
ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.
ರಾಮನಗರ (ಮಾ.14): ಚುನಾವಣೆ ಸಮಯದಲ್ಲಿ ನಾವೂ ರೆಸಾರ್ಟ್ಗೆ ಹೋಗ್ತೇವೆ. ಹಾಗೆಯೇ ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು. ವಂಡರ್ ಲಾ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ.
ಅವರನ್ನು ಸ್ವಾಗತಿಸಿ ಗೌರವಿಸೋದು ನನ್ನ ಕರ್ತವ್ಯ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ರಾಜಕೀಯ ಅಂದ ಮೇಲೆ ಇವೆಲ್ಲಾ ಸಹಜ ಎಂದರು. ನಿನ್ನೆ ಕಾಂಗ್ರೆಸ್ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ, ನಾವು 30ಕ್ಕೂ ಹೆಚ್ಚು ಶಾಸಕರು ಮೂರಕ್ಕೂ ಹೆಚ್ಚು ಬಾರಿ ಗೆದ್ದಿದ್ದೇವೆ. ಮಂತ್ರಿ ಮಂಡಲದಲ್ಲಿ ನಮಗೂ ಅವಕಾಶ ಬೇಕು. ಈಗಾಗಲೇ ಸರ್ಕಾರ ಎರಡೂವರೆ ವರ್ಷ ಪೂರೈಸಿದೆ. ಜೊತೆಗೆ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಇದೆ. ಅದನ್ನೂ ಬಗೆಹರಿಸಿ ಅಂತ ಕೇಳಲು ಹೈಕಮಾಂಡ್ ಬಳಿ ಹೋಗಲು ಸಭೆ ಮಾಡಿದ್ದೇವೆ ಎಂದರು.
ಮಾತು ಕೊಟ್ಟಿದ್ದೀರಾ ಅಂತ ಕೇಳಲು ಹೈಕಮಾಂಡ್ ಅನ್ನು ಭೇಟಿ ಮಾಡುತ್ತೇವೆ. ಅಧಿವೇಶನ ಮುಗಿದ ಬಳಿಕ ದೆಹಲಿಗೆ ಹೋಗುತ್ತೇವೆ. ಕನಿಷ್ಠ 20 ಹಿರಿಯರಿಗೆ ಅವಕಾಶ ಕೊಡಿ ಅಂತ ಕೇಳುತ್ತೇವೆ. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದ್ದು, ಸಮಸ್ಯೆ ಬಗೆಹರಿಸಲಿದೆ. ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ. ನಾನು ಐದು ಬಾರಿ ಗೆದ್ದಿದ್ದೇನೆ, ಆದರೆ ಒಂದೇ ಪಕ್ಷದಲ್ಲಿ ಗೆದ್ದಿಲ್ಲ ಅನ್ನೋದು ದುರಂತ ಎಂದರು.
ಕ್ಷೇತ್ರಕ್ಕೆ ಒಳ್ಳೆಯ ಅನುದಾನ
ರಾಜ್ಯ ಬಜೆಟ್ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಬಜೆಟ್ನಲ್ಲಿರುವ ಕೆಲಸವನ್ನೇ ಅನುಷ್ಠಾನ ಮಾಡಬೇಕೆಂಬ ಕಾನೂನು ಇಲ್ಲ. ಕ್ಯಾಬಿನೆಟ್ ನಲ್ಲಿ ಇಟ್ಟು ನಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಬಜೆಟ್ ಎಂಬುದು ಸುಪ್ರೀಂ ಕೋರ್ಟ್ ಆದೇಶ ಅಲ್ಲ. ನಮಗೆ ಬೇಕಾದಾಗ ಅದನ್ನ ಬದಲಾಯಿಸಬಹುದು. ನಮಗೆ ನಾಯಕತ್ವ ಬದಲಾವಣೆ ವಿಚಾರ ಬಿಟ್ಟರೆ ಬೇರೆಲ್ಲದರಲ್ಲೂ ಸಮಾಧಾನ ಇದೆ. ನಮ್ಮ ಕ್ಷೇತ್ರಕ್ಕೆ ಒಳ್ಳೆಯ ಅನುದಾನ ಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸ ಆಗುತ್ತಿದೆ ಎಂದು ಬಾಲಕೃಷ್ಣ ಹೇಳಿದರು.