
ಗದಗ, ಮಾರ್ಚ್ 15: ಮನೆ ಮಗಳು ಮದುವೆ ಅಂದ್ರೆ ದೊಡ್ಡಪ್ಪ-ಚಿಕ್ಕಪ್ಪಂದಿರ ಸಮೇತ ಕುಟುಂಬಸ್ಥರೆಲ್ಲ ಸಂಭ್ರಮಿಸ್ತಾರೆ. ಎಲ್ಲವನ್ನೂ ಖುದ್ದಾಗಿ ತಾವೇ ನಿಂತು ನಿಭಾಯಿಸುತ್ತಾರೆ. ಮನೆ ಮಗಳು ಹೋದ ಮನೆಯಲ್ಲಿಯೂ ಚೆನ್ನಾಗಿರಬೇಕೆಂಬ ಕಾರಣಕ್ಕೆ ಯಾವ ತ್ಯಾಗಕ್ಕೂ ಸಿದ್ಧರಿದ್ದಾರೆ. ಆದರೆ ಗದಗದಲ್ಲಿ ಇವೆಲ್ಲದಕ್ಕೂ ತದ್ವಿರುದ್ಧ ಎಂಬ ಘಟನೆಯೊಂದು ನಡೆದಿದೆ. ಮಗಳ ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸಹೋದರರಿಂದಲೇ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ.
ಹೌದು, ಗಿರೀಶಪ್ಪ ಆಲೂರು(47) ಮೃತ ದುರ್ದೈವಿ. ಮಗಳ ಮದುವೆ ವಿಚಾರವಾಗಿ ಫೆ.27ರಂದು ಸಹೋದರರಿಂದಲೇ ಗಂಭೀರವಾಗಿ ಹಲ್ಲೆಗೊಳಗಾದ ಇವರು ಚಿಕಿತ್ಸೆ ಫಲಿಸದೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಗಿರೀಶಪ್ಪ ಮತ್ತು ಲಕ್ಷ್ಮೀ ದಂಪತಿಯ ಮಗಳಾದ ಪವಿತ್ರಾಳನ್ನು ಇತ್ತೀಚೆಗಷ್ಟೇ ಸಂಬಂಧದಲ್ಲಿಯೇ ಹುಡುಗನ ನೋಡಿ ಮದುವೆ ಮಾಡಿಕೊಡಲಾಗಿದೆ. ಆದರೆ ಈ ಮದುವೆಗೆ ಗಿರೀಶಪ್ಪ ಸಹೋದರರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ತಮ್ಮನ ಮನೆಯಲ್ಲಿದ್ದ ತಂದೆ ತಾಯಿ ಆಶೀರ್ವಾದ ಪಡೆದು ಬಾರಮ್ಮ ಎಂದು ಗಿರೀಶಪ್ಪ ಮಗಳನ್ನು ಕಳುಹಿಸಿದ್ದರು. ಮದುವೆ ವಿಷಯವಾಗಿ ನಮ್ಮನ್ನ ಕೇಳುವವರು ಈಗ ಯಾಕೆ ಬಂದಿದ್ದು ಎಂದು ಈ ವೇಳೆ ಸಹೋದರರಾದ ಈರಣ್ಣ ಮತ್ತು ಶಿವಕುಮಾರ್ ಗಲಾಟೆ ತೆಗೆದಿದ್ದರು.
ಇದನ್ನೂ ಓದಿ: ರೋಗಿಗಳ ರಕ್ಷಣೆಗೆ ಇರುವ ಆಯಂಬುಲೆನ್ಸ್ನಲ್ಲಿ ಜನರ ಸಾಗಾಟ! ಕುರಿಗಳಂತೆ ಜನ ತುಂಬುತ್ತಿರುವ ವಿಡಿಯೋ ವೈರಲ್
ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿಗಳು ಗಿರೀಶಪ್ಪ ಮತ್ತು ಅವರ ಪತ್ನಿ ಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿದ್ದರು. ಗಿರೀಶಪ್ಪ ಮೇಲೆ ಬಾರುಕೋಲು, ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಹೊಡೆತ ಏಟಿಗೆ ತಲೆ, ಕೈ, ಎದೆ, ಹೊಟ್ಟೆ ಸೇರಿ ಮೈತುಂಬ ಬಾಸುಂಡೆ ಬಂದಿತ್ತು. ಶಿವಕುಮಾರ್ ಆಲೂರು, ರತ್ನವ್ವ ಆಲೂರು, ಈರಣ್ಣ ಆಲೂರು ಮತ್ತು ಗೀತಾ ಆಲೂರು ಹಲ್ಲೆ ನಡೆಸಿರುವ ಆರೋಪಿಗಳು ಎನ್ನಲಾಗಿದ್ದು, ಘಟನೆಯಲ್ಲಿ ಗಿರೀಶಪ್ಪ ತೀವ್ರ ಗಾಯಗೊಂಡಿದ್ದರು. ಕೆಲಸ ಸರ್ಕಾರಿ ಇರುವ ಹುಡುಗನಿಗೇ ಮಗಳನ್ನ ಕೊಟ್ಟು ಮದ್ವೆ ಮಾಡು ಎಂದು ಶಿವಕುಮಾರ್ ತಿಳಿಸಿದರೂ, ಸರ್ಕಾರಿ ಕೆಲಸದ ಹುಡುಗನಾದ್ರೆ ನಮ್ಮನ್ನ ನೋಡಲು ಬರೋದಿಲ್ಲ ಎಂದು ಗಿರೀಶಪ್ಪ ವಾದಿಸಿದ್ದರು. ಕೊನೆಗೆ ತನ್ನಾಸೆಯಂತೆ ಮಗಳನ್ನ ಕೊಟ್ಟು ಮದುವೆ ಮಾಡಿದ್ದೆ. ಆದರೆ ಅಂತಿಮವಾಗಿ ಅಣ್ಣ ಮಾತು ಕೇಳಲಿಲ್ಲ ಎಂಬ ಸಹೋದರ ಸಿಟ್ಟಿಗೆ ಗಿರೀಶಪ್ಪ ಅವರ ಪ್ರಾಣ ಪಕ್ಷಿಯೇ ಈಗ ಹಾರಿಹೋಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.