ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav

ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav



ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ರದ್ದು! | South Western Railway Promotional Exam Kannadigas Betrayed Again Kannada Option Revoked Just 4 Days Before Rav

ನೈಋತ್ಯ ರೈಲ್ವೆಯು ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವುದಾಗಿ ಹೇಳಿ, ಕೊನೆ ಕ್ಷಣದಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತಗೊಳಿಸಿದೆ. ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಬಂದ ಈ ಅಧಿಸೂಚನೆಯು, ಕನ್ನಡದಲ್ಲೇ ಸಿದ್ಧತೆ ನಡೆಸಿದ್ದ ಕನ್ನಡಿಗ ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವೆಸಗಿದೆ. 

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ (ಮಾ.15) ರೈಲ್ವೆಯ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಕನ್ನಡಿಗರಿಗೆ ಅನ್ಯಾಯದ ಬಗ್ಗೆ ಕನ್ನಡಿಗರು ಎಷ್ಟೇ ಧ್ವನಿ ಎತ್ತಿದ್ದರೂ ಅನ್ಯಾಯ ಮಾತ್ರ ನಿಲ್ಲುತ್ತಿಲ್ಲ. ಒಂದಲ್ಲಾ ಒಂದು ನೆಪಹೇಳಿ ಕನ್ನಡಿಗರಿಗೆ ಹುದ್ದೆ ಮತ್ತು ಮುಂಬಡ್ತಿ ನಿರಾಕರಿಸಲಾಗುತ್ತಿದೆ. ಇದಕ್ಕೆ ಹೊಸ ಉದಾರಹಣೆ ಮಾ.17ರಂದು ನಿಗದಿಯಾಗಿರುವ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಮುಂಬಡ್ತಿಗಾಗಿ ನಡೆಸುತ್ತಿರುವ ಪರೀಕ್ಷೆ. ಮೊದಲು ಕನ್ನಡದಲ್ಲೂ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದ ರೈಲ್ವೆ, ಇದೀಗ ಏಕಾಏಕಿ ಹಿಂದಿ ಮತ್ತು ಇಂಗ್ಲಿಷ್‌ ಮಾತ್ರ ಪರೀಕ್ಷೆ ಬರೆಯಬಹುದು ಎನ್ನುವ ಸ್ಪಷ್ಟನೆ ಮೂಲಕ ಕನ್ನಡದಲ್ಲೇ ಪರೀಕ್ಷೆಗೆ ತಯಾರಾಗಿದ್ದವರಿಗೆ ಶಾಕ್‌ ನೀಡಿದೆ.

ವಿಭಾಗಮಟ್ಟದಲ್ಲಿ ನಡೆಯುವ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ ಜೊತೆ ಪ್ರಾದೇಶಿ ಭಾಷೆಯಲ್ಲೂ ನಡೆಸಬೇಕೆಂಬ ನಿಯಮವನ್ನು ಗಾಳಿ ತೂರಿಗೆ ಪರೀಕ್ಷೆಗೆ ಸಜ್ಜಾಗಿದ್ದ ಕನ್ನಡಿಗರಿಗೆ ಇಲಾಖೆ ಮತ್ತೆ ದ್ರೋಹ ಬಗೆದಿದೆ.

ಅಧಿಸೂಚನೆ:

ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ 2025ರ ಸೆ.25ರಂದು ಗೂಡ್ಸ್ ಟ್ರೇನ್ ಮ್ಯಾನೇಜರ್ (ಶೇ.60 ಪ್ರಮೋಷನಲ್ ಕೋಟಾ) 194 ಹುದ್ದೆ ಹಾಗೂ 2025ರ ನ.5ರಂದು ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ (Limited departmental compitetive examination) (ಶೇ.15 ಪ್ರಮೋಷನಲ್ ಕೋಟಾ) 101 ಮುಂಬಡ್ತಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಈ ಪರೀಕ್ಷೆ ಮಾ.17ರಂದು ನಿಗದಿಯಾಗಿದೆ.

ಮಾತೃಭಾಷೆ ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡಿರುವುದಕ್ಕೆ ಸಂತಸಗೊಂಡಿದ್ದ ಕನ್ನಡಿಗರು ಕನ್ನಡ ಭಾಷೆಯಲ್ಲಿಯೇ ಓದಿ ಪರೀಕ್ಷೆಗೆ ಸಿದ್ಧರಾಗಿದ್ದರು. ಆದರೆ, ರೈಲ್ವೆ ಮಂಡಳಿಯು ಕನ್ನಡಿಗರ ಆಸೆ ಅರಳುವುದಕ್ಕೂ ಮೊದಲೇ ಚಿವುಟಿ ಹಾಕಿದೆ.

