
ಟಿ20 ವಿಶ್ವಕಪ್ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಬಾಬರ್ ಅಜಂ ಸೇರಿದಂತೆ ಪ್ರಮುಖ ಆಟಗಾರರು ಸಂಪೂರ್ಣ ಫಿಟ್ ಇಲ್ಲದಿದ್ದರೂ ವಿಶ್ವಕಪ್ ಆಡಿದ್ದಾರೆ ಎಂದು ಆಯ್ಕೆ ಸಮಿತಿ ಸದಸ್ಯ ಆಕಿಬ್ ಜಾವೇದ್ ಆರೋಪಿಸಿದ್ದು, ಪಿಸಿಬಿ ತನಿಖೆಗೆ ಒತ್ತಾಯಿಸಿದ್ದಾರೆ.
ಕರಾಚಿ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಹೀನಾಯ ಸೋಲಿನ ಬಳಿಕ, ಪಾಕ್ ಕ್ರಿಕೆಟ್ ವಲಯದಲ್ಲಿ ಹೊಸದೊಂದು ವಿವಾದ ಹುಟ್ಟಿಕೊಂಡಿದೆ. ತಂಡದ ಸ್ಟಾರ್ ಆಟಗಾರ ಬಾಬರ್ ಅಜಂ, ಫಖರ್ ಜಮಾನ್ ಮತ್ತು ಸಲ್ಮಾನ್ ಮಿರ್ಜಾ ಅವರು ಸಂಪೂರ್ಣ ಫಿಟ್ ಇಲ್ಲದಿದ್ದರೂ ವಿಶ್ವಕಪ್ ಆಡಿದ್ದಾರೆ ಎಂದು ಆಯ್ಕೆ ಸಮಿತಿ ಸದಸ್ಯ ಆಕಿಬ್ ಜಾವೇದ್ ಆರೋಪಿಸಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕಿಬ್ ಜಾವೇದ್ ಈ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಶ್ವಕಪ್ ಮುಗಿಸಿ ತಂಡ ದೇಶಕ್ಕೆ ವಾಪಸಾದ ಬಳಿಕವಷ್ಟೇ ಆಟಗಾರರ ಗಾಯದ ಬಗ್ಗೆ ಆಯ್ಕೆ ಸಮಿತಿಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ.
ಬಾಬರ್ ಅಜಂ ಮೇಲೆ ಗಂಭೀರ ಆರೋಪ
“ಬಾಬರ್ ಅಜಂ ಮತ್ತು ಫಖರ್ ಜಮಾನ್ ಸದ್ಯಕ್ಕೆ ಆಡಲು ಫಿಟ್ ಇಲ್ಲ. ಹಾಗಾದರೆ, ಟಿ20 ವಿಶ್ವಕಪ್ ಸಮಯದಲ್ಲಿ ಇವರ ಫಿಟ್‌ನೆಸ್ ಅನ್ನು ಯಾರೂ ಗಮನಿಸಿರಲಿಲ್ಲವೇ? ಗಾಯದ ವಿಷಯವನ್ನು ಮುಚ್ಚಿಟ್ಟು ಇವರು ತಂಡದಲ್ಲಿ ಉಳಿದುಕೊಂಡರಾ? ಈ ಬಗ್ಗೆ ಬೋರ್ಡ್ ತನಿಖೆ ನಡೆಸಬೇಕು. ಆಟಗಾರರ ಆರೋಗ್ಯದ ಜವಾಬ್ದಾರಿ ಹೆಡ್ ಕೋಚ್ ಮತ್ತು ಫಿಸಿಯೋ ಮೇಲಿರುತ್ತದೆ. ಒಂದುವೇಳೆ ಗಾಯವಾಗಿದ್ದರೆ, ಆಯ್ಕೆ ಸಮಿತಿಯಾದ ನಮಗೆ ಅವರು ಮಾಹಿತಿ ನೀಡಬೇಕಿತ್ತು,” ಎಂದು ಆಕಿಬ್ ಜಾವೇದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಬಾಬರ್ ಅಜಂ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿತ್ತು. ಸದ್ಯ ಬಾಂಗ್ಲಾದೇಶ ವಿರುದ್ಧದ ಸರಣಿ ಮತ್ತು ನ್ಯಾಷನಲ್ ಟಿ20 ಚಾಂಪಿಯನ್‌ಶಿಪ್‌ನಿಂದಲೂ ಬಾಬರ್ ಹೊರಗುಳಿದಿರುವುದು ಗಾಯದ ಕಾರಣದಿಂದಲೇ ಎಂದು ಆಕಿಬ್ ಸ್ಪಷ್ಟಪಡಿಸಿದ್ದಾರೆ.
