
ಹಲವು ವರ್ಷಗ ದರೋಡೆ ಹಾಗೂ ಅಧಿಕಾರಿಗಳು ಉತ್ಸವದ ಬಳಿಕ ಬಿಬಿಎಂಪಿಯನ್ನು ಜಿಬಿಎ ಎನ್ನುವ ದೊಡ್ಡ ನಾಟಕ ಮಂಡಳಿ ಚುನಾವಣೆಗೆ ತಯಾರಿ ನಡೆಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈಗ ಶನಿವಾರದಂದು ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿರುವ ಕರಡು ಮತಪಟ್ಟಿಯು ಕಾಂಗ್ರೆಸ್ನ ನಾಟಕ ಹಾಗೂ ಸುಳ್ಳುಗಳನ್ನು ಅನಾವರಣ ಮಾಡಿದೆ. ಹಾಗೆಯ ಮತಚೋರಿ ಎಂದು ರಾಹುಲ್ ಗಾಂಧಿ ಪಟಾಲಂನ ಸುಳ್ಳುಗಳ ಸರಣಿಯ ಮುಂದುವರಿದ ಭಾಗ ಖಾತ್ರಿ ಏಕೆ. ಆದರೀಗ ಕರ್ನಾಟಕ ರಾಜ್ಯ ಚುನಾವಣೆ ಆಯೋಗವನ್ನು ‘ಮತಚೋರಿ’ ನಾನು ಅನಾವರಣ ಮಾಡುತ್ತೇನೆ.
ಶನಿವಾರ ಸಂಜೆ ಮಲಗುವ ವೇಳೆಗೆ ಜಿಬಿಎ ಕರಡು ಮತಪಟ್ಟಿ ಬಿಡುಗಡೆ ಎಂಬ ನೋಟಿಫಿಕೇಷನ್ ನನ್ನ ಮೊಬೈಲ್ಗೆ ಬಂತು. ಕೂಡಲೇ ಜಿಬಿಎ ವೆಬ್ಸೈಟ್ ಹೋಗಿ ನನ್ನ ಹೆಸರು ಹುಡುಕುವ ಪ್ರಯತ್ನ ಮಾಡಿದೆ. ಸತತ ಅರ್ಧಗಂಟೆಯ ಹರಸಾಹಸದ ಬಳಿಕ ಕೊನೆಗೂ ನಮ್ಮ ಬಡಾವಣೆಯಲ್ಲಿನ ಮತಪಟ್ಟಿಯಲ್ಲಿ ಹೆಸರು ಕಾಣಿಸಿತು. ಬಳಿಕ ನನ್ನ ಹೆಂಡತಿಯ ಹೆಸರನ್ನು ನಾಲ್ಕು ಬಾರಿ ಹುಡುಕಿದರೂ ಸಿಗಲಿಲ್ಲ. ಮತ್ತೆ ಬೆಳಗ್ಗೆ ಎದ್ದು ಲ್ಯಾಪ್ಟಾಪ್ನಲ್ಲಿ ಹುಡುಕಿದೆ. ಮತಪಟ್ಟಿಯಿಂದ ಆಕೆಯ ಹೆಸರು ಮಾಯವಾಗಿತ್ತು. ಇದಾದ ಬಳಿಕ ಆಕೆಯ ಹೆಸರನ್ನು ಕೇಂದ್ರ ಚುನಾವಣೆ ಆಯೋಗದ ವೆಬ್ಸೈಟ್ನಲ್ಲಿ ಹುಡುಕಿದೆ. ಅಲ್ಲಿಯ ಆಕೆಯ ಮತಪತ್ರದ ಎಲ್ಲ ವಿವರ ಹಾಗೂ ಮತಕೇಂದ್ರದ ಮಾಹಿತಿ ಕೂಡ ಇದೆ. ಅದರ ಜೊತೆಗೆ ಸಿರಿಯಲ್ ನಂಬರ್ ಕೂಡ ಲಭ್ಯವಿದೆ. ಬಳಿಕ ನನ್ನ ಮಾಹಿತಿಯನ್ನು ಪರಿಶೀಲಿಸಿದಾಗ ಒಂದಿಷ್ಟು ಸಮಸ್ಯೆ ಕಾಣಿಸಿತು. ನನ್ನ ಸಿರಿಯಲ್ ನಂಬರ್, ಮತಕೇಂದ್ರದ ಸಂಖ್ಯೆ ಬದಲಾಗಿತ್ತು. ಆಗ ರಾಜ್ಯ ಚುನಾವಣೆ ಆಯೋಗ ಹೀಗೆ ನಾಟಕವಾಡಬಹುದೇ ಎಂಬ ಸಂಶಯ ನನಗೆ ಮೂಡಲಾರಂಭಿಸಿತು.
