ಕೆಪಿಎಸ್ಸಿ ನಡೆಸಿದ 384 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಒಂದೇ ಕೊಠಡಿಯ 11 ಅಭ್ಯರ್ಥಿಗಳು ಪಾಸಾಗಿದ್ದರಿಂದ ಅಕ್ರಮದ ಆರೋಪ ಕೇಳಿಬಂದಿತ್ತು. ಸುವರ್ಣ ನ್ಯೂಸ್ ವರದಿ ಹಾಗೂ ಸಾರ್ವಜನಿಕ ಒತ್ತಡಕ್ಕೆ ಮಣಿದ ಆಯೋಗವು ಸಂದರ್ಶನ ಮತ್ತು ದಾಖಲೆ ಪರಿಶೀಲನೆಯನ್ನು ಅಧಿಕೃತವಾಗಿ ಹಿಂಪಡೆದಿದೆ.
ಬೆಂಗಳೂರು (ಮಾ.12): ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ನಿರಂತರವಾಗಿ ನಡೆಸಿದ ವರದಿಗಾರಿಕೆಗೆ ದೊಡ್ಡ ಜಯ ಸಿಕ್ಕಿದೆ. ಪರೀಕ್ಷಾ ಅಕ್ರಮದ ಕಪ್ಪುಚುಕ್ಕೆ ಅಂಟಿಕೊಂಡಿದ್ದ 384 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳ ಸಂದರ್ಶನ ಹಾಗೂ ದಾಖಲೆ ಪರಿಶೀಲನೆಯ ದಿನಾಂಕವನ್ನು ಕೆಪಿಎಸ್ಸಿ ಅಧಿಕೃತವಾಗಿ ಹಿಂಪಡೆದಿದೆ.
ಏನಿದು ಹಗರಣದ ಹಿನ್ನೆಲೆ?
2023-24ನೇ ಸಾಲಿನಲ್ಲಿ 384 ವಿವಿಧ ಹುದ್ದೆಗಳ ಭರ್ತಿಗಾಗಿ ಕೆಪಿಎಸ್ಸಿ ಪರೀಕ್ಷೆ ನಡೆಸಿತ್ತು. ಪರೀಕ್ಷೆಯ ಫಲಿತಾಂಶ ಹೊರಬಂದಾಗ ಅಭ್ಯರ್ಥಿಗಳು ಹಾಗೂ ಶಿಕ್ಷಣ ತಜ್ಞರು ದಬ್ಬಾಳಿಕೆ ಕಂಡಿದ್ದರು. ಅದೆಂದರೆ, ಒಂದೇ ಪರೀಕ್ಷಾ ಕೇಂದ್ರದ, ಒಂದೇ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದ 11ಕ್ಕೂ ಹೆಚ್ಚು ಅಭ್ಯರ್ಥಿಗಳು ಒಟ್ಟಾಗಿ ಪಾಸಾಗಿದ್ದರು! ಇದು ಕೇವಲ ಕಾಕತಾಳೀಯವಲ್ಲ, ಬದಲಾಗಿ ಪರೀಕ್ಷಾ ಅಕ್ರಮ ಅಥವಾ ಪ್ರಶ್ನೆಪತ್ರಿಕೆ ಸೋರಿಕೆ ನಡೆದಿರುವ ಸಾಧ್ಯತೆಯಿದೆ ಎಂದು ಸಾವಿರಾರು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಸುವರ್ಣ ನ್ಯೂಸ್ ವರದಿ:
ಈ ಅಸಹಜ ಫಲಿತಾಂಶದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ವಿಶೇಷ ವರದಿಗಳನ್ನು ಪ್ರಸಾರ ಮಾಡಿತ್ತು. ಅರ್ಹ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಅಕ್ರಮದ ಆರೋಪ ಕೇಳಿಬಂದಿದ್ದರೂ ಕೆಪಿಎಸ್ಸಿ ಮಾತ್ರ ಯಾವುದೂ ಅರಿಯದಂತೆ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಿತ್ತು. ಮಾರ್ಚ್ 23 ರಿಂದ ಮೇ 4 ರವರೆಗೆ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ (Interview) ಹಾಗೂ ದಾಖಲೆ ಪರಿಶೀಲನೆ ನಡೆಸಲು ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಸುವರ್ಣ ನ್ಯೂಸ್ ಈ ಅಕ್ರಮದ ವಿರುದ್ಧ ಧ್ವನಿ ಎತ್ತಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಭ್ಯರ್ಥಿಗಳ ವಲಯದಲ್ಲಿ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಯಿತು. ಪಾರದರ್ಶಕ ತನಿಖೆ ನಡೆಯುವ ಮೊದಲು ಸಂದರ್ಶನ ನಡೆಸಬಾರದು ಎಂಬ ಒತ್ತಾಯ ಕೇಳಿಬಂದಿತ್ತು.
