
ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ, ಮತ್ತೆ ಆತಂಕ ಹೆಚ್ಚಾಗಿದೆ. ಇರಾನ್ ದೇಶದ ಟಿವಿಯ ವರದಿ ಇದೀಗ ಮತ್ತೆ ಕೋಲಾಹಲ ಸೃಷ್ಟಿಸಿದೆ. ಇಷ್ಟೇ ಅಲ್ಲ ಯುದ್ಧ ತೀವ್ರಗೊಳ್ಳೋ ಆತಂಕ ಎದುರಾಗಿದೆ.
ಟೆಹ್ರಾನ್ (ಮಾ.10): ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿಯನ್ನು ಇಸ್ರೇಲ್ ಆರಂಭದಲ್ಲೇ ಹತ್ಯೆ ಮಾಡಿದೆ. ಇರಾನ್ ಮೇಲಿನ ಆಕ್ರಣದಲ್ಲಿ ಮೊದಲ ಟಾರ್ಗೆಟ್ ಆಗಿದ್ದ ಆಯತೊಲ್ಲ ಖಮೇನಿ ದುರಂತ ಅಂತ್ಯಕಂಡಿದ್ದರು. ಇದಾದ ಬೆನ್ನಲ್ಲೇ ಇರಾನ್ ಸರ್ವೋಚ್ಚ ನಾಯಕನಾಗಿ ಮಜ್ತೊಬಾ ಖಮೇನಿಯನ್ನು ನೇಮಕ ಮಾಡಿದೆ. ಅಮರಿಕ ಆಸ್ತಕ್ತಿ ವಿರುದ್ಧವಾಗಿ ನಡೆದ ಈ ಆಯ್ಕೆ ಬೆನ್ನಲ್ಲೇ ಇಸ್ರೇಲ್ ನೂತನ ನಾಯಕನ ಹತ್ಯೆ ಮಾಡುವುದಾಗಿ ಎಚ್ಚರಿಸಿತ್ತು. ಇದೀಗ ಇರಾನ್ ದೇಶದ ಟಿವಿ ನೂತನ ನಾಯಕ ಮಜ್ತೊಬಾ ಖಮೇನಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ವರದಿ ಮಾಡಿದೆ.
ರಂಜಾನ್ನ ಜನ್ಬಾಝ್
ಇರಾನ್ನ ಸರ್ಕಾರಿ ಟಿವಿಯೇ ಮುಜ್ತಬಾ ಅವರನ್ನು ‘ರಂಜಾನ್ನ ಜನ್ಬಾಝ್’ ಎಂದು ಕರೆದಿದೆ. ‘ಜನ್ಬಾಝ್’ ಅಂದರೆ ‘ಯುದ್ಧದಲ್ಲಿ ಗಾಯಗೊಂಡ ಯೋಧ’ ಅಂತ ಅರ್ಥ. ಇರಾನ್ನ ‘ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್’ 56 ವರ್ಷದ ಮುಜ್ತಬಾ ಖೊಮೇನಿ ಅವರನ್ನು ದೇಶದ ಹೊಸ ನಾಯಕನನ್ನಾಗಿ ನೇಮಿಸಿದ ಬೆನ್ನಲ್ಲೇ ಈ ರೀತಿ ವರದಿಗಳು ಬಂದಿವೆ.
ಮುಜ್ತಬಾ ಖೊಮೇನಿ ಅವರು ಅಧಿಕಾರ ವಹಿಸಿಕೊಂಡ ಸುದ್ದಿಯನ್ನು ಇರಾನ್ ಚಾನೆಲ್ಗಳು ವರದಿ ಮಾಡುವಾಗ, ‘ಶತ್ರುಗಳ ದಾಳಿಯಲ್ಲಿ ಅವರು ಗಾಯಗೊಂಡಿದ್ದಾರೆ’ ಎಂದು ವಿವರಿಸಿವೆ ಅಂತ ‘ದಿ ಟೈಮ್ಸ್ ಆಫ್ ಇಸ್ರೇಲ್’ ಪತ್ರಿಕೆ ಮಾರ್ಚ್ 9 ರಂದು ವರದಿ ಮಾಡಿದೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನೇನೂ ನೀಡಿಲ್ಲ. ಅಯತೊಲ್ಲಾ ಅಲಿ ಖೊಮೇನಿ ಅವರನ್ನು ಫೆಬ್ರವರಿ 28 ರಂದು ಹತ್ಯೆ ಮಾಡಲಾಗಿತ್ತು. ಮಾರ್ಚ್ 8 ರ ಹೊತ್ತಿಗೆ ಮುಜ್ತಬಾ ಅವರನ್ನು ಹೊಸ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಜೊತೆ ನಿಕಟ ಸಂಬಂಧ ಹೊಂದಿರುವ ಮುಜ್ತಬಾ, ತನ್ನ ತಂದೆಯ ಕಠಿಣ ನಿಲುವುಗಳನ್ನೇ ಮುಂದುವರಿಸುತ್ತಾರೆ ಎಂದು ಅಂದಾಜಿಸಲಾಗಿದೆ.
ಮುಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ
ಮುಜ್ತಬಾ ಖೊಮೇನಿ ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಿಡಿಯೋ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿಲ್ಲ. ಇದರಿಂದ ಮುಜ್ತಬಾ ಅವರ ಆರೋಗ್ಯದ ಬಗ್ಗೆ ದೊಡ್ಡ ಚರ್ಚೆಗಳೇ ನಡೆಯುತ್ತಿವೆ. ಅಯತೊಲ್ಲಾ ಅಲಿ ಖೊಮೇನಿ ಹತ್ಯೆಯಾದ ದಾಳಿಯಲ್ಲೇ ಮುಜ್ತಬಾ ಅವರಿಗೂ ಗಾಯಗಳಾಗಿರಬಹುದು ಎಂಬ ವದಂತಿ ಬಲವಾಗಿದೆ. ‘ಇರಾನ್ನ ಹೊಸ ನಾಯಕನನ್ನು ಇನ್ನೂ ಯಾರೂ ನೋಡಿಲ್ಲ. ಒಂದು ಫೋಟೋ, ವಿಡಿಯೋ ಅಥವಾ ಹೇಳಿಕೆ ಕೂಡ ಬಂದಿಲ್ಲ’ ಎಂದು ಶ್ರೀಲಂಕಾದ ವೀಕ್ಷಕ ಶಾನಕ ಅನ್ಸೆಲಂ ಪೆರೇರಾ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ಮುಜ್ತಬಾ ಅವರನ್ನು ಇರಾನ್ನ ಸರ್ವೋಚ್ಚ ನಾಯಕನಾಗಿ ನೇಮಿಸಿದ ನಂತರ, ಸಾವಿರಾರು ಜನರು ಟೆಹ್ರಾನ್ನ ಬೀದಿಗಳಲ್ಲಿ ಸೇರಿ ಅವರಿಗೆ ಬೆಂಬಲ ಸೂಚಿಸಿದರು. ಆದರೆ, ಕೆಲವು ಕಡೆಗಳಲ್ಲಿ ಮುಜ್ತಬಾ ವಿರುದ್ಧ ಪ್ರತಿಭಟನಾ ಘೋಷಣೆಗಳೂ ಕೇಳಿಬಂದಿವೆ ಎಂದು ಬಿಬಿಸಿ ವರದಿ ಮಾಡಿದೆ.
ಇದೆಲ್ಲದರ ಮಧ್ಯೆ, ಮುಜ್ತಬಾ ಖೊಮೇನಿ ಅವರ ನೇಮಕವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಮುಜ್ತಬಾ ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ‘ಇರಾನ್ ಸರ್ಕಾರದ ಕ್ರೌರ್ಯವನ್ನು ಮುಂದುವರಿಸಲು ಬಂದಿರುವ ಮತ್ತೊಬ್ಬ ಸರ್ವಾಧಿಕಾರಿ’ ಎಂದು ಇಸ್ರೇಲ್, ಮುಜ್ತಬಾ ಅವರನ್ನು ಬಣ್ಣಿಸಿದೆ. ಒಟ್ಟಿನಲ್ಲಿ, ತೀವ್ರ ಯುದ್ಧ ನಡೆಯುತ್ತಿರುವ ಈ ಸಮಯದಲ್ಲಿ ಮುಜ್ತಬಾ ಅವರ ಗೈರುಹಾಜರಿ ಇರಾನ್ ಸರ್ಕಾರದೊಳಗೆ ದೊಡ್ಡ ಆತಂಕಕ್ಕೆ ಕಾರಣವಾಗಿದೆ ಎಂದು ವರದಿಗಳು ಹೇಳುತ್ತಿವೆ.