
ಬೆಂಗಳೂರು, (ಮಾರ್ಚ್ 13): ಮಧ್ಯಪ್ರಾಚ್ಯದ ಯುದ್ಧ (ಯುದ್ಧ) ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಎಲ್ಲೂ ಗ್ಯಾಸ್ (LPG ಗ್ಯಾಸ್) ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ. ಆದರೆ, ಕಾಂಗ್ರೆಸ್ (ಕಾಂಗ್ರೆಸ್) ಪಕ್ಷ “ಬಣವಿ ಸುತ್ತು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ. ದೇಶದಲ್ಲಿ ಈ ಹಿಂದೆಲ್ಲಾ ಕ್ರೈಸಿಸ್ ಉಂಟಾದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ಕಾಂಗ್ರೆಸ್ ತೀರಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು “ಕೇಂದ್ರದ ವಿರುದ್ಧ ಪ್ರತಿಭಟನೆಗೆ ಇಳಿದಿರಿ” ಎಂದು ಜನರನ್ನು ಎತ್ತಿ ಕಟ್ಟುತ್ತಿರುವುದು ನಿಜಕ್ಕೂ ದೇಶದ ದೌರ್ಭಾಗ್ಯವೇ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶದ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರ ಪಾಲು!
ಕಾಂಗ್ರೆಸ್ ದುರಾಲೋಚನೆ
ಯುದ್ಧದ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ‘ಏನಾದರೂ ಮಾಡಿ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು” ಎಂಬ ದುರಾಲೋಚನೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ದೇಶದಲ್ಲಿ ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಭಾವವಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜೋಶಿ ಹರಿಹಾಯ್ದರು.
ಜನರನ್ನು ಕೆರಳಿಸೋ ಯತ್ನ: ಯುದ್ಧದಿಂದಾಗಿ ಜಗತ್ತೇ ತತ್ತರಿಸುತ್ತಿದೆ. ಸಂಘರ್ಷ ಸನ್ನಿವೇಶದಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಉತ್ತಮಪಡಿಸಿಕೊಂಡು ದೇಶವಾಸಿಗಳ ಕಾಯಲು ಬದ್ಧವಾಗಿ ಉತ್ತಮ ಆಡಳಿತ ನಡೆಸುತ್ತಿದೆ. ಆದರೆ, ‘ಕಾಂಗ್ರೆಸ್ ಪಾರ್ಟಿ ಮೋದಿ ಸರ್ಕಾರದ ವಿರುದ್ಧ ಜನರ ಭಾವನೆ ಕೆರಳಿಸಲು ಯತ್ನಿಸುತ್ತಿದೆ’ ಎಂದು ಸಚಿವ ಜೋಶಿ ಕಿಡಿಕಾರಿದರು.
ದೇಶದಲ್ಲೂ ಯಾವುದೇ ಕೊರತೆಯಿಲ್ಲ: ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ದೇಶದಲ್ಲಿ ಎಲ್ಲೂ ಇಲ್ಲ. ದೇಶದ 33 ಕೋಟಿ ಕುಟುಂಬಗಳಿಗೆ LPG ಪೂರೈಕೆಯಾಗುತ್ತಿದೆ. ಮೊದಲಿನಂತೆ ಸಿಲಿಂಡರ್ ಬುಕ್ ಮಾಡಿದ ಎರಡ್ಮೂರು ದಿನದಲ್ಲೇ ಪೂರೈಸಿದೆ ಎಂದು ಸ್ಪಷ್ಟಪಡಿಸಿದರು.
40 ದೇಶಗಳಿಂದ ಬರುತ್ತಿದೆ: ಭಾರತಕ್ಕೆ ಈ ಮೊದಲು ಕೇವಲ 20 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನ ಬರುತ್ತಿದೆ. ಆದರೆ, ನಾವಿಂದು ಅದನ್ನು 40 ರಾಷ್ಟಗಳಿಗೆ ಹೆಚ್ಚಿಸಿದ್ದೇವೆ. ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಆಫ್ರಿಕನ್ ಕಂಟ್ರಿಗಳಿಂದಲೂ ತರಿಸಿಕೊಳ್ಳಲು ಯೋಜಿಸಲಾಗಿದೆ. ಅಲ್ಲದೆ, ದೇಶದಲ್ಲೇ ಶೇ.20ರಷ್ಟು ಎಲ್ಪಿಜಿ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ.
ಆತ್ಮನಿರ್ಭರ ಭಾರತ ಕೆಡಿಸೋ ಕೆಲಸ
ಯುಪಿಎ ಕಾಲದಲ್ಲಿ ಕೇವಲ ಶೇ.1.5ರಷ್ಟಿದ್ದ ಎಥೆನಾಲ್ ಬೈಂಡಿಂಗ್ ಅನ್ನು ಇದೀಗ ಶೇ.20ಕ್ಕೆ ಹೆಚ್ಚಿಸಿದೆ. ಇದು ಪೆಟ್ರೋಲ್, ಡೀಸೆಲ್ ಪಂಪಗಳನ್ನು ಸೌರ ಪಂಪ್ಗಳನ್ನಾಗಿ ಪರಿವರ್ತಿಸಲಾಗಿದೆ. ದೇಶದಲ್ಲೇ ಕಲ್ಲಿದ್ದಲು ಉತ್ಪಾದನೆ ಸಹ ಹೆಚ್ಚಿದೆ. ಇನ್ನು “ರಿನಿವೆಬಲ್ ಇಂಧನ ಉತ್ಪಾದನೆ” ಸಹ ಹೆಚ್ಚು. ಹೀಗೆ ನಮ್ಮ ದೇಶ “ಆತ್ಮನಿರ್ಭರ ಭಾರತ”ವಾಗಿದೆ. ಆದರೆ, ಕಾಂಗ್ರೆಸ್ ನಾಯಕರು “ಆತ್ಮನಿರ್ಭರ ಭಾರತ”ವನ್ನು ಕೆಡಿಸುವ ಸಂಚು ಹೂಡಿದ್ದಾರೆ ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಎಲ್ಲೂ LPG ಅಭಾವವಿಲ್ಲ: ದೇಶದಲ್ಲಿ ಎಲ್ಲೂ LPG ಅಭಾವವಿಲ್ಲ. ಜನಸಾಮಾನ್ಯರ ಹಿತದೃಷ್ಟಿಯಿಂದ ಬುಕ್ಕಿಂಗ್ ನಿಯಮಿತಗೊಳಿಸಿ ಕಮರ್ಷಿಯಲ್ ಗ್ಯಾಸ್ ಮೇಲೆ ಕೇಂದ್ರ ನಿಗಾ ವಹಿಸುತ್ತಿದೆ ಅಷ್ಟೇ. ಆದರೆ, ಅಪ್ರಬುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪರಿಸ್ಥಿತಿಯ ಲಾಭ ಪಡೆದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.