Headlines

ಕರ್ನಾಟಕ ಸರ್ಕಾರಿ ವೈದ್ಯರ ಬೇಡಿಕೆಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ, ಸಂಧಾನ ಸಭೆ ಯಶಸ್ವಿ, ಒಪಿಡಿ ಸೇವೆ ಬಂದ್? | Karnataka Government Agrees To Key Demands Of Government Doctors Decision On Strike Yet To Be Finalized Gdp

ಕರ್ನಾಟಕ ಸರ್ಕಾರಿ ವೈದ್ಯರ ಬೇಡಿಕೆಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ, ಸಂಧಾನ ಸಭೆ ಯಶಸ್ವಿ, ಒಪಿಡಿ ಸೇವೆ ಬಂದ್? | Karnataka Government Agrees To Key Demands Of Government Doctors Decision On Strike Yet To Be Finalized Gdp



ಕರ್ನಾಟಕ ಸರ್ಕಾರಿ ವೈದ್ಯರ ಬೇಡಿಕೆಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ, ಸಂಧಾನ ಸಭೆ ಯಶಸ್ವಿ, ಒಪಿಡಿ ಸೇವೆ ಬಂದ್? | Karnataka Government Agrees To Key Demands Of Government Doctors Decision On Strike Yet To Be Finalized Gdp

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರಕ್ಕೆ ಸಜ್ಜಾಗಿದ್ದರು. ಸರ್ಕಾರದೊಂದಿಗೆ ನಡೆದ ಸಂಧಾನ ಸಭೆಯಲ್ಲಿ, ಕೆಲವು ಬೇಡಿಕೆಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಉಳಿದವುಗಳನ್ನು ಕಾಲಮಿತಿಯೊಳಗೆ ಈಡೇರಿಸುವ ಭರವಸೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಷ್ಕರದ ಕುರಿತು ವೈದ್ಯರ ಸಂಘ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಬೆಂಗಳೂರು: ರಾಜ್ಯದ ಸರ್ಕಾರಿ ವೈದ್ಯಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಸಜ್ಜಾಗಿದ್ದ ಹಿನ್ನೆಲೆಯಲ್ಲಿ, ಸರ್ಕಾರ ಹಾಗೂ ವೈದ್ಯರ ಸಂಘದ ನಡುವೆ ನಡೆದ ಸಂಧಾನ ಸಭೆಯಲ್ಲಿ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಉಳಿದ ಬೇಡಿಕೆಗಳನ್ನು ನಿಗದಿತ ಕಾಲಮಿತಿಯೊಳಗೆ ಈಡೇರಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿರುವುದರಿಂದ ಪರಿಸ್ಥಿತಿ ಕೆಲ ಮಟ್ಟಿಗೆ ಶಮನಗೊಂಡಿದೆ.

ವೈದ್ಯಾಧಿಕಾರಿಗಳ ಪ್ರಮುಖ ಬೇಡಿಕೆಗಳಲ್ಲಿ ಕೆಲವು ವಿಚಾರಗಳಿಗೆ ಸರ್ಕಾರ ಒಪ್ಪಿಗೆ ನೀಡಿದ್ದು, ವಿಶೇಷವಾಗಿ ಕೇಂದ್ರ ಪುರಸ್ಕೃತ ಯೋಜನೆಯಡಿ ಕೆಲಸ ಮಾಡುತ್ತಿರುವ ಸುಮಾರು 6 ಸಾವಿರ ನೌಕರರಿಗೆ ಪ್ರತಿತಿಂಗಳ ಮೊದಲ ವಾರದಲ್ಲೇ ವೇತನ ಮತ್ತು ಭತ್ಯೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಇದಲ್ಲದೆ, ಮುಂಬಡ್ತಿ ನೀಡುವ ವಿಚಾರ ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಸಹ ಸರ್ಕಾರ ಸಮ್ಮತಿ ವ್ಯಕ್ತಪಡಿಸಿದೆ.

