಮಾನವಾಗಿದ್ದರೂ ಜಸ್ಪ್ರೀತ್ ಬೂಮ್ರಾ ಇರುವ ಭಾರತದ್ದೇ ಇಲ್ಲಿ ಮೇಲುಗೈ. ಅವರ 4 ಓವರ್ಗಳು ಪಂದ್ಯದ ಫಲಿತಾಂಶ ನಿರ್ಧರಿಸುವಷ್ಟು ನಿರ್ಣಾಯಕ ಎನಿಸಿದೆ. ಸೆಮೀಸ್ನಲ್ಲಿ ಇಂಗ್ಲೆಂಡ್ 254 ರನ್ ಬೆನ್ನತ್ತುವಾಗ ಡೆತ್ ಓವರ್ನಲ್ಲಿ ಬೂಮ್ರಾ 2 ಓವರ್ನಲ್ಲಿ ಕೇವಲ 14 ರನ್ ನೀಡಿ ಇಂಗ್ಲೆಂಡ್ನ ಗೆಲುವನ್ನೇ ಕಸಿದಿದ್ದರು. ಈ ವಿಶ್ವಕಪ್ನಲ್ಲಿ ಅವರು 7 ಪಂದ್ಯದಲ್ಲಿ 10 ವಿಕೆಟ್ ಪಡೆದಿದ್ದಾರೆ. ಎಸೆದ 24 ಓವರ್ಗಳಲ್ಲಿ 6.62 ಎಕಾನಮಿಯಲ್ಲಿ ಕೇವಲ 144 ರನ್ ಬಿಟ್ಟುಕೊಟ್ಟಿದ್ದಾರೆ. ಟೂರ್ನಿಯ ಗರಿಷ್ಠ ವಿಕೆಟ್ ಸರದಾರರ ಪಟ್ಟಿ ಗಮನಿಸಿದರೆ ಅಗ್ರ 37 ಆಟಗಾರರಲ್ಲಿ ಬೂಮ್ರಾರ ಎಕಾನಮಿಯೇ ಕನಿಷ್ಠ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಅಭಿಷೇಕ್, ಸಂಜು, ಇಶಾನ್, ತಿಲಕ್, ಸೂರ್ಯಕುಮಾರ್(ನಾಯಕ), ಹಾರ್ದಿಕ್, ಶಿವಂ ದುಬೆ, ಅಕ್ಷರ್, ಅರ್ಶ್ದೀಪ್, ಬೂಮ್ರಾ, ವರುಣ್/ಸಿರಾಜ್/ಕುಲ್ದೀಪ್.
ನ್ಯೂಜಿಲೆಂಡ್: ಸೀಫರ್ಟ್, ಆ್ಯಲೆನ್, ರಚಿನ್, ಗ್ಲೆನ್ ಫಿಲಿಪ್ಸ್, ಚಾಪ್ಮನ್, ಡ್ಯಾರಿಲ್, ಸ್ಯಾಂಟ್ನರ್(ನಾಯಕ), ಕೋಲ್ ಮೆಕಾಂಚಿ, ನೀಶಮ್/ಡಫಿ, ಮ್ಯಾಟ್ ಹೆನ್ರಿ, ಫರ್ಗ್ಯೂಸನ್.
ಪಂದ್ಯ ಆರಂಭ: ಸಂಜೆ 7 ಗಂಟೆಗೆ
ಒಟ್ಟು ಮುಖಾಮುಖಿ: 30
ಭಾರತ: 18
ನ್ಯೂಜಿಲೆಂಡ್: 11
ಟೈ: 01
ಟಿ20 ವಿಶ್ವಕಪ್ನಲ್ಲಿ ಒಮ್ಮೆಯೂ ಕಿವೀಸ್ ವಿರುದ್ಧ ಗೆದ್ದಿಲ್ಲ ಭಾರತ!
ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಕಿವೀಸ್ ವಿರುದ್ಧ ಒಂದು ಪಂದ್ಯದಲ್ಲೂ ಗೆದ್ದಿಲ್ಲ. ಟೂರ್ನಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಎಲ್ಲಾ ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆದ್ದಿದೆ.
5ನೇ ವಿಶ್ವಕಪ್ ಮೇಲೆ ಟೀಂ ಇಂಡಿಯಾ ಕಣ್ಣು
ಭಾರತ ತಂಡ 5ನೇ ಬಾರಿ ವಿಶ್ವಕಪ್ ಗೆಲುವಿನ ನಿರೀಕ್ಷೆಯಲ್ಲಿದೆ. 1983, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿರುವ ತಂಡ, 2007, 2024ರಲ್ಲಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಬಾರಿ ಭಾರತ ಗೆದ್ದರೆ 5 ಅಥವಾ ಅದಕ್ಕಿಂತ ಹೆಚ್ಚು ವಿಶ್ವಕಪ್ ಗೆದ್ದ 2ನೇ ತಂಡ ಎನಿಸಿಕೊಳ್ಳಲಿದೆ. ಆಸ್ಟ್ರೇಲಿಯಾ 6 ಏಕದಿನ, 1 ಟಿ20 ಸೇರಿ ಒಟ್ಟು 7 ವಿಶ್ವಕಪ್ ಗೆದ್ದಿದೆ.
ಟಿ20 ವಿಶ್ವಕಪ್ನಲ್ಲಿ ಸಾಧನೆ
ಭಾರತ
ವರ್ಷ ಸಾಧನೆ
2007 ಚಾಂಪಿಯನ್
2009 ಸೂಪರ್-8
2010 ಸೂಪರ್-8
2012 ಸೂಪರ್-8
2014 ರನ್ನರ್-ಅಪ್
2016 ಸೆಮಿಫೈನಲ್
2021 ಸೂಪರ್-12
2022 ಸೆಮಿಫೈನಲ್
2024 ಚಾಂಪಿಯನ್
2026 ?
