
ತಾಯಿಗೆ ಯಕೃತ್ತು ದಾನ ಮಾಡಿದ ಮಗ ಶಸ್ತ್ರಚಿಕಿತ್ಸೆಯ ನಂತರ ಸೋಂಕಿನಿಂದ ಮೃತಪಟ್ಟಿದ್ದಾನೆ. ಇತ್ತ ತಾಯಿ ಚೇತರಿಸಿಕೊಂಡಿದ್ದು, ಮಗನ ಸಾವು ತಿಳಿದು ಆಘಾತಕ್ಕೀಡಾಗಿದ್ದಾರೆ. ಇದೇ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿತ್ತು ಉಪನ್ಯಾಸಕಿಯೊಬ್ಬರು ಯಕೃತ್ತು ದಾನ ಮಾಡಿ ಪ್ರಾಣ ಕಳೆದುಕೊಂಡಿದ್ದರು..
ಅಮ್ಮನಿಗೆ ತನ್ನ ಮಕ್ಕಳ ಮೇಲಿರುವ ಪ್ರೀತಿಯ ಮುಂದೆ ಎಲ್ಲವೂ ನಶ್ವರ. ಆಕೆ ತಮ್ಮ ಮಕ್ಕಳ ಖುಷಿಗಾಗಿ ಏನು ಬೇಕಾದರೂ ಮಾಡಬಲ್ಲಳು ಜೀವವನ್ನೇ ಬಿಡಬಲ್ಲಳು. ಆದರೆ ಇಲ್ಲೊಂದು ಕಡೆ ಅಮ್ಮನ ಜೀವ ಉಳಿಸುವುದಕ್ಕೆ ಹೋಗಿ ಮಗನ ಪ್ರಾಣ ಹೋಗಿದೆ. ಹೌದು ಅಮ್ಮನಿಗಾಗಿ ಯಕೃತ್ತು(Liver)ದಾನ ಮಾಡಿದ ಮಗನೊಬ್ಬ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳದೇ ಪ್ರಾಣ ಬಿಟ್ಟಿದ್ದಾನೆ. ಇತ್ತ ಅಮ್ಮ ಮಗ ನೀಡಿದ ಲಿವರ್ನಿಂದ ಗುಣಮುಖರಾಗಿದ್ದು, ಮಗನ ಸಾವನ್ನು ಅರಗಿಸಿಕೊಳ್ಳಲಾಗದೇ ಸಂಕಟ ಪಡುತ್ತಿದ್ದಾರೆ.
ಹೌದು ತಾವು ಜೀವಂತವಿರುವಾಗ ಯಾರು ಕೂಡ ತಮ್ಮ ಕರುಳ ಕುಡಿಗಳ ಸಾವನ್ನು ನೋಡುವುದಕ್ಕೆ ಇಷ್ಟಪಡುವುದಿಲ್ಲ, ಮಕ್ಕಳಿಗೆ ಅನಾರೋಗ್ಯವಾದಾಗ ಕಿಡ್ನಿ, ಯಕೃತ್ನಂತಹ ಸಮಸ್ಯೆ ಕಾಡಿದಾಗ ಪೋಷಕರೇ ಮಕ್ಕಳಿಗೆ ತಮ್ಮ ದೇಹದ ಒಂದು ಭಾಗವನ್ನು ದಾನ ನೀಡಿದಂತಹ ನಿದರ್ಶನಗಳಿವೆ. ಆದರೆ ಇಲ್ಲಿ ಎದೆಯೆತ್ತರಕ್ಕೆ ಬೆಳೆದು ನಿಂತ ಮಗ ಅಮ್ಮನ ಜೀವ ಉಳಿಸುವುದಕ್ಕೆ ಹೋಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಇತ್ತ ಆತನ ಲಿವರ್ ದಾನ ಪಡೆದಿರುವ ತಾಯಿಗೆ ಇದರಿಂದ ಜೀವವೇ ಬಾಯಿಗೆ ಬಂದಂತಾಗಿದೆ. ಒಂದು ವೇಳೆ ಇದರಿಂದ ಮಗನ ಜೀವವೇ ಹೋಗಬಹುದು ಎಂಬ ಸಣ್ಣ ಶಂಕೆ ಬಂದಿದ್ದರೂ ಆಕೆ ಈ ಆಪರೇಷನ್ಗೆ ಒಪ್ಪಿಕೊಳ್ಳುತ್ತಿರಲಿಲ್ಲವೇನೋ. ಆದರೆ ಮಗನ ಕಳೆದುಕೊಳ್ಳುವ ಆಕೆಯ ಹಣೆಬರಹವನ್ನು ಯಾರು ತಾನೇ ಅಳಿಸಲು ಸಾಧ್ಯ.
