ಬೈಎಲೆಕ್ಷನ್‌: ಬಿಜೆಪಿಯಿಂದ ಬಾಗಲಕೋಟೆಗೆ ಚರಂತಿಮಠ? ದಾವಣಗೆರೆಯಿಂದ ಅಚ್ಚರಿ ಅಭ್ಯರ್ಥಿ ಘೋಷಣೆ ಸಾಧ್ಯತೆ | By Election Veeranna Charantimath For Bagalkote Surprise Candidate Likely To Be Announced From Davanagere Mrq

ಬೈಎಲೆಕ್ಷನ್‌: ಬಿಜೆಪಿಯಿಂದ ಬಾಗಲಕೋಟೆಗೆ ಚರಂತಿಮಠ? ದಾವಣಗೆರೆಯಿಂದ ಅಚ್ಚರಿ ಅಭ್ಯರ್ಥಿ ಘೋಷಣೆ ಸಾಧ್ಯತೆ | By Election Veeranna Charantimath For Bagalkote Surprise Candidate Likely To Be Announced From Davanagere Mrq



ಬೈಎಲೆಕ್ಷನ್‌: ಬಿಜೆಪಿಯಿಂದ ಬಾಗಲಕೋಟೆಗೆ ಚರಂತಿಮಠ? ದಾವಣಗೆರೆಯಿಂದ ಅಚ್ಚರಿ ಅಭ್ಯರ್ಥಿ ಘೋಷಣೆ ಸಾಧ್ಯತೆ | By Election Veeranna Charantimath For Bagalkote Surprise Candidate Likely To Be Announced From Davanagere Mrq

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಬಾಗಲಕೋಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರು ಬಹುತೇಕ ಅಂತಿಮವಾಗಿದ್ದು, ದಾವಣಗೆರೆಯಲ್ಲಿನ ಭಿನ್ನಾಭಿಪ್ರಾಯಗಳ ನಡುವೆ ಅಚ್ಚರಿಯ ಅಭ್ಯರ್ಥಿ ಆಯ್ಕೆಯ ಸಾಧ್ಯತೆಗಳಿವೆ. 

ಬೆಂಗಳೂರು: ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಿದ್ಧತೆ ಆರಂಭಿಸಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಮಾಜಿ ಶಾಸಕ ವೀರಣ್ಣ ಚರಂತಿಮಠ ಹೆಸರು ಬಹುತೇಕ ಅಂತಿಮ

ಶುಕ್ರವಾರ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ.

ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ಇನ್ನೂ ತುಸು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್‌ ಸೇರಿ ಅಜೆಯ್ ಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ಶ್ರೀನಿವಾಸ್ ಕರಿಯಪ್ಪ ಮತ್ತಿತರ ಹೆಸರುಗಳು ಪ್ರಸ್ತಾಪವಾಗಿವೆ.

ದಾವಣಗೆರೆ ಜಿಲ್ಲೆಯ ಪಕ್ಷದ ಘಟಕದಲ್ಲಿ ಭಿನ್ನಾಭಿಪ್ರಾಯ ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಿಂದ ಕೋರ್ ಕಮಿಟಿ ಸಭೆಗೂ ಮೊದಲು ಜಿಲ್ಲೆಯ ಮುಖಂಡರೊಂದಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೋರ್ ಕಮಿಟಿ ಸಭೆಯಲ್ಲಿ ಮುಂದೆ ಬರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. ಆಕಾಂಕ್ಷಿಗಳ ಕುರಿತು ಚರ್ಚೆ ಆಗಿದೆ. ಕೋರ್ ಕಮಿಟಿಯಲ್ಲಿ ಚರ್ಚಿಸಿದ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದರು.