ನ್ಯೂಜಿಲೆಂಡ್
ವರ್ಷ ಸಾಧನೆ
2007 ಸೆಮಿಫೈನಲ್
2009 ಸೂಪರ್-8
2010 ಸೂಪರ್-8
2012 ಸೂಪರ್-8
2014 ಸೂಪರ್-10
2016 ಸೆಮಿಫೈನಲ್
2021 ರನ್ನರ್-ಅಪ್
2022 ಸೆಮಿಫೈನಲ್
2024 ಗುಂಪು ಹಂತ
2026 ?
02ನೇ ಬಾರಿ
ನ್ಯೂಜಿಲೆಂಡ್ ತಂಡ 2ನೇ ಬಾರಿ ಟಿ20 ವಿಶ್ವಕಪ್ ಫೈನಲ್ ಆಡುತ್ತಿದೆ. 2021ರ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.
04ನೇ ಬಾರಿ
ಭಾರತಕ್ಕಿದು 4ನೇ ಟಿ20 ವಿಶ್ವಕಪ್ ಫೈನಲ್. 2007, 2024ರಲ್ಲಿ ಚಾಂಪಿಯನ್, 2014ರಲ್ಲಿ ರನ್ನರ್-ಅಪ್ ಆಗಿದೆ.
‘ಪ್ರೇಕ್ಷಕರ ಸದ್ದಗಿಸುತ್ತೇವೆ’:
2023ರಲ್ಲಿ ಪ್ಯಾಟ್ ಕಮಿನ್ಸ್,
ಈ ಸಲ ಸ್ಯಾಂಟ್ನರ್ ಹೇಳಿಕೆ!
ಅಹಮದಾಬಾದ್ನಲ್ಲೇ ನಡೆದಿದ್ದ 2023ರ ಏಕದಿನ ವಿಶ್ವಕಪ್ ಫೈನಲ್ಗೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮಾತನಾಡಿ, ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಸದ್ದಡಗಿಸುವುದಾಗಿ ಹೇಳಿದ್ದರು. ಹೇಳಿದಂತೆಯೇ ಆಸೀಸ್ ಚಾಂಪಿಯನ್ ಆಗಿತ್ತು. ಭಾರತೀಯ ಅಭಿಮಾನಿಗಳು ಸೈಲೆಂಟ್ ಆಗಿದ್ದರು. ಈ ಬಾರಿ ಅದೇ ಕ್ರೀಡಾಂಗಣದಲ್ಲಿ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡಾ ಕಮಿನ್ಸ್ ರೀತಿ ಹೇಳಿಕೆ ನೀಡಿದ್ದಾರೆ. ‘ಭಾರತ ತಂಡಕ್ಕೆ ತವರಿನಲ್ಲೇ ಕಪ್ ಗೆಲ್ಲುವ ಒತ್ತಡದಲ್ಲಿ ಆಡಲಿದೆ. ಪ್ರೇಕ್ಷಕರನ್ನು ಸದ್ದಡಗಿಸುವುದು ನಮ್ಮ ಗುರಿ’ ಎಂದು ಅವರು ಹೇಳಿದ್ದಾರೆ.
₹27.58 ಕೋಟಿ
ಚಾಂಪಿಯನ್ ತಂಡಕ್ಕೆ ₹27.58 ಕೋಟಿ ನಗದು ಬಹುಮಾನ ಸಿಗಲಿದೆ.
₹14.70 ಕೋಟಿ
ರನ್ನರ್-ಅಪ್ ತಂಡಕ್ಕೆ ಸಿಗಲಿರುವ ನಗದು ಬಹುಮಾನ ₹14.70 ಕೋಟಿ.
ಅದ್ಧೂರಿ ಸಮಾರಂಭ
ಫೈನಲ್ಗೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 5.30ಕ್ಕೆ ಸಮಾರಂಭ ಆರಂಭಗೊಳ್ಳಲಿದೆ. ಖ್ಯಾತ ಗಾಯಕ ರಿಕಿ ಮಾರ್ಟಿನ್, ಬಾಲಿವುಡ್ ಹಾಗೂ ಪಂಜಾಬಿ ಗಾಯಕಿ ಸುಖ್ಬೀರ್, ಗುಜರಾತಿ ಗಾಯಕಿ ಫಲ್ಗುಣಿ ಪಾಠಕ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಲಿದ್ದಾರೆ.
ಭಾರತ:
ಪ್ರಾಬಲ್ಯ:
ಸ್ಫೋಟಕ ಬ್ಯಾಟರ್ಸ್ ಪಡೆ
ಬೂಮ್ರಾ ಮಾರಕ ದಾಳಿ
ದೌರ್ಬಲ್ಯ
ಕಳಪೆ ಲಯದಲ್ಲಿ ಅಭಿಷೇಕ್
ದುಬಾರಿ ಆಗುತ್ತಿರುವ ವರುಣ್
ನ್ಯೂಜಿಲೆಂಡ್
ಆ್ಯಲೆನ್, ಸೀಫರ್ಟ್ ಅಬ್ಬರ
ವಿಶ್ವ ಶ್ರೇಷ್ಠ ಸ್ಪಿನ್ನರ್ಗಳು
ಕುಸಿಯಬಲ್ಲ ಬ್ಯಾಟಿಂಗ್ ಪಡೆ
ದುಬಾರಿಯಾಗಬಲ್ಲ ವೇಗಿಗಳು