ನಾನು ಕಳೆದ ಲೋಕಸಭೆ ಚುನಾವಣೆ ವೇಳೆಯಲ್ಲಿ ನನ್ನ ಹೆಂಡತಿಯ ಹೆಸರನ್ನು ಸಾಗರ ವಿಧಾನಸಭೆ ಕ್ಷೇತ್ರದ ಮತಪಟ್ಟಿಯಿಂದ ಬೆಂಗಳೂರಿನ ಹಾಲಿಗೆ ವರ್ಗಾಯಿಸಿದ್ದೆ. ಸ್ಥಳೀಯ ಮತಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಆಕೆಗೆ ಕಳೆದ ಲೋಕಸಭೆ ಚುನಾವಣೆ ವೇಳೆ ಮತದಾನವನ್ನೂ ಮಾಡಿದ್ದಳು. ಆದರೆ ಜಿಬಿಎಯ ಕರಡು ಮತಪಟ್ಟಿಯಲ್ಲಿ ಇದು ಕಾಣಿಸಿಕೊಂಡಿಲ್ಲ. ಜೊತೆಗೆ ನಮ್ಮೆಲ್ಲರ ಸಿರಿಯಲ್ ನಂಬರ್ ಕೂಡ ಬದಲಾಗಿದೆ. ನನ್ನ ಗುಮಾನಿಯಂತೆ ರಾಜ್ಯ ಚುನಾವಣೆ ಆಯೋಗದ ಅಧಿಕಾರಿಗಳು 2023ರ ವಿಧಾನಸಭೆ ಚುನಾವಣೆಯ ಮತಪಟ್ಟಿಯನ್ನು ಇರಿಸಿಕೊಂಡು ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿದೆ. 2024ರಲ್ಲಿ ನೂತನ ಮತಪಟ್ಟಿ ಇದ್ದಾಗ ಹಳೆಯ ಮತಪಟ್ಟಿಗೆ ಹೋದದ್ದೇಕೆ ಎಂಬುದು ಸ್ಪಷ್ಟವಾಗಿಲ್ಲ. ಇವೆರಡು ಮತಪಟ್ಟಿಯಲ್ಲಿ ಯಾವ ʼರಾಜಕೀಯʼ ಅಡಗಿದೆ ಎನ್ನುವುದನ್ನು ಸಂವಿಧಾನ ರಕ್ಷಕ ಪಡೆಯೇ ಸ್ಪಷ್ಟಪಡಿಸಬೇಕಾಗಿದೆ. ಇನ್ನೊಂದೆಡೆ ನನ್ನ ಹೆಂಡತಿ ರೀತಿಯಲ್ಲಿ ಮತಪಟ್ಟಿಯಿಂದ ಅನಗತ್ಯವಾಗಿ ಇರುವವರು ಮತ್ತೇಕೆ ನಿಮ್ಮ ಗ್ರೇಟ್ ಜಿಬಿಎ ಕಚೇರಿಗೆ ಅಲೆಯಬೇಕು ಎಂದು ಜನಸಾಮಾನ್ಯರಿಗೆ ಚುನಾವಣಾ ಆಯುಕ್ತರು ನೀಡಬೇಕಾಗಿದೆ.
