
ಸೊರಬ ತಾಲೂಕಿನ ಕಾನಹಳ್ಳಿ ಗ್ರಾಮದಲ್ಲಿ ಕ್ರಿ.ಶ. ೧೨೦೭ರ ಅವಧಿಗೆ ಸೇರಿದ ಅಪರೂಪದ ವೀರಗಲ್ಲು ಪತ್ತೆಯಾಗಿದ್ದು, ಇದು ಚಾಲುಕ್ಯ ಅರಸ ಜಗದೇಕಮಲ್ಲ ಮತ್ತು ಕದಂಬ ದೊರೆ ಹೆಮ್ಮಾಡಿದೇವನ ಆಳ್ವಿಕೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನವು ಹಡವಳ ಕನ್ನಯ್ಯ ಎಂಬ ವೀರನ ಶೌರ್ಯಗಾಥೆಯನ್ನು ವಿವರಿಸುವುದಲ್ಲದೆ, ಸೊರಬದ ಇತಿಹಾಸಕ್ಕೆ ಹೊಸ ಮಾಹಿತಿಯನ್ನು ಸೇರಿಸಿದೆ.
ಸೊರಬ: ಸೊರಬ ತಾಲೂಕಿನ ಕಾನಹಳ್ಳಿ ಗ್ರಾಮದಲ್ಲಿ ಕ್ರಿ.ಶ. ೧೨೦೭ರ ಅವಧಿಗೆ ಸೇರಿದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದ್ದು, ಈ ಮಹತ್ವದ ಐತಿಹಾಸಿಕ ಸ್ಮಾರಕವನ್ನು ಇತಿಹಾಸ ಅಧ್ಯಯನಕಾರ ಉಳವಿಯ ಅವಿನಾಶ್ ಚಕ್ರಸಾಲಿ ಗುರುತಿಸಿದ್ದಾರೆ. ಈ ಪತ್ತೆ ಸೊರಬ ತಾಲ್ಲೂಕಿನ ಇತಿಹಾಸಕ್ಕೆ ಹೊಸ ಮಾಹಿತಿಯನ್ನು ನೀಡುವ ಮಹತ್ವದ ದಾಖಲೆಯಾಗಿದೆ.
ಪತ್ತೆಯಾದ ವೀರಗಲ್ಲು ಸುಮಾರು ೯ ಅಡಿ ಉದ್ದ ಹಾಗೂ ೩ ಅಡಿ ಅಗಲ ಹೊಂದಿದ್ದು, ಅದನ್ನು ಮೂರು ಹಂತಗಳಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಕೆಳಗಿನ ಹಂತದಲ್ಲಿ ವೀರನು ಬಿಲ್ಲು–ಬಾಣ ಹಿಡಿದು ಶತ್ರುಗಳೊಂದಿಗೆ ಸಮರ ನಡೆಸುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಮಧ್ಯಭಾಗದಲ್ಲಿ ಯುದ್ಧದಲ್ಲಿ ವೀರಮರಣ ಹೊಂದಿದ ವೀರನನ್ನು ಸುರಾಂಗನೆಯರು ದೇವಲೋಕಕ್ಕೆ ಕೊಂಡೊಯ್ಯುತ್ತಿರುವ ದೃಶ್ಯವನ್ನು ಶಿಲ್ಪ ರೂಪದಲ್ಲಿ ಮೂಡಿಸಲಾಗಿದೆ. ಮೇಲಿನ ಹಂತದಲ್ಲಿ ದೇವಲೋಕದ ಸಂಕೇತವಾಗಿ ಶಿವಲಿಂಗ ಹಾಗೂ ನಂದಿ ಶಿಲ್ಪಗಳನ್ನು ಕೆತ್ತಲಾಗಿದ್ದು, ಪದ್ಮಾಸನದಲ್ಲಿ ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವ ವೀರನ ಚಿತ್ರಣವೂ ಕಾಣುತ್ತದೆ.
