
ಬೆಂಗಳೂರಿನಿಂದ ದುಬೈಗೆ ಬಸ್ ಇದೆಯೇ ಎಂದು ಯುವಕ-ಯುವತಿಯರಿಬ್ಬರು ಬಿಎಂಟಿಸಿ ಚಾಲಕನಿಗೆ ಕೇಳುವ ವಿಡಿಯೋವೊಂದು ವೈರಲ್ ಆಗಿದೆ. ಚಾಲಕನು ಗಂಭೀರವಾಗಿಯೇ ಮೆಜೆಸ್ಟಿಕ್ನಿಂದ ದುಬೈಗೆ ಬಸ್ ಸಿಗುತ್ತದೆ ಎಂದು ಮಾರ್ಗದರ್ಶನ ನೀಡಿರುವುದು ನೆಟ್ಟಿಗರಲ್ಲಿ ನಗು ಉಕ್ಕಿಸಿದೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಿಂಗಪುರಕ್ಕೆ ಬಸ್ ಇರುವುದು ಬೆಂಗಳೂರಿಗರಿಗೆ ಗೊತ್ತೇ ಇದೆ. ಹಾಗೆಂದು ಇದು ವಿದೇಶದ ಸಿಂಗಪುರ ಅಲ್ಲ ಮತ್ತೆ. ಒಂದು ಪ್ರದೇಶದ ಹೆಸರು ಸಿಂಗಪುರ. ಆದರೆ ಇದನ್ನು ಹಲವು ಬಾರಿ ತಮಾಷೆಯಾಗಿ ಬಳಕೆ ಮಾಡುವುದು ಉಂಟು. ಮೆಜೆಸ್ಟಿಕ್ನಿಂದ ಸಿಂಗಪುರಕ್ಕೆ ಬಿಎಂಟಿಸಿ ಬಸ್ ಇದೆ ಎಂದು ಹೇಳಿದಾಗ ಹೊರಗಿನವರು ಶಾಕ್ ಆಗುವುದು ಇದೆ. ಆದರೆ ಇಲ್ಲಿ ಹೇಳ್ತಿರೋದು ಬೆಂಗಳೂರಿನಲ್ಲಿ ಇರುವ ಸಿಂಗಪುರ ಅಲ್ಲ, ಆದರೆ ವಿದೇಶವೇ ಆಗಿರುವ ದುಬೈ ಬಗ್ಗೆ. ಇರಾನ್, ಇಸ್ರೇಲ್, ಅಮೆರಿಕದ ಸಂಘರ್ಷದ ನಡುವೆ ದುಬೈ ಕೂಡ ಈಗ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಅಲ್ಲಿಯೇ ಯುದ್ಧದ ಭೀತಿ ಎದುರಾಗಿದೆ.
ಬೆಂಗಳೂರಿನಿಂದ ದುಬೈಗೆ ಬಸ್
ಇದರ ನಡುವೆಯೇ, ಬೆಂಗಳೂರಿನಿಂದ ದುಬೈಗೆ ಬಸ್ ಸಂಚಾರ ಇದೆ ಎನ್ನುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರನ್ನು ನಕ್ಕು ನಗಿಸುತ್ತಿದೆ. miss__entertainer ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ರೀಲ್ಸ್ ಮಾಡುವ ಯುವಕ ಮತ್ತು ಯುವತಿ ಇಬ್ಬರು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿರುವ ಬಸ್ ಒಂದರ ಡ್ರೈವರ್ಗೆ ಇದು ದುಬೈಗೆ ಹೋಗತ್ತಾ ಎಂದು ಪ್ರಶ್ನಿಸಿದ್ದಾರೆ. ಮೊದಲಿಗೆ ಡ್ರೈವರ್ಗೆ ಶಿವಾಜಿನಗರ ಎಂದು ಕೇಳಿಸಿದೆ. ಆಮೇಲೆ ದುಬೈಗೆ ಎಂದಾಗ ಈ ಬಸ್ ಹೋಗಲ್ಲಾ ಎಂದಿದ್ದಾರೆ. ಆಗ ಯುವತಿ, ಇದು ಬಸ್ ತಾನೆ, ಹೋಗಲ್ವಾ ಎಂದು ಪ್ರಶ್ನಿಸಿದಾಗ, ಇದು ಬಸ್ಸೇ ಆದರೆ ದುಬೈಗೆ ಹೋಗಲ್ಲ ಎಂದಿದ್ದಾರೆ.