ಇಂತಹ ದುರುದ್ದೇಶಪೂರ್ವಕವಾದ ಕ್ರಮಕ್ಕೆ ಒಂದು ಸುಳ್ಳನ್ನು ಸೇರಿಸಲಾಗಿದೆ. ಅವರ ಪ್ರಕಾರ ಕಳೆದ ಅಕ್ಟೋಬರ್ನಲ್ಲಿನ ಮಾಹಿತಿ ಪ್ರಕಾರ ಮತಪಟ್ಟಿ ಕರಡು ಪ್ರಕಟಿಸಲಾಗಿದೆ. ಎಂತಹ ವಿಪರ್ಯಾಸವೆಂದರೆ 2024ರ ಏಪ್ರಿಲ್ನಲ್ಲಿ ಪ್ರಕಟಿಸಿದ ಕರಡು ಪಟ್ಟಿಯಲ್ಲಿರುವ ನನ್ನ ಹೆಂಡತಿ ಹೆಸರು, ಇದ್ದಕ್ಕಿದ್ದಂತೆ ಮಾಯವಾಗಿದೆ. ಹಾಗಿದ್ದರೆ ನನ್ನ ಹೆಂಡತಿಯ ಹೆಸರು ಅಕ್ರಮವಾಗಿ ಮತಪಟ್ಟಿಗೆ ಸೇರಿದೆಯೆಂಬ ಸಂಶಯದಿಂದ ರದ್ದು ಮಾಡಬಹುದೇ ಎಂದು ಬಡಾವಣೆಯಲ್ಲಿ ವಿಚಾರಿಸಿದೆ. ಕಳೆದೊಂದು ವರ್ಷದ ನಮ್ಮ ಬಡಾವಣೆಗೆ ಜಿಬಿ ಅಥವಾ ಹಿಂದಿನ ಬಿಬಿಎಂಪಿ ಯಾವುದೇ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಜೊತೆಗೆ ನನ್ನ ಮೊಬೈಲ್ಗೆ ಈ ಸಂಬಂಧ ಯಾವುದೇ ಕರೆ ಕೂಡ ಬಂದಿಲ್ಲ. ಏಕೆಂದರೆ ನನ್ನ ಹೆಂಡತಿಯ ಮತಪತ್ರದಲ್ಲಿ ನನ್ನ ಮತಪತ್ರದ ಜೋಡಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಮಾಹಿತಿ ಹುಡುಕುವಾಗ ನನ್ನ ಸಂಬಂಧವಿದೆ ಎಂದು ಅಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಷ್ಟ ರಾಜ್ಯ ಚುನಾವಣೆ ಆಯೋಗವು ಇಂತಹ ಯಾವುದೇ ಕೆಲಸ ಮಾಡಿಲ್ಲ. ಬದಲಾಗಿ ʼಮಾಸ್ಟರ್’ ಅಣತಿಯಂತೆ 2023ರ ಮತಪಟ್ಟಿಯನ್ನು ಕಣ್ಮುಚ್ಚಿಕೊಂಡು ಮರು ಪ್ರಕಟಿಸಿದೆ.
ರಾಹುಲ್ ಅಣುಬಾಂಬ್ ಹಾಗೂ ಕರ್ನಾಟಕ
ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಹಾಕಿದ್ದ ಅಣುಬಾಂಬ್ ಹಾಗೂ ಹೈಡ್ರೋಜನ್ ಬಾಂಬ್ ನಿಮಗೆಲ್ಲ ಗೊತ್ತಿದೆ. ಅದಾದ ಬಳಿಕ ಆ ಬಾಂಬ್ ಲೋಕದಲ್ಲೂ ಸ್ಫೋಟವಾಗಿತ್ತು. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಪದೇ ಪದೇ ಒಂದು ವಿಚಿತ್ರವಾದ ಬೇಡಿಕೆ ಇರಿಸಿದ್ದರು. ಮತಪಟ್ಟಿಯ ಪಿಡಿಎಫ್ ಫೈಲ್ನಲ್ಲಿ ಸರ್ಚ್ ಅವಕಾಶವನ್ನು ಡಿಸೇಬಲ್ ಮಾಡಲಾಗಿದೆ. ಸರ್ಚ್ ಅವಕಾಶ ಇರುವ ಮತಪಟ್ಟಿಯನ್ನು ನಮ್ಮ ಕೈಗೆ ಕೊಡಿ ಎಂದು ಪದೇ ಪದೇ ಬಾಂಬ್ ಹಾಕುತ್ತಲೇ ಇದ್ದಾರೆ. ಇಂತಹ ಪಟ್ಟಿಯನ್ನು ನೀಡಿದರೆ ಸುಲಭವಾಗಿ ಚುನಾವಣಾ ಆಯೋಗದ ಅಕ್ರಮವನ್ನು ಬಯಲಿಗೆಳೆಯಬಹುದು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಆದರೆ ಮತಪಟ್ಟಿಯ ಸುರಕ್ಷತೆ ಹಾಗೂ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಅದು ಅಸಾಧ್ಯವಾದ ಚುನಾವಣೆಯ ಬಗ್ಗೆ ಲವಲೇಶ ಗೊತ್ತಿರುವ ಅಲ್ಪಜ್ಞಾನಕ್ಕೂ ಗೊತ್ತಿದೆ. ಅಂದ ಹಾಗೆ ರಾಹುಲ್ ಅಣತಿಯನ್ನು ಪಾಲಿಸುವ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ರಾಜ್ಯ ಚುನಾವಣೆ ಆಯೋಗ ಕೂಡ ಪಿಡಿಎಫ್ನಲ್ಲಿ ಸರ್ಚ್ ಅವಕಾಶ ಕೊಟ್ಟಿಲ್ಲ. ಅದನ್ನು ಕೊಡುವುದು ಸರಿಯಲ್ಲ ಎನ್ನುವ ವಾದಕ್ಕೆ ನಾನು ಬದ್ಧವಾಗಿದ್ದೇನೆ. ರಾಹುಲ್ ಗಾಂಧಿ ರೀತಿಯಲ್ಲಿ ಪರಿಸ್ಥಿತಿಗೆ ತಕ್ಕಂತೆ ನಿಲುವು ಬದಲಿಸಲು ಸಾಧ್ಯವಿಲ್ಲ. ಆದರೆ ಕೇವಲ ಸಕ್ರಮವನ್ನಷ್ಟೇ ಮಾಡುವ ಮಂದಿ ಮಾಡಿರುವ ತೆರೆಮರೆಯ ನಾಟಕವನ್ನು ನಿಮಗೆ ತಿಳಿಸಲೇಬೇಕು.
ಕೇಂದ್ರ ಚುನಾವಣೆಯ ಆಯೋಗದ ವೆಬ್ಸೈಟ್ಗೆ ಯಾವುದೇ ಕ್ಷಣದಲ್ಲಿ ಭೇಟಿ ನೀಡಿದರೂ ನಿಮ್ಮ ಹೆಸರು, ಮತಚೀಟಿಯ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಮೂಲಕ ವಿವರಗಳನ್ನು ಪಡೆಯುವ ಅವಕಾಶವಿದೆ. ಇದರಿಂದ ಸುಲಭವಾಗಿ ನಿಮ್ಮ ಮತಚೀಟಿಯ ವಿವರವನ್ನು ನೀವು ಹುಡುಕಬಹುದು. ಆದರೆ ರಾಜ್ಯ ಚುನಾವಣೆ ಆಯೋಗವು ಪ್ರಕಟಿಸಿರುವ ವೆಬ್ಸೈಟ್ನಲ್ಲಿ ಅತ್ಯಂತ ಬುದ್ಧಿವಂತಿಕೆಯ ಕೆಲಸ ಮಾಡಲಾಗಿದೆ. ಹೆಸರು ಮತ್ತು ಮತಚೀಟಿ ಸಂಖ್ಯೆ ಮೂಲಕ ಸರ್ಚ್ ಮಾಡುವ ಅವಕಾಶವನ್ನು ತೋರಿಸಲಾಗಿದೆ. ಆದರೆ ಅದನ್ನು ಡಿಸೇಬಲ್ ಮಾಡಿ, ದೂರದಲ್ಲಿನ ಚಂದಮಾಮನನ್ನು ತೋರಿಸಿ ಆಸೆ ಹುಟ್ಟಿಸುವ ಕೆಲಸ ಮಾಡಿದೆ. ಅಂದರೆ ಕರಡು ಮತಪಟ್ಟಿಯಲ್ಲಿನ ದಾಖಲೆಯನ್ನು ಸಾಮಾನ್ಯ ಮತದಾರರು ಹುಡುಕಲು ಸಾಧ್ಯವೇ ಇಲ್ಲದಂತಹ ಕೌಶಲ್ಯವನ್ನು ಜಿಬಿಎಯ ಅಧಿಕಾರಿಗಳು ತೋರಿಸಿದ್ದಾರೆ. ಮುಂದಿನ ಕೆಂಪೇಗೌಡ ಪ್ರಶಸ್ತಿಯನ್ನು ಇವರಿಗೆ ನೀಡಬಹುದು. ಲೋಕಸಭೆಯಲ್ಲಿ ಕೇಂದ್ರ ಚುನಾವಣೆ ಅಯೋಗದ ಮುಖ್ಯ ಆಯುಕ್ತರ ಮಹಾಭಿಯೋಗಕ್ಕೆ ಮುಂದಾಗಿರುವಂತೆ, ರಾಜ್ಯದಲ್ಲಿಯೂ ಆ ಕೆಲಸ ಮಾಡಬಹುದು.