14 ಸಾಲುಗಳ ಕೆತ್ತನೆ
ಈ ವೀರಗಲ್ಲಿನಲ್ಲಿ ಒಟ್ಟು ೧೪ ಸಾಲುಗಳ ಶಾಸನ ಪಾಠವನ್ನು ಎರಡು ಪಟ್ಟಿಕೆಗಳಲ್ಲಿ ಕೆತ್ತಲಾಗಿದೆ. ಶಾಸನದಲ್ಲಿ ಚಾಲುಕ್ಯ ಅರಸನಾದ ಜಗದೇಕಮಲ್ಲನ ಆಡಳಿತವನ್ನು ಉಲ್ಲೇಖಿಸಲಾಗಿದೆ. ಜಗದೇಕಮಲ್ಲನನ್ನು “ಪೃಥ್ವಿವಲ್ಲಭ ಮಹಾರಾಜಾಧಿರಾಜ ಪರಮೇಶ್ವರಂ, ಪರಮಭಟಾರಕ, ಸತ್ಯಾಶ್ರಯ ಕುಲತಿಲಕ, ಚಾಲುಕ್ಯಾಭರಣ” ಎಂಬ ಬಿರುದುಗಳಿಂದ ಕೊಂಡಾಡಲಾಗಿದೆ.
ಅದೇ ಕಾಲಘಟ್ಟದಲ್ಲಿ ಬನವಾಸಿ ಹನ್ನೆರಡು ಸಾವಿರ ರಾಜ್ಯವನ್ನು ಹಾನಗಲ್ಲಿನ ಕದಂಬ ಚಕ್ರೇಶ್ವರ ಕೀರ್ತಿದೇವನ ಪುತ್ರ ಹೆಮ್ಮಾಡಿದೇವನು ಆಡಳಿತ ನಡೆಸುತ್ತಿದ್ದನೆಂಬ ಮಾಹಿತಿ ಶಾಸನದಲ್ಲಿ ದೊರೆಯುತ್ತದೆ. ಈ ಅವಧಿಯಲ್ಲಿ ಬನವಾಸಿ ನಾಡಿನ ಮನ್ನೇಯ ಮಾಂಡಳೀಕನ ಅನುಮತಿ ಪಡೆದು ಕಾನಹಳ್ಳಿಯ ಹಡವಳ ಕನ್ನಯ್ಯ ಎಂಬ ವೀರನು ಒಂದು ಕಾಳಗದಲ್ಲಿ ನೇರವಾಗಿ ಹೋರಾಟಕ್ಕೆ ಇಳಿದಿದ್ದಾನೆ. ಯುದ್ಧದಲ್ಲಿ ವಿರೋಧಿಗಳ ಕುದುರೆಗಳನ್ನೂ, ಹಲವಾರು ಸೈನಿಕರನ್ನೂ ಸಂಹರಿಸಿ ವೀರಭಟನಾಗಿ ಪ್ರಾಣ ತ್ಯಾಗ ಮಾಡಿ ಸ್ವರ್ಗಸ್ಥನಾಗಿದ್ದಾನೆ ಎಂಬುದನ್ನು ಶಾಸನ ತಿಳಿಸುತ್ತದೆ.
ಆದರೆ ಶಾಸನದ ೧೦ನೇ ಸಾಲಿನ ಕೆಲವು ಅಕ್ಷರಗಳು ಕಾಲಕ್ರಮೇಣ ಅಳಿಸಿಹೋಗಿರುವುದರಿಂದ ಕನ್ನಯ್ಯನು ಯಾರೊಂದಿಗೆ ಯುದ್ಧ ನಡೆಸಿದ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಕನ್ನಯ್ಯನ ವೀರಮರಣದ ನಂತರ ಅವನ ಕುಟುಂಬಕ್ಕೆ ಹೆಮ್ಮಾಡಿದೇವನು ಕಾನಹಳ್ಳಿಯ ನಾಯಕ ವೃತ್ತಿಯನ್ನು ಮರು ನೀಡಿದನೆಂಬುದೂ ಶಾಸನದಲ್ಲಿ ಉಲ್ಲೇಖವಾಗಿದೆ. ಈ ವೀರಗಲ್ಲನ್ನು ಬೀರಯ್ಯ ಎಂಬ ಶಿಲ್ಪಿಯು ನಿರ್ಮಿಸಿದ್ದಾನೆ ಎಂಬ ಮಾಹಿತಿಯೂ ದೊರೆಯುತ್ತದೆ.