ಪರೀಕ್ಷೆ ಕೇವಲ 4 ದಿನ ಉಳಿದಿದ್ದು, ಈ ವೇಳೆ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಮಾ.12ರಂದೇ ಅಧಿಸೂಚನೆ ಹೊರಡಿಸಿರುವಂತೆ ಶುಕ್ರವಾರ (ಮಾ.13) ಸಂಜೆ ಹೊಸ ಅಧಿಸೂಚನೆಯ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ನಮಗೆ ಮಾಹಿತಿ ಇಲ್ಲ:

ನಮಗೆ ಯಾವುದೇ ಸ್ಪಷ್ಟೀಕರಣದ ಅಧಿಸೂಚನೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಈವರೆಗೂ ಯಾವ ಅಧಿಕಾರಿಯೂ ಮಾಹಿತಿ ನೀಡಿಲ್ಲ. ಹಾಗೊಂದು ವೇಳೆ ಅಧಿಸೂಚನೆ ತಿದ್ದುಪಡಿ ಮಾಡಿದ್ದರೆ ಅಧಿಕಾರಿಗಳು ತಿಳಿಸಬೇಕಿತ್ತು ಎಂದು ಪರೀಕ್ಷಾರ್ಥಿಗಳು ಅಳಲು ತೊಡಿಕೊಂಡಿದ್ದಾರೆ.

ಕಡತಕ್ಕೆ ಸೀಮಿತವಾದ ಆದೇಶ:

ರೈಲ್ವೆ ಸಚಿವಾಲಯವು ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ರೈಲ್ವೆ ಪರೀಕ್ಷೆ ನಡೆಸಬೇಕೆಂಬ ಆದೇಶ 1992ರ ಜುಲೈ 8ರಿಂದಲೂ ಇದೆ. ವಿಭಾಗ ಮಟ್ಟದಲ್ಲಿ ನಡೆಯುವಂತಹ ಎಲ್ಲ ಪರೀಕ್ಷೆಗಳಲ್ಲಿ 3 ಭಾಷೆಯಲ್ಲಿ ಅಂದರೆ ಇಂಗ್ಲಿಷ್‌, ಹಿಂದಿ ಹಾಗೂ ಆಯಾ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷಾ ಪತ್ರಿಕೆ ಇರಬೇಕೆಂಬ ನಿಯಮವಿದೆ. ಆದರೂ, ನೈಋತ್ಯ ರೈಲ್ವೆ ವಲಯದಲ್ಲಿ ನಡೆದ ಎಲ್ಲ ಮುಂಬಡ್ತಿ ಪರೀಕ್ಷೆ ಹಾಗೂ ಇತ್ತೀಚೆಗೆ ಹೊರಡಿಸಲಾದ ಅಧಿಸೂಚನೆಯಲ್ಲಿ ಕನ್ನಡ ಭಾಷೆಯನ್ನು ತೆಗೆದು ಹಾಕಲಾಗಿದೆ. ಇದೇ ಇಲಾಖೆಯಲ್ಲಿ ಆರ್‌ಆರ್‌ಬಿ, ಆರ್‌ಆರ್‌ಸಿ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮುಂಬಡ್ತಿ ಪಡೆಯಲು, ವಿವಿಧ ಉನ್ನತ ಹುದ್ದೆಗಳಿಗೆ ಅರ್ಜಿ ಹಾಕಿದರೆ ಅಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಉದ್ದೇಶಪೂರ್ವಕ ಹುನ್ನಾರ

ಕನ್ನಡದಲ್ಲಿ ಪರೀಕ್ಷಾ ತಯಾರಿ ನಡೆಸಿದ ಪರೀಕ್ಷಾರ್ಥಿಗಳಿಗೆ ಇದೀಗ ದಿಕ್ಕು ತೋಚದಂತಾಗಿದೆ. ರೈಲ್ವೆ ಇಲಾಖೆ ಉದ್ದೇಶ ಪೂರ್ವಕವಾಗಿ ಮಾಡಿರುವ ಹುನ್ನಾರ ಎಂದು ಪರೀಕ್ಷಾರ್ಥಿಗಳ ಆರೋಪಿಸಿದ್ದಾರೆ. ಕೋರ್ಟ್ ಮೆಟ್ಟಿಲೇರಿ ಈ ಪರೀಕ್ಷೆಗೆ ತಡೆ ನೀಡುವಂತೆ ಕೋರಲು ಅವಕಾಶವೂ ಇಲ್ಲದಂತೆ, ಪರೀಕ್ಷೆಗೆ ಕೇವಲ 4 ದಿನ ಇರುವ ಮೊದಲು ಹೊಸ ಸೂಚನೆ ನೀಡಿದೆ. ==

ಸ್ಪಷ್ಟನೆ ನೀಡಿ ಪರೀಕ್ಷೆ

ರೈಲ್ವೆ ಇಲಾಖೆಯಲ್ಲಿನ ಮುಂಬಡ್ತಿ ಪರೀಕ್ಷೆಗಳು ಕಂಪ್ಯೂಟರ್ ಆಧರಿತ ಆಗಿರುವುದರಿಂದ ಇಂಗ್ಲಿಷ್, ಹಿಂದಿ ಭಾಷೆ ಮಾತ್ರ ತೋರಿಸುತ್ತಿದೆ. 3 ಭಾಷೆಯಲ್ಲಿ ಪರೀಕ್ಷೆ ನಡೆಸುವುದಾಗಿ ಮೊದಲು ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ ಕಳೆದ ಡಿ.25ರಂದು ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟೀಕರಣ ನೀಡಲಾಗಿತ್ತು. ಇದೀಗ ಅದರಂತೆಯೇ ಪರೀಕ್ಷೆ ನಡೆಸಲಾಗುತ್ತಿದೆ.

– ಮಂಜುನಾಥ ಕನಮಡಿ, ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ



Source link

Leave a Reply

Your email address will not be published. Required fields are marked *