
ಬೆಂಗಳೂರು, (ಮಾರ್ಚ್ 14): ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ (ಯುದ್ಧ) ಭಾರತದ (ಭಾರತ) ಮೇಲೂ ಪರಿಣಾಮ ಬೀರುತ್ತಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ವಸ್ತುಗಳು ನಿಂತುಕೊಂಡಿವೆ. ಅದರಲ್ಲೂ ಮುಖ್ಯವಾಗಿ ಕಚ್ಚಾ ತೈಲ ಆಮದು ಕಡಿಮೆಯಾಗಿದೆ. ಇದರಿಂದ ಗ್ಯಾಸ್ ಸಿಲಿಂಡರ್ (LPG ಸಿಲಿಂಡರ್‌ಗಳು) ಅಭಾವ ಉಂಟಾಗಿದೆ. ಕರ್ನಾಟಕದಲ್ಲಿ (ಕರ್ನಾಟಕ) ಸಹ ಕಮರ್ಷಿಯಲ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿರುವ ಬೆನ್ನಲ್ಲೇ ಹೋಟೆಲ್ ಉದ್ಯಮ ಕಂಗಾಲಾಗಿದೆ. ಈ ಹೋಟೆಲ್, ಉದ್ಯಮವನ್ನು ನಂಬಿಕೊಂಡ ವ್ಯಾಪಾರ ವಹಿವಾಟು ತೀವ್ರ ಹೊಡೆತ ಬಿದ್ದಿದ್ದು, ಕೆಲ ಕಡೆ ಗೃಹಬಳಕೆಯ ಸಿಲಿಂಡರ್ ಬಳಸಲಾಗುತ್ತಿದೆ, ಈ ಸಂಬಂಧ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ) ದಾಳಿ ನಡೆಸಿ ಇದುವರೆಗೆ ಒಟ್ಟು 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ.
ಈ ಸಂಬಂಧ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇಂದು (ಮಾರ್ಚ್ 14) ಪ್ರಕಟಣೆ ಹೊರಡಿಸಿದೆ, ಕೆಲ ಕಡೆ ಗೃಹ ಬಳಕೆ ಸಿಲಿಂಡರ್ ಅನ್ನು ಬಳಸಲಾಗುತ್ತಿದೆ, ಈ ಸಂಬಂಧ ರಾಜ್ಯ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಒಟ್ಟು 316 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಗೃಹಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಗ್ಯಾಸ್ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?
ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದ ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿ-46, ದಾವಣಗರೆಯಲ್ಲಿ 13 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕೆಜಿಎಫ್ ನಲ್ಲಿ ಅಕ್ರಮ ರಿಫಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಒಟ್ಟು ಶೇ.20ರಷ್ಟು ಸಿಲಿಂಡರ್‌ಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚನೆಗಳಂತೆ ಆಸ್ಪತ್ರೆಗಳು, ಶಾಲಾ ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಕ್ಯಾಂಟೀನ್, ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ಮಾಡಲು ಮತ್ತು ಸರ್ಕಾರಿ ಕಚೇರಿ, ವೃದ್ದಾಶ್ರಮ, ಪ್ರಮುಖ ಖಾಸಗಿ ವಲಯದ ಕಚೇರಿಗಳಿಗೆ ಆದ್ಯತೆಯ ವಾಣಿಜ್ಯ ಸಿಲಿಂಡರ್‌ಗಳನ್ನು ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ರಾಜ್ಯದೆಲ್ಲೆಡೆ 14.2 ಕೆಜಿಯ ಗೃಹ ಬಳಕೆಯ ಒಟ್ಟು 3,86,363 ಸಿಲಿಂಡರ್ ಮತ್ತು ವಾಣಿಜ್ಯ ಬಳಕೆಯ 6,371 ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳ ಉಪಯೋಗಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಆಹಾರ ಇಲಾಖೆಯು ಪ್ರಕಟಣೆಯಲ್ಲಿದೆ.
ಗ್ಯಾಸ್ ಬುಕ್ಕಿಂಗ್ ಬಗ್ಗೆ ಇರಲಿ ಎಚ್ಚರ
ಗ್ಯಾಸ್ ಸಿಲಿಂಡರ್ ಕೊರತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಕಿರಾತಕರು, ಗ್ಯಾಸ್ ಏಜೆನ್ಸಿಗಳ ಸೋಗಿನಲ್ಲಿ ಲಿಂಕ್ ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಆತಂಕಗೊಳ್ಳುತ್ತಿರುವ ನಾಗರಿಕರು ಗೃಹ ಬಳಕೆಯ ಸಿಲಿಂಡರ್‌ಗಳಿಗಾಗಿ ಗ್ಯಾಸ್ ಬುಕ್ ಮಾಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ಖದೀಮರು, ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ಲಿಂಕ್ ಕಳುಹಿಸಿ ವಂಚಿಸುವ ಸಾಧ್ಯತೆಯಿದೆ. ಸಾರ್ವಜನಿಕರು ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರದಿಂದ ಜಾಗೃತಿ ಮೂಡಿಸುತ್ತಿದ್ದಾರೆ.