ಒಂದಾಗಿ ಅಭ್ಯರ್ಥಿ ಗೆಲ್ಲಿಸಿ

ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದೇವೆ. ವಿಧಾನಸಭೆ, ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ, ಒಟ್ಟಾಗಿ ಪ್ರಯತ್ನ ಮಾಡಬೇಕು. ಸಂಪೂರ್ಣ ಶ್ರಮ ಹಾಕಬೇಕೆಂದು ಈ ಸಭೆಯಲ್ಲಿ ತೀರ್ಮಾನ ಆಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಲ್ಲ ಆಕಾಂಕ್ಷಿಗಳು, ಪಕ್ಷದ ಪ್ರಮುಖರ ಜೊತೆ ಕುಳಿತು ಚರ್ಚಿಸಿ ಹಿಂದೆ ಆಗಿದ್ದನ್ನು ಮರೆತು, ನಾವೆಲ್ಲ ಒಟ್ಟಾಗಿ ಚುನಾವಣೆಯಲ್ಲಿ ಗೆಲ್ಲಲು ಶ್ರಮ ಹಾಕಬೇಕೆಂದು ಸಭೆ ನಡೆಸಿದ್ದೇವೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಒಟ್ಟಾರೆಯಾಗಿ ಕೋರ್ ಕಮಿಟಿಯಲ್ಲಿ ಚರ್ಚೆ ಆದ ಪ್ರಕಾರ ಹೆಸರುಗಳನ್ನು ಶೀಘ್ರ ದೆಹಲಿಗೆ ಕಳಿಸಿಕೊಡುತ್ತೇವೆ. ಅಸಮಾಧಾನಿತರಿಗೆ ಏನು ಹೇಳಬೇಕೋ ಅದನ್ನು ನಾಲ್ಕು ಗೋಡೆ ಮಧ್ಯೆ ಹೇಳಿದ್ದೇವೆ. ಎಲ್ಲರನ್ನೂ ಕೂರಿಸಿ ಮಾತನಾಡಿದ್ದೇವೆ. ಹಳೆಯದನ್ನೆಲ್ಲ ಮರೆತು ಪಕ್ಷದ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಿ, ಒಟ್ಟಾಗಿ ಕೆಲಸ ಮಾಡಬೇಕು ಎಂಬ ಸಂದೇಶ ಕೊಟ್ಟಿದ್ದೇವೆ. ಎರಡೂ ತಂಡದ ಮುಖಂಡರನ್ನು ಕೂರಿಸಿ ಚರ್ಚೆ ಮಾಡಿದ್ದೇವೆ. ಎಲ್ಲವೂ ಸರಿಹೋಗುವ ವಿಶ್ವಾಸ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಆಪರೇಷನ್ ಕಮಲದ ಭೀತಿ: ಒಡಿಶಾದ 8 ಕಾಂಗ್ರೆಸ್ ಶಾಸಕರಿಗೆ ಟ್ರಬಲ್‌ ಶೂಟರ್‌ ಡಿಕೆಶಿ ಆತಿಥ್ಯ

ದಾವಣಗೆರೆ ಉಪ ಚುನಾವಣೆಗಾಗಿ ವಿನಯ್‌ಕುಮಾರ್‌ಗೆ ಬಿಜೆಪಿ ಗಾಳ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಚುರುಕುಗೊಳಿಸಿರುವ ಪ್ರತಿಪಕ್ಷ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಬಿ.ವಿನಯ್‌ ಕುಮಾರ್ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷದಲ್ಲಿದ್ದ ವಿನಯ್‌ ಕುಮಾರ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ, ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕುರುಬ ಸಮುದಾಯಕ್ಕೆ ಸೇರಿದ ವಿನಯ್ ಕುಮಾರ್ ಅವರು ಯುವಕರಾಗಿದ್ದರಿಂದ ಪಕ್ಷಕ್ಕೆ ಕರೆತಂದರೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವೂ ಇದೆ.

ಆದರೆ, ಅವರನ್ನು ಕರೆತಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವುದು ಅಷ್ಟು ಸುಲಭವಾಗಿಲ್ಲ. ಸ್ಥಳೀಯವಾಗಿ ಅನೇಕ ಆಕಾಂಕ್ಷಿಗಳು ಇರುವುದರಿಂದ ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭಿಕ್ಷಾಟನೆ ಮುಕ್ತ ರಾಜ್ಯಕ್ಕಾಗಿ ಸರ್ಕಾರ ಮಹತ್ವದ ಕ್ರಮ: ಮಹದೇವಪ್ಪ



Source link

Leave a Reply

Your email address will not be published. Required fields are marked *