
ಮೂರು ಬಾರಿ ಮಹಿಳೆಯೊಬ್ಬರು ಮನೆ ಮುಂದೆ ಓಡಾದಿದ್ದಾಳೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಈಕೆ ಮಕ್ಕಳ ಕಳ್ಳತನಕ್ಕೆ ಬಂದಿದ್ದಾಳೆ ಎಂದು ಭಾವಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ಆದರೆ, ಅಮಾಯಕ ಕೂಲಿಕ ಕಾರ್ಮಿಕ ಮಹಿಳೆ ನೋವಿನಲ್ಲಿ ನರಳಾಡಿ, ಪೊಲೀರು ಬಂದ ನಂತರ ಜೀವ ಉಳಿಸಿಕೊಂಡು ಹೋಗಿದ್ದಾಳೆ.
ಬೀದರ್ (ಮಾ.12): ಕಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಹಬ್ಬುತ್ತಿರುವ ‘ಮಕ್ಕಳ ಕಳ್ಳರು ಊರಿಗೆ ಬಂದಿದ್ದಾರೆ’ ಎಂಬ ಕಿಡಿಗೇಡಿಗಳ ಸುಳ್ಳು ವದಂತಿಯು ಈಗ ಮಹಿಳೆಯೊಬ್ಬರ ಮೇಲೆ ಅಮಾನವೀಯ ಹಲ್ಲೆಗಳಿಗೆ ನಾಂದಿ ಹಾಡಿದೆ. ಕೇವಲ ಶಂಕೆಯ ಆಧಾರದ ಮೇಲೆ ಮಹಿಳೆಯೊಬ್ಬಳನ್ನು ಅಟ್ಟಾಡಿಸಿ ಹೊಡೆದು, ಕೂದಲು ಜಗ್ಗಿ, ಮುಖಕ್ಕೆ ಒದ್ದು ವಿಕೃತಿ ಮೆರೆದಿರುವ ಭೀಕರ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ?:
ಮಹಾರಾಷ್ಟ್ರ ಮೂಲದ ಉಷಾ ಎಂಬ ಮಹಿಳೆ ತನ್ನ ಕುಟುಂಬದೊಂದಿಗೆ ಕಬ್ಬು ಕಟಾವು ಮಾಡುವ ಕೆಲಸಕ್ಕಾಗಿ ಘಾಟಬೋರಾಳ ಗ್ರಾಮಕ್ಕೆ ಬಂದಿದ್ದರು. ಕಬ್ಬಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅವರು, ಅಡುಗೆಗೆ ಮಟನ್ ತರುವ ಉದ್ದೇಶದಿಂದ ಗ್ರಾಮದ ಮಾರುಕಟ್ಟೆಗೆ ಬಂದಿದ್ದರು. ಈ ವೇಳೆ ಅವರ ವೇಷಭೂಷಣ ಮತ್ತು ಭಾಷೆಯನ್ನು ಗಮನಿಸಿದ ಗ್ರಾಮಸ್ಥರು, ಈಕೆ ‘ಮಕ್ಕಳ ಕಳ್ಳಿ’ ಇರಬೇಕು ಎಂದು ಸುಳ್ಳು ಶಂಕೆ ವ್ಯಕ್ತಪಡಿಸಿದ್ದಾರೆ.
ಅಮಾನುಷ ಹಲ್ಲೆ, ವಿಕೃತಿಯ ಪರಾಕಾಷ್ಠೆ:
ಯಾವುದೇ ವಿಚಾರಣೆ ನಡೆಸದೆ, ಕೇವಲ ವದಂತಿಯನ್ನು ನಂಬಿದ ಗ್ರಾಮಸ್ಥರು ಉಷಾ ಅವರ ಮೇಲೆ ಮುಗಿಬಿದ್ದಿದ್ದಾರೆ. ಜನರ ಗುಂಪಿಗೆ ಸಿಲುಕಿದ ಮಹಿಳೆಯ ಕೂದಲನ್ನು ಜಗ್ಗಿ ಎಳೆದಾಡಿದ್ದಲ್ಲದೆ, ಮುಖಕ್ಕೆ ಒದ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ರಕ್ತಸಿಕ್ತವಾಗಿ ಅಂಗಲಾಚುತ್ತಿದ್ದರೂ ಬಿಡದ ಗ್ರಾಮಸ್ಥರು, ಅವರನ್ನು ಹಿಡಿದು ಗ್ರಾಮ ಪಂಚಾಯತ್ ಆವರಣದ ಕೊಠಡಿಯೊಂದರಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿದ್ದಾರೆ.
ಪೊಲೀಸರ ಮಧ್ಯಪ್ರವೇಶ – ಅಸಲಿ ಸತ್ಯ ಬಹಿರಂಗ:
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹುಮನಾಬಾದ್ ಪೊಲೀಸರು, ಹಲ್ಲೆಗೊಳಗಾದ ಮಹಿಳೆಯನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಸ್ಪಷ್ಟನೆ ನೀಡಿದ್ದು, ‘ಹಲ್ಲೆಗೊಳಗಾದ ಮಹಿಳೆ ಯಾವುದೇ ಮಕ್ಕಳ ಕಳ್ಳಿ ಅಲ್ಲ. ಆಕೆ ಕೇವಲ ಕಬ್ಬು ಕಟಾವು ಮಾಡಲು ಬಂದಿದ್ದ ಕಾರ್ಮಿಕ ಮಹಿಳೆ. ಗ್ರಾಮಸ್ಥರು ಸುಳ್ಳು ವದಂತಿಯನ್ನು ನಂಬಿ ಈ ಕೃತ್ಯ ಎಸಗಿದ್ದಾರೆ’ ಎಂದು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಗುಂಪು ಹಲ್ಲೆಗಳು:
ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲೇ ಇದು ಮೂರನೇ ಘಟನೆಯಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳನ್ನು ನಂಬಿ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅಪರಿಚಿತರು ಅಥವಾ ಭಿಕ್ಷುಕರನ್ನು ಕಂಡರೆ ಸಾಕು, ಯಾವುದೇ ವಿಚಾರಣೆ ಮಾಡದೆ ಗುಂಪು ಹಲ್ಲೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪೊಲೀಸರ ಎಚ್ಚರಿಕೆ:
ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮಕ್ಕಳ ಕಳ್ಳರು ಎಂಬ ಬಗ್ಗೆ ಅನುಮಾನವಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ವದಂತಿ ನಂಬಿ ಅಮಾಯಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಘಾಟಬೋರಾಳ ಗ್ರಾಮದಲ್ಲಿ ಹಲ್ಲೆ ನಡೆಸಿದ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಈಗ ಜಾಲ ಬೀಸಿದ್ದಾರೆ.