ಯುವತಿ ಪ್ರಶ್ನೆ
ನಮಗೆ ಅಲ್ಲಿ ಇರುವ ಒಬ್ಬರು ಈ ಬಸ್ ದುಬೈಗೆ ಹೋಗತ್ತೆ ಎಂದರು. ನೀವು ನೋಡಿದ್ರೆ ಹೋಗಲ್ಲ ಅನ್ನುತ್ತಿದ್ದೀರಿ, ಹಾಗಿದ್ದರೆ ಯಾವ ಬಸ್ ದುಬೈಗೆ ಹೋಗುತ್ತದೆ ಎಂದು ಏನೂ ಅರಿಯದವರ ಹಾಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಆ ಡ್ರೈವರ್, ನೋಡಿ ನೀವು ಆ ಫ್ಲ್ಯಾಟ್ಫಾರ್ಮ್ಗೆ ಹೋಗಿ. ಅಲ್ಲಿ ಮೆಜೆಸ್ಟಿಕ್ಗೆ ಹೋಗುವ ಬಸ್ಗಳು ಸಿಗುತ್ತವೆ. ಆ ಬಸ್ ಹತ್ತಿ, ಅಲ್ಲಿ ನಿಮಗೆ ದುಬೈ ಬಸ್ ಸಿಗುತ್ತದೆ ಎಂದಿದ್ದಾರೆ.
ಮಾರ್ಗದರ್ಶನ ಮಾಡಿದ ಡ್ರೈವರ್
ಅರೆ ಕ್ಷಣ ನಗು ಬಂದರೂ ತಡೆದುಕೊಂಡು ಈ ಇಬ್ಬರು ಕಿತಾಪತಿಗಳು, ಹೌದಾ, ನಿಜಕ್ಕೂ ಮೆಜೆಸ್ಟಿಕ್ನಿಂದ ದುಬೈಗೆ ಹೋಗುವ ಬಸ್ ಸಿಗುತ್ತದಾ ಎಂದು ಪ್ರಶ್ನಿಸಿದಾಗ, ಡ್ರೈವರ್ ಹೌದು. ನೀವು ಅಲ್ಲಿ ಬಸ್ ಚೇಂಜ್ ಮಾಡಬೇಕಾಗುತ್ತದೆ ಎಂದೆಲ್ಲಾ ಮಾರ್ಗದರ್ಶನ ಕೊಟ್ಟಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಲೇ ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಡ್ರೈವರ್ ಇಲ್ಲಿ ಜೋಕ್ ಮಾಡಿದಂತೆ ಕಾಣಿಸುತ್ತಿಲ್ಲ. ನಿಜಕ್ಕೂ ಅವರು ಬೆಂಗಳೂರಿನಲ್ಲಿ ದುಬೈ ಎನ್ನುವ ಪ್ರದೇಶ ಇದೆ ಎಂದು ಅಂದುಕೊಂಡರೋ ಗೊತ್ತಿಲ್ಲ. ಸಿಂಗಪುರದಂತೆಯೇ ದುಬೈ ಎನ್ನುವ ಸ್ಥಳವೂ ಇರಬಹುದು ಎಂದುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಬೆಂಗಳೂರಿನಿಂದ ದುಬೈಗೆ ಅದೂ ಬಿಎಂಟಿಸಿ ಬಸ್ ಹೋಗುತ್ತದೆ ಎನ್ನುವುದೇ ವಿಶೇಷ.