ಪ್ರತಿಭಟನೆ ನಡೆಯುತ್ತದೆಯೇ?

ಈ ನಡುವೆ ವೈದ್ಯರ ಸಂಘದ ಮುಷ್ಕರ ಪ್ರತಿಭಟನೆ ಮುಂದುವರಿಸಬೇಕೋ ಅಥವಾ ಕೈ ಬಿಡಬೇಕೋ ಎಂಬ ಕುರಿತು ವೈದ್ಯಾಧಿಕಾರಿಗಳಲ್ಲಿ ಚರ್ಚೆ ಮುಂದುವರಿದಿದೆ. ಸರ್ಕಾರದಿಂದ ಬಂದಿರುವ ಭರವಸೆಗಳ ಬಗ್ಗೆ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ವೈದ್ಯಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಸಜ್ಜಾಗಿದ್ದ ಹಿನ್ನೆಲೆಯಲ್ಲಿ, ನಾಳೆಯಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ (ಒಪಿಡಿ) ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದ್ದರು. ಇದರಿಂದ ರಾಜ್ಯದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳ ಬಗ್ಗೆ ಸರ್ಕಾರವೂ ಎಚ್ಚೆತ್ತುಕೊಂಡಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸರ್ಕಾರ ಸಂಧಾನಕ್ಕೆ ಮುಂದಾಗಿದ್ದು, ಮೊದಲ ಹಂತದ ಸಭೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದಿತ್ತು. ಆದರೆ ಆ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರವಾಗದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮತ್ತೊಂದು ಸುತ್ತಿನ ಮಹತ್ವದ ಸಭೆಯನ್ನು ಕರೆಯಲಾಯಿತು.

ಎರಡು ಗಂಟೆಗಳ ಕಾಲ ನಡೆದ ಸಭೆ

ವಿಧಾನಸೌಧದಲ್ಲಿ ನಡೆದ ಈ ಸಭೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ಹೆಚ್.ಸಿ. ಮಹದೇವಪ್ಪ ಅವರು ನೇತೃತ್ವ ವಹಿಸಿದ್ದರು. ಈ ಸಭೆಯಲ್ಲಿ ವೈದ್ಯರ ಸಂಘದ ಅಧ್ಯಕ್ಷ ರವೀಂದ್ರ ಮೇಟಿ, ರಾಜ್ಯ ಸರ್ಕಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸತತವಾಗಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ವೈದ್ಯರ ವಿವಿಧ ಬೇಡಿಕೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ವೈದ್ಯರು ಮುಷ್ಕರವನ್ನು ಕೈ ಬಿಡುವಂತೆ ಮನವೊಲಿಸಲು ಸಚಿವರಾದ ಹೆಚ್.ಸಿ. ಮಹದೇವಪ್ಪ ಮತ್ತು ದಿನೇಶ್ ಗುಂಡೂರಾವ್ ಅವರು ಹಲವು ಪ್ರಯತ್ನಗಳನ್ನು ನಡೆಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿಗಳ ಸಂಘದ ಮುಖಂಡರು, ತಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸುವುದರ ಕುರಿತು ಸರ್ಕಾರ ಸ್ಪಷ್ಟ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ಸರ್ಕಾರ ಕೆಲವು ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರೂ, ಉಳಿದ ಬೇಡಿಕೆಗಳ ಕುರಿತು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ಈ ಬೆಳವಣಿಗೆಗಳ ನಡುವೆ, ವೈದ್ಯರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಮುಂದಿನ ಹಂತದ ಹೋರಾಟ ಅಥವಾ ಮುಷ್ಕರ ಹಿಂಪಡೆಯುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ವೈದ್ಯರ ನಿರ್ಧಾರ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸೇವೆಯ ಮೇಲೂ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಲ್ಲರ ಗಮನ ಈಗ ಆ ನಿರ್ಧಾರದತ್ತ ನೆಟ್ಟಿದೆ.



Source link

Leave a Reply

Your email address will not be published. Required fields are marked *