ಅಂದಹಾಗೆ ಈ ಮನಕಲುಕುವ ಘಟನೆ ನಡೆದಿರೋದು ಪಾಕಿಸ್ತಾನದಲ್ಲಿ. ಪಾಕಿಸ್ತಾನದ ಸರ್ಗೋಧಾ ನಿವಾಸಿಯಾದ ಉಮರ್ ಫಾರೂಕ್ ಬಜ್ವಾ ಅವರ ತಾಯಿಗೆ ಲಿವರ್ನಲ್ಲಿ ಸಮಸ್ಯೆಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಈ ತಿಂಗಳ ಆರಂಭದಲ್ಲಿ ತಮ್ಮ ಯಕೃತ್ನ ಒಂದು ಭಾಗವನ್ನು ತಾಯಿಗೆ ದಾನ ನೀಡಲು ಪುತ್ರ ಉಮರ್ ಫಾರೂಕ್ ನಿರ್ಧರಿಸಿದ್ದರು. ಇವರು ನೀಡಿದ ಯಕೃತ್ತಿನ ದಾನದಿಂದ ತಾಯಿಯೇನೋ ಚೇತರಿಸಿಕೊಂಡರು. ಆದರೆ ಮಗ ಮಾತ್ರ ಆಸ್ಪತ್ರೆಯಿಂದ ವಾಪಸ್ ಬರಲೇ ಇಲ್ಲ. ಯಕೃತ್ನ ದಾನದ ನಂತರ ಉಂಟಾದ ಸೋಂಕಿನಿಂದಾಗಿ ಉಮರ್ ಫಾರೂಕ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದು, ಇತ್ತ ಆತನ ತಾಯಿಯ ಸ್ಥಿತಿ ನೆನೆದು ಅನೇಕರು ಮರುಕಪಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಯುವಕನ ತ್ಯಾಗದ ಬಗ್ಗೆ ಸಾಕಷ್ಟು ಪೋಸ್ಟ್ಗಳು ವೈರಲ್ ಆಗುತ್ತಿದ್ದು, ಅನೇಕರು ಆಘಾತ ವ್ಯಕ್ತಪಡಿಸಿದ್ದು, ತಾಯಿಗೆ ದೇವರು ಈ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲು ಎಂದು ಬೇಡುತ್ತಿದ್ದಾರೆ.
ಜೀವಂತವಾಗಿರುವಾಗಲೇ ನೀಡುವ ಯಕೃತ್ನ ದಾನವೂ ಅಂತ್ಯಂತ ಅಪಾಯಕಾರಿಯಾಗಿದೆ. ತುಸು ಹೆಚ್ಚು ಕಡಿಮೆಯಾದರೂ ದಾನಿಯ ಜೀವವೇ ಹೋಗಿ ಬಿಡಬಹುದು. 2024ರಲ್ಲಿ ಮಂಗಳೂರಿನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ತಮ್ಮನ್ನು ಬಹಳ ಪ್ರೀತಿಸುತ್ತಿದ್ದ ಪತಿಯ ಸಂಬಂಧಿಯೊಬ್ಬರಿಗೆ ಲಿವರ್ ದಾನ ನೀಡುವುದಕ್ಕೆ ಹೋಗಿ ಯುವ ಉಪನ್ಯಾಸಕಿ ಅರ್ಚನಾ ಕಾಮತ್ ಅವರು ಸಾವನ್ನಪ್ಪಿದ್ದರು. ಈ ಘಟನೆ ಅರ್ಚನಾ ಕುಟುಂಬವನ್ನು ಮಾತ್ರವಲ್ಲದೇ ಅವರ ಸಾವಿರಾರು ವಿದ್ಯಾರ್ಥಿಗಳು ಸ್ನೇಹಿತರು ಆತ್ಮೀಯರನ್ನು ತೀವ್ರ ಅಘಾತ ಹಾಗೂ ದುಃಖಕ್ಕೀಡು ಮಾಡಿತ್ತು.
ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅವರು ಬಳಿಕ ನಗರದ ಹೊರವಲಯದ ಮಣೇಲ್ ಶ್ರೀನಿವಾಸ ನಾಯಕ್ ಎಂಬಿಎ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅರ್ಚನಾ ಅವರು ಪತಿ ಸಿಎ ಚೇತನ್ ಕುಮಾರ್ ಹಾಗೂ ನಾಲ್ಕು ವರ್ಷದ ಪುತ್ರನನ್ನು ಅಗಲಿದ್ದರು. ತನ್ನ ಪತಿಯ ಸಂಬಂಧಿ ಮಹಿಳೆಗೆ ಅನಾರೋಗ್ಯ ಉಂಟಾಗಿದ್ದು, ಅವರಿಗೆ ಲಿವರ್ನ ಅಗತ್ಯವಿತ್ತು. ಅವರಿಗೆ ಲಿವರ್ ದಾನ ಮಾಡಲೆಂದು ಹಲವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ತಪಾಸಣೆಗೆ ಒಳಪಟ್ಟವರ ಪೈಕಿ ಯಾರೊಬ್ಬರ ರಕ್ತದ ಗುಂಪು ಕೂಡ ಹೊಂದಾಣಿಕೆಯಾಗಿರಲಿಲ್ಲ. ಆದರೆ ಉಪನ್ಯಾಸಕಿ ಅರ್ಚನಾರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗಾಗಿ ಅರ್ಚನಾ ಲಿವರ್ ಭಾಗದ ದಾನಕ್ಕೆ ಒಪ್ಪಿದ್ದರು. ಆದರೆ ಆ ಮಹಿಳೆ ಚೇತರಿಸಿಕೊಂಡರೆ ಅರ್ಚನಾ ಸಾವನ್ನಪ್ಪಿದ್ದರು.