ಕಾಂಗ್ರೆಸ್ ಎಂಬ ಪಕ್ಷವು ರಾಜಕೀಯದಿಂದ ಸುಖಾಸುಮ್ಮನೇ ಮಾಯವಾಗುತ್ತಿಲ್ಲ. ಈ ರೀತಿಯ ಇಬ್ಬಗೆಯ ನೀತಿ ಹಾಗೂ ದಿಕ್ಕು ದಿಸೆಯಲ್ಲದ ನಿಲುವಿನಿಂದ ಮತದರರ ಮನಸ್ಸಿನಿಂದ ದೂರವಾಗುತ್ತಿದೆ. ಒಂದೊಮ್ಮೆ ಕೇಂದ್ರ ಚುನಾವಣೆ ಆಯೋಗವು ಸಂವಿಧಾನ ಬಾಹಿರವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಸಾಧಿಸಿ ತೋರಿಸಬೇಕಿದ್ದರೆ, ರಾಜ್ಯ ಚುನಾವಣೆ ಆಯೋಗದ ಕೆಲಸದಲ್ಲಿ ಎಲ್ಲ ಸುಧಾರಣೆ, ಸಕ್ರಮಗಳನ್ನು ಜಾರಿ ಮಾಡಿ ಮಾದರಿಯಾಗಬೇಕು. ಆಗ ಜನರಿಗೂ ನಂಬಿಕೆ ಬರುತ್ತದೆ ಹಾಗೂ ನಿಮ್ಮ ಹೋರಾಟ ಸರಿಯಾಗಿದೆ ಎಂದು ತಿಳಿಯುತ್ತದೆ. ಆದರೆ ಈ ಕಾಂಗ್ರೆಸ್ನವರು ರಾತ್ರಿ ಕಂಡ ಬಾವಿಗೆ ಹಗಲಿನಲ್ಲಿ ಟಾರ್ಚ್ ಹಿಡಿದುಕೊಂಡು ಹೋಗಿ ಬೀಳುತ್ತಾರೆ. ಇವರನ್ನು ಯಾರಿಂದಲೂ ಸುಧಾರಿಸಲು ಸಾಧ್ಯವಿಲ್ಲ. ಅಂದಹಾಗೆ ದೇಶದ ಕಾಂಗ್ರೆಸ್ ಹಾಗೂ ಕರ್ನಾಟಕದಲ್ಲಿನ ಬಿಜೆಪಿಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಇಲ್ಲಿ ನಿದ್ದೆಯಲ್ಲಿರುವ ನಾಯಕರಿಗೆ ಇಂತಹ ಸೂಕ್ಷ್ಮಗಳು ಗೊತ್ತಾಗುವಷ್ಟರಲ್ಲಿ ಜಿಬಿಎ ಚುನಾವಣೆ ಮುಗಿಯದಿದ್ದರೆ ಸಾಕು.
– ರಾಜೀವ್ ಹೆಗಡೆ, ಹಿರಿಯ ಪತ್ರಕರ್ತರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.