ಗೃಹ ಸಚಿವರ ಕ್ಷೇತ್ರದಲ್ಲೇ ಮೌಢ್ಯ: ಮುಟ್ಟಾದ ಹೆಣ್ಣುಮಕ್ಳು ಬಂದರೆ ದೇವಿಗೆ ಕೋಪವಂತೆ; 69 ಲಕ್ಷದ ಸರ್ಕಾರಿ ಹಾಸ್ಟೆಲ್ ಈಗ ಭೂತ ಬಂಗಲೆ! | Superstition In Karnataka Hm Own Constituency 69 Lakh Koratagere Govt Hostel Now A Ghost House

ಗೃಹ ಸಚಿವರ ಕ್ಷೇತ್ರದಲ್ಲೇ ಮೌಢ್ಯ: ಮುಟ್ಟಾದ ಹೆಣ್ಣುಮಕ್ಳು ಬಂದರೆ ದೇವಿಗೆ ಕೋಪವಂತೆ; 69 ಲಕ್ಷದ ಸರ್ಕಾರಿ ಹಾಸ್ಟೆಲ್ ಈಗ ಭೂತ ಬಂಗಲೆ! | Superstition In Karnataka Hm Own Constituency 69 Lakh Koratagere Govt Hostel Now A Ghost House


ಕೊರಟಗೆರೆಯ ಅಕ್ಕಿರಾಂಪುರದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಕಸ್ತೂರಿಬಾ ಬಾಲಕಿಯರ ವಿದ್ಯಾರ್ಥಿನಿಲಯ’ವು ಕಳೆದ 8 ವರ್ಷಗಳಿಂದ ಪಾಳುಬಿದ್ದಿದೆ. ಋತುಮತಿ ಹೆಣ್ಣುಮಕ್ಕಳಿಂದ ದೇವಿಗೆ ‘ಅಂಟುಮುಂಟು’ ತಟ್ಟುತ್ತದೆ ಎಂಬ ಮೌಢ್ಯದಿಂದಾಗಿ ಪೋಷಕರು ಮಕ್ಕಳನ್ನು ಕಳುಹಿಸಲು ನಿರಾಕರಿಸುತ್ತಿದ್ದಾರೆ. 

ತುಮಕೂರು (ಮಾ.11): ಆಧುನಿಕ ಯುಗದಲ್ಲೂ ಮೌಢ್ಯವೊಂದು ಸರ್ಕಾರಿ ಯೋಜನೆಯನ್ನೇ ನುಂಗಿ ಹಾಕಿದ ಆಘಾತಕಾರಿ ಘಟನೆ ಗೃಹ ಸಚಿವ ಜಿ. ಪರಮೇಶ್ವರ್ ಅವರ ಕ್ಷೇತ್ರವಾದ ಕೊರಟಗೆರೆಯಲ್ಲೇ ನಡೆದಿರುವುದು ಬೆಳಕಿಗೆ ಬಂದಿದೆ. ತಾಲ್ಲೂಕಿನ ಅಕ್ಕಿರಾಂಪುರದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ‘ಕಸ್ತೂರಿಬಾ ಬಾಲಕಿಯರ ವಿದ್ಯಾರ್ಥಿನಿಲಯ’ ನಿರ್ಮಿಸಲಾಗಿತ್ತು. ಆದರೆ ಕೇವಲ ಮೌಢ್ಯದ ಭೀತಿಯಿಂದಾಗಿ ಕಳೆದ 8 ವರ್ಷಗಳಿಂದ ಪಾಳು ಬಿದ್ದಿದೆ. ಗ್ರಾಮ ದೇವತೆಗೆ ‘ಅಂಟುಮುಂಟು’ ತಟ್ಟುತ್ತದೆ ಎಂಬ ಭಯಕ್ಕೆ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಮುಟ್ಟಾದ ಮಹಿಳೆಯರು ಇತ್ತ ಸುಳಿಯಬಾರದಂತೆ!

