
ಬಳ್ಳಾರಿ ಜಿಲ್ಲೆಯಲ್ಲಿ ₹55 ಕೋಟಿ ಇನ್ಕ್ಯುಬೇಷನ್ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಬಳ್ಳಾರಿಯಲ್ಲಿ 4.74 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಧಾನಪರಿಷತ್ತು (ಮಾ.14): ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ₹55 ಕೋಟಿ ಇನ್ಕ್ಯುಬೇಷನ್ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಬಳ್ಳಾರಿಯಲ್ಲಿ 4.74 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕೆ.ಎಸ್. ನವೀನ್ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಜೈವಿಕ ತಂತ್ರಜ್ಞಾನದ ಅಭಿವೃದ್ಧಿಗಾಗಿ ಬಳ್ಳಾರಿಯಲ್ಲಿ ಇನ್ಕ್ಯುಬೇಷನ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಗಣಿಗಾರಿಕೆಯಿಂದ ಉಂಟಾಗಿರುವ ಪರಿಸರ ಹಾನಿ ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಉಳಿದಂತೆ ಉತ್ತರ ಕರ್ನಾಟಕದ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಕಲಬುರಗಿಯಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಕೃಷಿ ಫೌಂಡೇಷನ್ ವತಿಯಿಂದ ವಿಶ್ವ ದರ್ಜೆಯ ಪ್ರಯೋಗಾಲಯದ ಶ್ರೇಷ್ಠತಾ ಕೇಂದ್ರವನ್ನು ₹16.50 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ವಿವರಿಸಿದರು.
ಎಲ್ಇಎಪಿ ಕಾರ್ಯಕ್ರಮ
ಇವುಗಳ ಜತೆಗೆ ಐಐಐಟಿ ರಾಯಚೂರಿನಲ್ಲಿ ಕೃತಕ ಬುದ್ಧಿಮತ್ತೆಯ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲು 2026-27ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾಗಿದೆ. ಬೆಂಗಳೂರು ಹೊರತುಪಡಿಸಿ 2 ಮತ್ತು 3ನೇ ಹಂತದ ನಗರಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ಎಲ್ಇಎಪಿ ಕಾರ್ಯಕ್ರಮ ಘೋಷಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕದ ಯುವ ಉದ್ಯಮಿಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿನ ಒಟ್ಟು 72 ನವೋದ್ಯಮಗಳು ನೋಂದಣಿಯಾಗಿವೆ. ಎಲಿವೇಟ್ ಯೋಜನೆ ಅಡಿ ಈ ಪ್ರದೇಶದ 20 ನವೋದ್ಯಮಿಗಳಿಗೆ ₹4.90 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಹಾಗೆಯೇ ಹೊಸ ನವೋದ್ಯಮ ಆರಂಭಿಸಲು ಅನುಕೂಲವಾಗುವಂತೆ ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಮೂರು, ಬೀದರ್ನಲ್ಲಿ ಎರಡು ಮತ್ತು ಕಲಬುರಗಿಯಲ್ಲಿ ಎರಡು ನ್ಯೂ ಏಜ್ ಇನ್ನೋವೇಷನ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.