2027ರ ವಿಶ್ವ ಚಾಂಪಿಯನ್ ಶಿಪ್ (ಡಬ್ಲ್ಯೂಟಿಸಿ) ಫೈನಲ್ ಲೆಕ್ಕಾಚಾರಗಳು ಪ್ರಾರಂಭವಾಗಿದೆ ಅದರಲ್ಲೂ ಪ್ರಸ್ತುತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾಗೆ ಮುಂದಿನ 9 ಮ್ಯಾಚ್ಗಳು ನಿರ್ಣಾಯಕ. ಈ ಒಂಭತ್ತು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ ಫೈನಲ್ಗೇರಬಹುದು.
ಟೀಮ್ ಇಂಡಿಯಾ ಈವರೆಗೆ ಆಡಿದ 9 ಪಂದ್ಯಗಳಲ್ಲಿ 4 ಗೆಲುವು, 4 ಸೋಲು ಹಾಗೂ 1 ಡ್ರಾ ಸಾಧಿಸಿದೆ. ಈ ಮೂಲಕ ಶೇಕಡಾವಾರು 48. 15% ಅಂಕಗಳೊಂದಿಗೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಇತ್ತ ಫೈನಲ್ಗಾಗಿ ಅರ್ಹತೆ ಪಡೆಯಲು ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕು. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡುತ್ತವೆ. ಅದರಂತೆ ಇದೀಗ 6ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಮುಂದೆ ಇನ್ನೂ 9 ಪಂದ್ಯಗಳಿವೆ.
ಈ 9 ಪಂದ್ಯಗಳಲ್ಲಿ ಭಾರತ ತಂಡವು ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ದಾಖಲಿಸಲೇಬೇಕು. ಏಳು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ ಶೇಕಡಾವಾರು ಅಂಕ 62.96% ತಲುಪುತ್ತದೆ. ಈ ಮೂಲಕ ಇತರ ತಂಡಗಳನ್ನು ಹಿಂದಿಕ್ಕಿ ಫೈನಲ್ ಹಾದಿಯನ್ನು ಸುಲಭಗೊಳಿಸಬಹುದು.
ಇನ್ನು ಟೀಮ್ ಇಂಡಿಯಾ ಉಳಿದ 9 ಮ್ಯಾಚ್ಗಳಲ್ಲಿ ಎಲ್ಲಾ ಪಂದ್ಯಗಳಲ್ಲಿ ಅಥವಾ 8 ಮ್ಯಾಚ್ಗಳನ್ನು ಗೆದ್ದುಕೊಂಡರೆ ನೇರವಾಗಿ ಫೈನಲ್ಗೇರಲಿದೆ. ಅಂದರೆ 9 ರಲ್ಲಿ 7 ಪಂದ್ಯ ಗೆದ್ದರೂ ಕೆಲ ತಂಡಗಳ ಫಲಿತಾಂಶವನ್ನು ಎದುರು ನೋಡಲಾಯಿತು. ಇತ್ತ 8 ಮ್ಯಾಚ್ಗಳನ್ನು ಗೆದ್ದುಕೊಂಡರೆ 64% ರಿಂದ 65% ಅಂಕಗಳನ್ನು ಪಡೆದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತವರಿನಲ್ಲಿ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಜೊತೆಗೆ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧ ತಲಾ 2 ಪಂದ್ಯಗಳನ್ನಾಡಬೇಕಿದೆ.
ಇಲ್ಲಿ ಶ್ರೀಲಂಕಾ ಹಾಗೂ ನ್ಯೂಝ್ಲೆಂಡ್ ತಂಡಗಳನ್ನು ಅವರ ನೆಲದಲ್ಲಿ ಎದುರಿಸಬೇಕಿರುವುದು ಟೀಮ್ ಇಂಡಿಯಾ ಮುಂದಿರುವ ದೊಡ್ಡ ಸವಾಲು. ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಿಂದ ಗೆಲ್ಲುವುದು ಕೂಡ ಕಷ್ಟಸಾಧ್ಯ ಎಂದು ಹೇಳಬಹುದು. ಹೀಗಾಗಿ ನವೆಂಬರ್ ವರೆಗೆ ಟೀಮ್ ಇಂಡಿಯಾದ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಲೆಕ್ಕಾಚಾರ ಮುಂದುವರಿಯಲಿದೆ.






