
ಬಿಹಾರದ ಗೋಪಾಲ್ಗಂಜ್ನಲ್ಲಿ, ತನ್ನ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಕ್ಕೆ ಯುವತಿಯೊಬ್ಬಳು ಮೊಬೈಲ್ ಟವರ್ ಏರಿ ಪ್ರತಿಭಟಿಸಿದ್ದಾಳೆ. ಶೋಲೆ ಸಿನಿಮಾದ ದೃಶ್ಯವನ್ನು ನೆನಪಿಸುವ ಈ ಘಟನೆಯಲ್ಲಿ, ಪೊಲೀಸರು ಪ್ರಿಯಕರನನ್ನು ಸ್ಥಳಕ್ಕೆ ಕರೆತಂದ ನಂತರವೇ ಯುವತಿ ಕೆಳಗೆ ಇಳಿದಿದ್ದಾಳೆ.
ಪ್ರಿಯಕರನ ಬಿಡುಗಡೆಗಾಗಿ ಮೊಬೈಲ್ ಟವರ್ ಏರಿದ ಯುವತಿ
ರಿಯಲ್ ಲೈಫ್ ಜೋಡಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ನಟಿಸಿದ ಶೋಲೆ ಸಿನಿಮಾ ಬಿಡುಗಡೆಯಾಗಿ 50 ವರ್ಷಗಳಿಗೂ ಅಧಿಕ ಸಮಯ ಕಳೆದರೂ, ಅದರ ಪ್ರಭಾವ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಈ ಸಿನಿಮಾದಲ್ಲಿ ಬಸಂತಿ ಮೇಲಿನ ಪ್ರೀತಿಗಾಗಿ ವೀರು ನೀರಿನ ಟ್ಯಾಂಕ್ ಏರಿದಂತಹ ದೃಶ್ಯವಿದೆ. ಇದಾದ ನಂತರ ವರ್ಷಗಳಲ್ಲಿ ಅನೇಕ ಪ್ರೇಮಿಗಳು ಮೊಬೈಲ್ ಟವರ್, ನೀರಿನ ಟ್ಯಾಂಕ್ ಕಟ್ಟಡದ ಕೊನೆ ಮಹಡಿಯನ್ನು ಏರುತ್ತಲೇ ಇದ್ದಾರೆ. ಅನೇಕರ ಪಾಲಿಗೆ ಇದು ಕೆಲಸ ಮಾಡಿದರೆ ಇನ್ನೂ ಕೆಲವರಿಗೆ ಕಂಬಿ ಹಿಂದೆ ಕೂರುವಂತೆ ಮಾಡಿದವು. ಇದೇ ಪ್ರಯೋಗವನ್ನು ಈಗ ಬಿಹಾರದ ಗೋಪಾಲ್ಗಂಜ್ನ ಯುವತಿಯೊಬ್ಬಳು ಮಾಡಿದ್ದು, ಇದು ಕೆಲ ಗಂಟೆಗಳ ಹೈಡ್ರಾಮಾಗೆ ಕಾರಣವಾಯ್ತು. ಪ್ರಿಯಕರನಿಗಾಗಿ ಇಲ್ಲಿ ಯುವತಿಯೊಬ್ಬಳು ಮೊಬೈಲ್ ಟವರ್ ಏರಿದ್ದಳು.
ಗೋಪಾಲ್ಗಂಜ್ ಜಿಲ್ಲೆಯಲ್ಲಿ 20 ವರ್ಷದ ಮಹಿಳೆಯೊಬ್ಬರು ಮೊಬೈಲ್ ಟವರ್ ಹತ್ತಿ ತನ್ನ ಪ್ರಿಯಕರನ ಬಿಡುಗಡೆಗಾಗಿ ಒತ್ತಾಯಿಸಿದಳು. ತನ್ನ ಕುಟುಂಬದವರು ನೀಡಿದ ನೀಡಿದ ದೂರಿನ ಮೇರೆಗೆ ಪೊಲೀಸರು ತನ್ನ ಪ್ರಿಯಕರನನ್ನು ಬಂಧಿಸಿದ್ದಾರೆ. ಕೂಡಲೇ ಅವನನ್ನು ಬಿಡುಗಡೆ ಮಾಡಬೇಕು ಎಂದು ಆಕೆ ಆಗ್ರಹಿಸಿದ್ದಳು. ಸಂಜಯ್ ಗೊಂಡ್ ಅವರ ಪುತ್ರಿ ಅರ್ಪಿತಾ ಕುಮಾರಿ, ಸ್ಥಳೀಯ ಯುವಕ ಪವನ್ ಚೌಹಾಣ್ ಜೊತೆ ಬಹಳ ದಿನಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಗುರುವಾರ ರಾತ್ರಿ ಅರ್ಪಿತಾ ಮನೆಯಿಂದ ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರು ಆಕೆಗಾಗಿ ಹುಡುಕಾಡಿದ್ದಾರೆ. ಆಕೆ ಸಿಗದೇ ಹೋದಾಗ ಪವನ್ ಆಕೆಯನ್ನು ಅಪಹರಿಸಿರಬಹುದು ಎಂದು ಶಂಕಿಸಿ ಭೋರೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ದೂರಿನ ಮೇರೆಗೆ ಪೊಲೀಸರು ಪವನ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದರು. ಇದರಿಂದ ಧೃತಿಗೆಟ್ಟ ಯುವತಿ ಅರ್ಪಿತಾ ಕುಮಾರಿ ಮೊಬೈಲ್ ಟವರ್ ಏರಿ ಪ್ರಿಯಕರನ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 40 ವರ್ಷ ಹಿಂದೆ ಮೃತಪಟ್ಟ ಯೋಧನ ಕಳೇಬರಕ್ಕಾಗಿ ಇಸ್ರೇಲ್ ಬೆಚ್ಚಿ ಬೀಳಿಸುವ ಕಾರ್ಯಾಚರಣೆ
ಶುಕ್ರವಾರ ಬೆಳಗ್ಗೆ ಬಂಕಟ ಜಾಗಿರ್ದಾರಿ ಗ್ರಾಮದಲ್ಲಿ ಯುವತಿಯೊಬ್ಬಳು ಮೊಬೈಲ್ ಟವರ್ ಹತ್ತಿದ್ದಾಳೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಅರ್ಪಿತಾ ಟವರ್ ಮೇಲೆ ಇರುವುದನ್ನು ಕಂಡು ಕೆಳಗೆ ಬರುವಂತೆ ಒತ್ತಾಯಿಸಿದರು. ಆದರೆ ಅರ್ಪಿತಾ ಆಕೆ ಕೆಳಗೆ ಇಳಿಯಲು ನಿರಾಕರಿಸಿ, ತನ್ನ ಗೆಳೆಯ ಪವನ್ನನ್ನು ಬಿಡುಗಡೆ ಮಾಡಬೇಕು ಮತ್ತು ಇಬ್ಬರಿಗೂ ಮದುವೆಯಾಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು
ಕೈಕೋಳ ಹಾಕಿ ಪ್ರಿಯಕರನ ಸ್ಥಳಕ್ಕೆ ಕರೆತಂದ ಪೊಲೀಸರು
ಪೊಲೀಸರು ಮತ್ತು ಗ್ರಾಮಸ್ಥರು ಪದೇ ಪದೇ ವಿನಂತಿಸಿದರೂ, ಅರ್ಪಿತಾ ಟವರ್ನಿಂದ ಕೆಳಗೆ ಇಳಿಯಲು ಒಪ್ಪಲಿಲ್ಲ, ಗಲಾಟೆ ಮುಂದುವರಿದಂತೆ, ಪೊಲೀಸರು ಕೊನೆಗೂ ಕೈಕೋಳದಲ್ಲಿದ್ದ ಪವನ್ನನ್ನು ಸ್ಥಳಕ್ಕೆ ಕರೆತಂದರು. ಅವನನ್ನು ನೋಡಿದ ನಂತರವೇ ಅರ್ಪಿತಾ ಕೆಳಗೆ ಇಳಿಯಲು ಒಪ್ಪಿಕೊಂಡರು. ನಂತರ ಮಹಿಳೆಯ ಕುಟುಂಬವು ಪೊಲೀಸ್ ಠಾಣೆಗೆ ಬಂದು ಮನೆಗೆ ಮರಳುವಂತೆ ಅರ್ಪಿತಾ ಕುಮಾರಿಯನ್ನು ಮನವೊಲಿಸಲು ಪ್ರಯತ್ನಿಸಿತು, ಆದರೆ ಆಕೆ ನಿರಾಕರಿಸಿ ಪವನ್ ಜೊತೆ ಮದುವೆ ಆಗಲು ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆಕೆಯ ಕುಟುಂಬ ಸದಸ್ಯರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಎರಡೂ ಕಡೆಯವರಿಗೆ ಪೊಲೀಸರು ಸಲಹೆ ನೀಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಭೋರೆ ಪೊಲೀಸ್ ಠಾಣೆಯ ಅಧಿಕಾರಿ ರೋಹಿಣಿ ಉಪಾಧ್ಯಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲೀಗ ಜಲಯುದ್ಧ: ಇಸ್ರೇಲ್ಗೆ 20000 ಅಮೆರಿಕ ಬಾಂಬ್: ಸೌದಿಯಲ್ಲಿ ಇರಾನ್ ದಾಳಿಗೆ ಭಾರತೀಯ ಬಲಿ