ಬಾಬರ್ ಹಿಂದೆ ಸರಿದಿದ್ದೇಕೆ? ಗೊಂದಲ
ಆಕಿಬ್ ಜಾವೇದ್ ಗಾಯದ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ಬಾಬರ್ ಅಜಮ್ ತಮ್ಮ ಬ್ಯಾಟಿಂಗ್ ತಂತ್ರದಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ವಿಶ್ರಾಂತಿ ಪಡೆದಿದ್ದಾರೆ ಎಂದು ಬೇರೆ ವರದಿಗಳು ಹೇಳುತ್ತಿವೆ. ಮಾರ್ಚ್ 26ರಂದು ಆರಂಭವಾಗಲಿರುವ ಪಾಕಿಸ್ತಾನ ಸೂಪರ್ ಲೀಗ್‌ಗೂ ಮುನ್ನ ಫಾರ್ಮ್‌ಗೆ ಮರಳಲು ಅವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್‌ನಲ್ಲಿನ ಕಳಪೆ ಪ್ರದರ್ಶನದ ನಂತರ, ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಬಾಬರ್ ಅಜಂ ಅವರನ್ನು ಕೈಬಿಡಲಾಗಿತ್ತು. ಇದರ ಬೆನ್ನಲ್ಲೇ ಅವರ ಫಿಟ್‌ನೆಸ್ ಕುರಿತ ಚರ್ಚೆಗಳು ಕೂಡ ಮುನ್ನೆಲೆಗೆ ಬಂದಿವೆ.
ಪಾಕ್ ಆಟಗಾರರಿಗೆ ದಂಡ ವಿಧಿಸಿಲ್ಲ: ಪಿಸಿಬಿ ಸ್ಪಷ್ಟನೆ
ಲಾಹೋರ್: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿದ್ದಕ್ಕೆ ದಂಡ ವಿಧಿಸಲಾಗಿದೆ ಎನ್ನುವ ವದಂತಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡ(ಪಿಸಿಬಿ)ತಳ್ಳಿ ಹಾಕಿದ್ದು, ‘ಯಾವ ಆಟಗಾರರಿಗೂ ದಂಡ ವಿಧಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
ಟಿ20 ವಿಶ್ವಕಪ್‌ನಲ್ಲಿ ಪಾಕ್ ಸೆಮಿಫೈನಲ್ ಕೂಡ ತಲುಪಿರಲಿಲ್ಲ. ಹೀಗಾಗಿ ಆಟಗಾರರಿಗೆ ತಲಾ 50 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಮಾತನಾಡಿರುವ ಪಿಸಿಬಿ ಅಮೀರ್ ಮೀರ್, ‘ಆಟಗಾರರಿಗೆ ದಂಡವನ್ನು ವಿಧಿಸಿಲ್ಲ. ಆದರೆ ಆಟಗಾರರು ಉತ್ತಮ ಪ್ರದರ್ಶನ ನೀಡಿದಾಗ ಅವರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತದೆ. ಹಾಗಾಗಿ ಅವರ ಪ್ರದರ್ಶನಗಳಿಗೆ ಅವರನ್ನು ಜವಾಬ್ದಾರರನ್ನಾಗಿ ಮಾಡಲು ಯೋಚಿಸುತ್ತಿದ್ದೇವೆ’ ಎಂದಿದ್ದಾರೆ.