
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ದ ಭೀತಿಯಿಂದ ಒಡಿಶಾದ 8 ಕಾಂಗ್ರೆಸ್ ಶಾಸಕರನ್ನು ರಾಮನಗರದ ವಂಡರ್ ಲಾ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಅಡ್ಡ ಮತದಾನ ತಡೆಯಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಶಾಸಕರ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ರಾಮನಗರ: ರಾಜ್ಯಸಭಾ ಚುನಾವಣೆಯಲ್ಲಿ ‘ಆಪರೇಷನ್ ಕಮಲ’ದ ಭೀತಿಯ ಹಿನ್ನೆಲೆಯಲ್ಲಿ ಒಡಿಶಾದ 8 ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿ ಸಮೀಪವಿರುವ ವಂಡರ್ ಲಾ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.
ಭುವನೇಶ್ವರದಿಂದ ಬೆಂಗಳೂರಿಗೆ ಗುರುವಾರ ರಾತ್ರಿ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ್ ದಾಸ್ ನೇತೃತ್ವದಲ್ಲಿ ಈ ಶಾಸಕರು ರಾತ್ರಿ 11 ಗಂಟೆಗೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರೆಲ್ಲರನ್ನು ಡಿ.ಕೆ.ಶಿವಕುಮಾರ್ ಆಪ್ತರು ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ಬಿಡದಿ ಸಮೀಪವಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆತರಲಾಯಿತು. ಈ ಶಾಸಕರೆಲ್ಲರೂ ಮೊದಲ ಬಾರಿ ಗೆದ್ದವರಾಗಿದ್ದಾರೆ. ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಕೈ ಶಾಸಕರು ಬೆಳಗ್ಗೆಯಿಂದ ಹೊರಗೆ ಬರಲೇ ಇಲ್ಲ. ಎಲ್ಲರು ತಮ್ಮ ಕೊಠಡಿಗಳಲ್ಲಿಯೇ ಉಳಿದು ವಿಶ್ರಾಂತಿ ಪಡೆದರು.
ಸಂಜೆ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಚುನಾವಣೆಯ ವೇಳೆ ಭುವನೇಶ್ವರಕ್ಕೆ ವಾಪಸ್ ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಲ್ಕನೇ ಸ್ಥಾನದ ಗೆಲುವಿಗೆ ಹೋರಾಟ
ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ. 10 ರಾಜ್ಯಗಳ ಶಾಸಕರು ರಾಜ್ಯಸಭಾ ಸದಸ್ಯರ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಇದರಲ್ಲಿ ನಾಲ್ಕು ರಾಜ್ಯಸಭಾ ಸದಸ್ಯರನ್ನು ಒಡಿಶಾದ ಶಾಸಕರು ಚುನಾಯಿಸಲಿದ್ದಾರೆ.
ಈ ಪೈಕಿ ನಾಲ್ಕನೇ ಸ್ಥಾನಕ್ಕೆ ಯಾವುದೇ ಪಕ್ಷದ ಬಳಿ ಸ್ಪಷ್ಟ ಸಂಖ್ಯಾ ಬಲ ಇಲ್ಲದ ಕಾರಣ, ಒಡಿಶಾ ರಾಜಕೀಯದಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ. ಆಡಳಿತಾರೂಢ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಅಡ್ಡ ಮತದಾನಕ್ಕೆ ಯತ್ನಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿ ನಾಯಕರು ಅಡ್ಡ ಮತದಾನ ಮಾಡಿಸುವ ಭೀತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ತನ್ನದೇ ಆಡಳಿತವಿರುವ ಕರ್ನಾಟಕಕ್ಕೆ ಸ್ಥಳಾಂತರಿಸಿದೆ. ಕಾಂಗ್ರೆಸ್‌ನ 14 ಶಾಸಕರಲ್ಲಿ 8 ಮಂದಿ ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ಶಾಸಕರ ಉಸ್ತುವಾರಿ ವಹಿಸಲಾಗಿದೆ.
ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಕಣಕ್ಕಿಳಿಸಿವೆ. ಪ್ರಖ್ಯಾತ ಹೋಟೆಲ್ ಉದ್ಯಮಿ ಮತ್ತು ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ, ಬಿಜೆಪಿಗರು ಬಿಜೆಡಿ ಮತ್ತು ಕಾಂಗ್ರೆಸ್ ಶಾಸಕರನ್ನು ಅಡ್ಡಮತದಾನಕ್ಕೆ ಪ್ರಚೋದಿಸಬಹುದು ಎಂಬ ಆತಂಕ ಎರಡೂ ಪಕ್ಷಗಳಲ್ಲಿದೆ.
Scroll to load tweet…
ಆದ್ದರಿಂದಲೇ, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ತಮ್ಮ ಪಕ್ಷದ 14 ಶಾಸಕರ ಪೈಕಿ 8 ಮಂದಿಯನ್ನು ರೆಸಾರ್ಟ್‌ಗೆ ಕರೆ ತಂದಿದ್ದಾರೆ. ಎದುರಾಳಿ ಪಕ್ಷಗಳು ತಮ್ಮ ಶಾಸಕರನ್ನು ಸೆಳೆಯದಂತೆ ತಡೆಯುವುದು ಕಾಂಗ್ರೆಸ್‌ನ ತಂತ್ರ ಮತ್ತು ಉದ್ದೇಶವಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಯ ಗೆಲುವಿಗೆ 30 ಪ್ರಾಶಸ್ತ್ಯದ ಮತಗಳು ಬೇಕಿವೆ. ಹೀಗಾಗಿ ಬಿಜೆಪಿ ಇಬ್ಬರನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು. ಸ್ವತಂತ್ರ ಅಭ್ಯರ್ಥಿಯ ಗೆಲುವಿಗೆ 11 ಮತಗಳ ಅವಶ್ಯಕತೆ ಇದೆ. ಹೀಗಾಗಿ, ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುವ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರು ಅಡ್ಡಮತದಾನ ಮಾಡದಂತೆ ಅವರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.
ಇಂದು ರಾತ್ರಿ ಮತ್ತಷ್ಟು ಶಾಸಕರು ಆಗಮಿಸುವ ಸಾಧ್ಯತೆ ಇದೆ. ಶಾಸಕರನ್ನು ಕರೆತರಲು ಈಗಾಗಲೇ ಕರ್ನಾಟಕದ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣಕ್ಕೆ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಶಾಸಕರು ತಂಗಿರುವ ಕಾರಣ ರೆಸಾರ್ಟ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಆಪರೇಷನ್ ಕಮಲ’ ಭೀತಿ ಇಲ್ಲ: ಬಾಲಕೃಷ್ಣ
ರಾಮನಗರ: ಚುನಾವಣೆ ಸಮಯದಲ್ಲಿ ನಾವೂ ರೆಸಾರ್ಟ್‌ಗೆ ಹೋಗುತ್ತೇವೆ. ಹಾಗೆಯೇ ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು. ವಂಡರ್ ಲಾ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ. ಅವರನ್ನು ಸ್ವಾಗತಿಸಿ ಗೌರವಿಸೋದು ನನ್ನ ಕರ್ತವ್ಯ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.