
ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ, ಹೆಣ್ಣು ಮಗು ಜನಿಸಿದ್ದ ಕಾರಣಕ್ಕೆ ಪೋಷಕರು ನವಜಾತ ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಆರೋಗ್ಯವಾಗಿದೆ. ಸದ್ಯ ಪೋಷಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು: ಹೆಣ್ಣು ಮಗು ಜನಿಸಿದ್ದ ಕಾರಣಕ್ಕೆ ಪೋಷಕರು ನವಜಾತ ಶಿಶುವನ್ನೇ ರಸ್ತೆಬದಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹೆಚ್‌ಎಸ್‌ಆರ್ ಲೇಔಟ್‌ನ 5ನೇ ಸೆಕ್ಟರ್‌ನಲ್ಲಿರುವ ಶಾಲೆಯೊಂದರ ಸಮೀಪದ ರಸ್ತೆ ಬದಿಯಲ್ಲಿ ನವಜಾತ ಹೆಣ್ಣುಮಗು ಪತ್ತೆಯಾದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ತಕ್ಷಣವೇ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನವಜಾತ ಶಿಶುವನ್ನು ರಕ್ಷಣೆ
ಮಾಹಿತಿ ಪಡೆದ ಕೂಡಲೇ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ನವಜಾತ ಶಿಶುವನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ಪ್ರಕಾರ ಮಗು ಸದ್ಯ ಆರೋಗ್ಯವಾಗಿದ್ದು ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ.
ಪೋಷಕರಿಗಾಗಿ ಹುಡುಕಾಟ
ಪೊಲೀಸರು ಪ್ರಾಥಮಿಕವಾಗಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ನವಜಾತ ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟುಹೋದ ಪೋಷಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮಗುವನ್ನು ಯಾರು ಮತ್ತು ಯಾವ ಸಂದರ್ಭಗಳಲ್ಲಿ ಇಲ್ಲಿ ಬಿಟ್ಟು ಹೋಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಇನ್ನೂ ಇರುವ ಅಸಮಾನತೆ ಮತ್ತು ಮೂಢನಂಬಿಕೆಗಳನ್ನೂ ಪ್ರಶ್ನಿಸುವಂತೆ ಮಾಡಿದ್ದು, ಸ್ಥಳೀಯರು ಕೂಡ ಈ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.