
ಪಶ್ಚಿಮ ಬಂಗಾಳವೂ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ದಿನಾಂಕ ಘೋಷಣೆಯಾಗಿದೆ. ಈ ಹಿಂದೆ ಹಲವು ಚುನಾವಣಾ ಹಿಂಸಾಚಾರಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಕೇವಲ 2 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಅದಕ್ಕೇನು ಕಾರಣ…
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಒಂದೇ ಹಂತದಲ್ಲಿ ಮತದಾನ:
ಪಶ್ಚಿಮ ಬಂಗಾಳವೂ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ದಿನಾಂಕ ಘೋಷಣೆಯಾಗಿದೆ. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ನಡೆದ 2021 ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಯಿತು. ಮೊದಲ ಹಂತದ ಮತದಾನ ಮಾರ್ಚ್ 27 ರಂದು ಮತ್ತು ಕೊನೆಯದು ಏಪ್ರಿಲ್ 29 ರಂದು ನಡೆಯಿತು. ಆದರೆ ಈ ಬಾರಿ ಕೇವಲ 2 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಹಲವಾರು ರಾಜಕೀಯ ಪಕ್ಷಗಳ ನಾಯಕರು ಈ ಬಾರಿ ಎರಡು ಅಥವಾ ಮೂರು ಹಂತಗಳಲ್ಲಿ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗದ ಅಧಿಕಾರಿಗಳಿಗೆ ತಿಳಿಸಿದ್ದರು ಎಂದು ವರದಿಯಾಗಿದೆ. ದೀರ್ಘ ವೇಳಾಪಟ್ಟಿ ಚುನಾವಣಾ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಮತದಾನದ ಬಗ್ಗೆ ಸಾರ್ವಜನಿಕರ ಮನೋಭಾವವನ್ನು ಕಡಿಮೆ ಮಾಡುತ್ತದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದರು.
ಬಹು ಹಂತಗಳಲ್ಲಿ ಚುನಾವಣೆ ನಡೆಸುವ ಹಿಂದಿನ ಒಂದು ತಾರ್ಕಿಕ ಉದ್ದೇಶವೆಂದರೆ ಇದು ಕೇಂದ್ರ ಭದ್ರತಾ ಪಡೆಗಳ ನಿಯೋಜನೆಯನ್ನು ಸುಲಭಗೊಳಿಸುತ್ತದೆ. ಬಂಗಾಳವು ಹಿಂದಿನ ಚುನಾವಣೆಗಳಲ್ಲಿ ರಾಜಕೀಯ ಹಿಂಸಾಚಾರ ಮತ್ತು ಜೀವಹಾನಿಯ ಸಾಕಷ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ ಈ ಬಾರಿ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಕೇಂದ್ರ ಪಡೆಗಳು ಈಗಾಗಲೇ ಬೀಡುಬಿಟ್ಟಿವೆ, ಇದರಿಂದಾಗಿ ದೀರ್ಘಾವಧಿಯ ಚುನಾವಣೆ ಅನಗತ್ಯವಾಗಿದೆ ಎಂದು ಪಕ್ಷಗಳು ವಾದಿಸಿವೆ. ಹೀಗಾಗಿ ಚುನಾವಣಾ ಆಯೋಗವೂ 8 ಹಂತಗಳಲ್ಲಿ ಕಳೆದ ಬಾರಿ ನಡೆದ ಚುನಾವಣೆಯನ್ನು ಈ ಬಾರಿ ಕೇವಲ 2 ಹಂತಗಳಲ್ಲಿ ನಡೆಸಿ ಮುಗಿಸಲು ನಿರ್ಧರಿಸಿದೆ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಸರ್ ನಂತರ ನಡೆಯುತ್ತಿರುವ ಹೈವೋಲ್ಟೇಜ್ ಚುನಾವಣೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.
ಕೇರಳ
ಇತ್ತೀಚೆಗೆ ಕೇರಳಂ ಎಂದು ಮರುನಾಮಕರಣಗೊಂಡ ಕೇರಳದಲ್ಲಿ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 4 ರಂದು ನಡೆಯಲಿದೆ.
ಅಸ್ಸಾಂ
ಹಾಗೆಯೇ ಅಸ್ಸಾಂ ವಿಧಾನಸಭಾ ಚುನಾವಣೆ ಏಪ್ರಿಲ್ 9 ರಂದು ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.
ತಮಿಳುನಾಡು:
ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಪುದುಚೇರಿ:
ಪುದುಚೇರಿಯಲ್ಲಿ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಯಾವುದೇ ಅರ್ಹ ಮತದಾರರನ್ನು ಹೊರಗಿಡಲಾಗುವುದಿಲ್ಲ: ಚುನಾವಣಾ ಆಯೋಗ
ಯಾವುದೇ ಅರ್ಹ ಮತದಾರರನ್ನು ಹೊರಗಿಡಲಾಗುವುದಿಲ್ಲ, ಯಾವುದೇ ಅನರ್ಹ ವ್ಯಕ್ತಿ ಮತ ಹಾಕುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಚುನಾವಣಾ ದಿನಾಂಕ ಘೋಷಣೆ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು. ಸಂವಿಧಾನದ 326 ನೇ ವಿಧಿಯ ಪ್ರಕಾರ, ಯಾವುದೇ ಅರ್ಹ ಮತದಾರರನ್ನು ಹೊರಗಿಡಬಾರದು ಮತ್ತು ಅದೇ ಸಮಯದಲ್ಲಿ, ಯಾವುದೇ ಅನರ್ಹ ವ್ಯಕ್ತಿಯನ್ನು ಸೇರಿಸಬಾರದು ಎಂದು ಜ್ಞಾನೇಶ್ ಕುಮಾರ್ ಹೇಳಿದರು..
ಪ್ರತಿಯೊಂದು ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯಗಳು, ಸೂಚನಾ ಫಲಕಗಳು, ರ್ಯಾಂಪ್ಗಳು, ಸ್ವಯಂಸೇವಕರೊಂದಿಗೆ ವೀಲ್ಚೇರ್ಗಳು, ಸಹಾಯ ಕೇಂದ್ರಗಳು, ನೀರು ಸರಬರಾಜು ಕೇಂದ್ರಗಳು, ಮತದಾನ ವಿಭಾಗದ ಒಳಗೆ ಸಾಕಷ್ಟು ಬೆಳಕು ಮತ್ತು ಸಾಕಷ್ಟು ನೆರಳು ಇರಬೇಕು ಎಂದು ಚುನಾವಣಾ ಆಯೋಗವು ನಿರ್ದೇಶನಗಳನ್ನು ನೀಡಿದೆ. ನಮ್ಮ ಎಲ್ಲಾ ಗೌರವಾನ್ವಿತ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇದೇ ವೇಳೆ ಹೇಳಿದರು.