ಈ ವಿದ್ಯಾರ್ಥಿನಿಲಯದ ಸಮೀಪದಲ್ಲೇ ಪ್ರಸಿದ್ಧ ‘ಏಳೂಮಂದೆಮ್ಮ’ ದೇವಸ್ಥಾನವಿದೆ. ದೇವಸ್ಥಾನದ ಆಸುಪಾಸಿನಲ್ಲಿ ಋತುಸ್ರಾವವಾದ (ಮುಟ್ಟಾದ) ಹೆಣ್ಣು ಮಕ್ಕಳು ಅಥವಾ ಬಾಣಂತಿಯರು ಸಂಚರಿಸಿದರೆ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಎಂಬುದು ಗ್ರಾಮಸ್ಥರ ಗಾಢ ನಂಬಿಕೆ. ಒಂದು ವೇಳೆ ನಿಯಮ ಮೀರಿ ಸಂಚರಿಸಿದರೆ ದೇವಿ ಮುನಿಸಿಕೊಳ್ಳುತ್ತಾಳೆ ಮತ್ತು ಗ್ರಾಮಕ್ಕೆ ಅನಾಹುತ ಸಂಭವಿಸುತ್ತದೆ ಎಂಬ ಭಯದಿಂದಾಗಿ ಇಡೀ ಹಾಸ್ಟೆಲ್ ಈಗ ಭೂತಬಂಗಲೆಯಂತಾಗಿದೆ.

ಮುಸ್ಲಿಂ ಮಹಿಳೆಯರು ಕೂಡ ಇತ್ತ ಸುಳಿಯಲ್ಲ!

ವಿಶೇಷವೆಂದರೆ, ಈ ನಂಬಿಕೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಈ ಜಾಗದಲ್ಲಿ ಸಂಚರಿಸಲು ಹಿಂದೂ ಮತ್ತು ಮುಸ್ಲಿಂ ಧರ್ಮದ ಮಹಿಳೆಯರಿಬ್ಬರೂ ಭಯಪಡುತ್ತಾರೆ. ಜಿಲ್ಲಾ ಪಂಚಾಯತ್ ಮತ್ತು ಶಿಕ್ಷಣ ಇಲಾಖೆಯ 69 ಲಕ್ಷ ರೂಪಾಯಿ ವಿಶೇಷ ಅನುದಾನದಲ್ಲಿ ಗ್ರಾಮೀಣ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಈ ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಎಂಟು ವರ್ಷಗಳೇ ಕಳೆದರೂ ಒಬ್ಬೇ ಒಬ್ಬ ವಿದ್ಯಾರ್ಥಿನಿ ಇಲ್ಲಿಗೆ ಕಾಲಿಟ್ಟಿಲ್ಲ. ಅತ್ತ ಸರ್ಕಾರಿ ಸೌಲಭ್ಯವೂ ಇಲ್ಲ, ಇತ್ತ ವಿದ್ಯಾರ್ಥಿನಿಯರಿಗೂ ಆಸರೆಯಿಲ್ಲದೆ ಕಟ್ಟಡ ಹಾಳು ಸುರಿಯುತ್ತಿದೆ.

ಜಾಗೃತಿ ಮೂಡಿಸಿದರೂ ಗ್ರಾಮಸ್ಥರು ಬದಲಾಗಿಲ್ಲ:

ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಹಲವು ಬಾರಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹಾಸ್ಟೆಲ್ ಅನ್ನು ಇಲ್ಲಿಂದ ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. 

ಮೌಢ್ಯ ನಿವಾರಣೆ ಮಾಡಲು ಹೋದ ಅಧಿಕಾರಿಗಳಿಗೆ ಈಗ ಈ ಕಟ್ಟಡವನ್ನು ಶಿಫ್ಟ್ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರ್ಕಾರದ ಅಭಿವೃದ್ಧಿ ಯೋಜನೆಯೊಂದು ಜನರ ನಂಬಿಕೆಯೋ, ಮೂಢನಂಬಿಕೆಯ ನಡುವಿನ ಈ ಸಂಘರ್ಷದಿಂದಾಗಿ ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ವ್ಯರ್ಥವಾಗುತ್ತಿದೆ.



Source link

Leave a Reply

Your email address will not be published. Required fields are marked *