
ಎಲ್‌ಪಿಜಿ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ನಗರದ ಬಹುತೇಕ ಪಿ.ಜಿ ಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ವಾರಕ್ಕೆ ಐದು ದಿನ ಮಾತ್ರ ಆಹಾರ ಪೂರೈಸಲು ಪಿ.ಜಿ. ಮಾಲೀಕರ ಸಂಘ ನಿರ್ಧರಿಸಿದೆ.
ಬೆಂಗಳೂರು : ಎಲ್‌ಪಿಜಿ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ನಗರದ ಬಹುತೇಕ ಪಿ.ಜಿ ಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ವಾರಕ್ಕೆ ಐದು ದಿನ ಮಾತ್ರ ಆಹಾರ ಪೂರೈಸಲು ಪಿ.ಜಿ. ಮಾಲೀಕರ ಸಂಘ ನಿರ್ಧರಿಸಿದೆ.
ಅಲ್ಲದೇ, ಸಮರ್ಪಕ ಗ್ಯಾಸ್ ಪೂರೈಕೆಯಾಗುವವರೆಗೆ ಹೆಚ್ಚು ಗ್ಯಾಸ್ ಬಳಕೆಯಾಗುವ ದೋಸೆ, ಪೂರಿ, ಚಪಾತಿ, ಮಾಂಸಾಹಾರ ಮತ್ತಿತರ ಆಹಾರ ಪದಾರ್ಥಗಳನ್ನು ಕೈಬಿಡಲು ನಿರ್ಧರಿಸಲಾಗಿದೆ.
ಎಲ್ಲರಂತೆ ಪಿ.ಜಿ,ಗಳಿಗೂ ಸಮಸ್ಯೆ ಆಗಿದೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಎಲ್ಲರಂತೆ ಪಿ.ಜಿ,ಗಳಿಗೂ ಸಮಸ್ಯೆ ಆಗಿದೆ. ಹೀಗಾಗಿ, ನೀಡುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. ಸಾವಿರಾರು ಪಿ.ಜಿಗಳಲ್ಲಿ ಲಕ್ಷಾಂತರ ಜನ ನೆಲೆಸಿದ್ದಾರೆ. ದೂರದ ಊರುಗಳಿಂದ ಬಂದವರ ಊಟಕ್ಕೆ ತೊಂದರೆಯಾಗಬಾರದು ಎಂದು ಅನ್ನ ಸಾಂಬರ್ ಮತ್ತು ರೈಸ್ ಬಾತ್‌ನಂತಹ ಊಟ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಗ್ಯಾಸ್ ಸಮಸ್ಯೆ ಹೀಗೆ ಮುಂದುವರಿದರೆ ಮುಂಜಾಗ್ರತ ಕ್ರಮವಾಗಿ ವಿದ್ಯುತ್ ಸ್ಟೌ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ನಮ್ಮ ಕೈಯಲ್ಲಿ ಇಲ್ಲ ಎಂದು ಅರುಣ್ ಹೇಳಿದ್ದಾರೆ.
ಪಿ.ಜಿಗಳಿಗೆ ಸಂಘದಿಂದ ಮಾರ್ಗಸೂಚಿಗಳು-
ದಿನಕ್ಕೆ ಎರಡು ಊಟ ಮಾತ್ರ : ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಕೇವಲ ಎರಡು ಬಾರಿ ಮಾತ್ರ ಊಟ.
– ದೋಸೆ, ಪೂರಿ, ಚಪಾತಿ ಮುಂತಾದ ಗ್ಯಾಸ್ ಹೆಚ್ಚು ಬೇಕಾಗುವ ಆಹಾರಗಳನ್ನು ತಯಾರಿಸುವಂತಿಲ್ಲ.
- ಪಿ.ಜಿ ವಾಸಿಗಳು ರೂಮ್‌ಗಳಲ್ಲಿ ಗ್ಯಾಸ್ ಬಳಸಿಕೊಂಡು ಆಹಾರ ತಯಾರು ಮಾಡುವಂತಿಲ್ಲ.
– ಎಲೆಕ್ಟ್ರಿಕ್ ರೈಸ್ ಕುಕ್ಕರ್ ಬಳಸಲು ಉತ್ತೇಜಿಸುವುದು.
– ಅಕ್ಕ-ಪಕ್ಕದ ಪಿ.ಜಿಗಳು ಸೇರಿ ಒಂದೆಡೆ ಆಹಾರ ತಯಾರಿಸಿ ಪರಸ್ಪರರ ನಡುವೆ ಹಂಚಿಕೊಳ್ಳುವುದು.