Scroll to load tweet…
ಆದೇಶ ಹಿಂಪಡೆದ ಆಯೋಗ:
ಮಾಧ್ಯಮಗಳ ಒತ್ತಡ ಹಾಗೂ ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದಿರುವ ಕರ್ನಾಟಕ ಲೋಕಸೇವಾ ಆಯೋಗ, ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಹಿಂದೆ ಪ್ರಕಟಿಸಲಾಗಿದ್ದ ಸಂದರ್ಶನದ ವೇಳಾಪಟ್ಟಿಯನ್ನು ಅಧಿಕೃತವಾಗಿ ಹಿಂಪಡೆಯಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಅವರು, ‘ಮಾರ್ಚ್ 23 ರಿಂದ ನಿಗದಿಯಾಗಿದ್ದ ಸಂದರ್ಶನ ಮತ್ತು ದಾಖಲೆ ಪರಿಶೀಲನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಮುಂದಿನ ದಿನಾಂಕದ ಬಗ್ಗೆ ಆಯೋಗವು ನಂತರ ಮಾಹಿತಿ ನೀಡಲಿದೆ’ ಎಂದು ತಿಳಿಸಿದ್ದಾರೆ.

ಹಿಂದಿನ ಅಕ್ರಮಗಳ ನೆರಳು:
ಕೆಪಿಎಸ್ಸಿ ಇತಿಹಾಸದಲ್ಲಿ ಪರೀಕ್ಷಾ ಅಕ್ರಮದ ಆರೋಪಗಳು ಹೊಸದೇನಲ್ಲ. ಈ ಹಿಂದೆ ಕೂಡ ಕೆಎಎಸ್ (KAS) ಸೇರಿದಂತೆ ಹಲವು ನೇಮಕಾತಿಗಳಲ್ಲಿ ಅಕ್ರಮದ ಆರೋಪ ಕೇಳಿಬಂದು ಕೋರ್ಟ್ ಮೆಟ್ಟಿಲೇರಿದ್ದವು. ಈಗ 384 ಹುದ್ದೆಗಳ ವಿಚಾರದಲ್ಲೂ ಒಂದೇ ಕೊಠಡಿಯ 11 ಜನ ಪಾಸಾಗಿರುವುದು ವ್ಯವಸ್ಥಿತ ಅಕ್ರಮದ ಸಂಶಯವನ್ನು ಬಲಗೊಳಿಸಿದೆ. ಸದ್ಯಕ್ಕೆ ಸಂದರ್ಶನ ರದ್ದಾಗಿರುವುದು ಪ್ರಾಮಾಣಿಕ ಅಭ್ಯರ್ಥಿಗಳಲ್ಲಿ ಸಣ್ಣ ಭರವಸೆ ಮೂಡಿಸಿದ್ದು, ಸಮಗ್ರ ತನಿಖೆಯಾಗಬೇಕು ಎಂಬುದು ಅವರ ಆಗ್ರಹವಾಗಿದೆ.