ಕಾನಹಳ್ಳಿಯ ನಾಯಕನಾದ ಕನ್ನಯ್ಯ ನೇರವಾಗಿ ಯುದ್ಧ
ಸೊರಬ ತಾಲ್ಲೂಕಿನಲ್ಲಿ ಹೆಮ್ಮಾಡಿದೇವನ ಉಲ್ಲೇಖ ದೊರೆತಿರುವುದು ಇದೇ ಮೊದಲನೆಯ ಬಾರಿ ಎನ್ನುವುದು ಗಮನಾರ್ಹ ಸಂಗತಿ. ಕಾನಹಳ್ಳಿಯ ನಾಯಕನಾದ ಕನ್ನಯ್ಯ ನೇರವಾಗಿ ಯುದ್ಧದಲ್ಲಿ ಭಾಗವಹಿಸಿದ್ದಾನೆಂಬುದು ಆ ಕಾಲದ ವೀರತ್ವದ ಸಂಕೇತವೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಜೊತೆಗೆ ಕಾನಹಳ್ಳಿ ಗ್ರಾಮವು ಆ ಸಮಯದಲ್ಲಿ ಇಬ್ಬರು ಆಡಳಿತಗಾರರ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದಿರಬಹುದು ಎಂಬುದನ್ನೂ ಈ ಶಾಸನದಿಂದ ಊಹಿಸಬಹುದು.
ಇದೇ ಸ್ಥಳದ ಸಮೀಪದಲ್ಲೇ, ವೀರಗಲ್ಲು ದೊರೆತ ಸ್ಥಳದಿಂದ ಸುಮಾರು ೮೦೦ ಮೀಟರ್ ದೂರದಲ್ಲಿ ಐದನೇ ಶತಮಾನಕ್ಕೆ ಸೇರಿದ ಸಿಂಹಶಿಲ್ಪವೂ ಪತ್ತೆಯಾಗಿದೆ. ಈ ಶಿಲ್ಪವು ಸುಮಾರು ೬೫ ಸೆಂ.ಮೀ. ಉದ್ದ ಮತ್ತು ೧೨ ಸೆಂ.ಮೀ. ಎತ್ತರ ಹೊಂದಿದ್ದು, ಅದರ ಮುಂಭಾಗದ ಒಂದು ಭಾಗ ಕಾಲಕ್ರಮೇಣ ಒಡೆದು ಹೋಗಿದೆ.
ಈ ಕ್ಷೇತ್ರ ಅಧ್ಯಯನ ಕಾರ್ಯಕ್ಕೆ ಇತಿಹಾಸ ಸಂಶೋಧಕ ರಮೇಶ್ ಬಿ. ಹಿರೇಜಂಬೂರು ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದು, ಶಾಸನದ ವಿಶ್ಲೇಷಣೆಯನ್ನೂ ಮಾಡಿದ್ದಾರೆ. ಪರಿಸರ ಅಧ್ಯಯನಕಾರರಾದ ಜಿ. ಅರುಣಕುಮಾರ್ ಹಾಗೂ ಗ್ರಾಮಸ್ಥರಾದ ನೆಮ್ಮದಿ ಸಂತೋಷ್, ಸೋಮಶೇಖರ, ಸೋಮಪ್ಪ ಮತ್ತು ಟೋಕಪ್ಪ ಈ ಶಾಸನವನ್ನು ಪತ್ತೆಹಚ್ಚುವಲ್ಲಿ ಸಹಕಾರ ನೀಡಿದ್ದಾರೆ.