
ಮೈಸೂರು, ಮಾ.17: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕಾರ ಮಾಡುತ್ತಿರುವ ಹಾಗೂ ಅಕ್ರಮ ಆಸ್ತಿಗಳನ್ನು ಹೊಂದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಧಿಕಾರಿಗಳು ಹಣ ಸ್ವೀಕಾರ ಮಾಡುತ್ತಿರುವಾಗ ಲೋಕಾಯುಕ್ತ ಕೈ ಸಿಕ್ಕಿ ಬಿದ್ದಿರುವ ಅದೆಷ್ಟೋ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮಹಿಳಾ ಅಧಿಕಾರಿ ಬಲೆಗೆ ಬಿದ್ದಿದ್ದಾರೆ. ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರು (ಪಿಡಿಒ), ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದು ಆತ್ಮಹತ್ಯೆ ನಾಟಕವಾಡಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾ.ಪಂ. ಕಛೇರಿಯಲ್ಲಿ ನಡೆದಿದೆ.
ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಸ್ವಾಮಿ ಎಂಬುವವರು ನಿಧನರಾದ ಬಳಿಕ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಮೃತ ಸ್ವಾಮಿ ಅವರ ಎರಡು ವರ್ಷದ ಬಾಕಿ ಸಂಬಳ ಸುಮಾರು 4 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಪಿಡಿಯೋ ಮಂಜುಳಾ ಅವರಿಗೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಲಂಚ ನೀಡಲು ಇಚ್ಛಿಸದ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಚೇರಿಯಲ್ಲಿ ಮುಂಗಡವಾಗಿ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದನ್ನೂ ಓದಿ: ಇರಾನ್-ಇಸ್ರೇಲ್ ಸಮರಕ್ಕೆ ಬಳ್ಳಾರಿ ಜೀನ್ಸ್ ಉದ್ಯಮ ತತ್ತರ: ರಫ್ತು ಸ್ಥಗಿತ, ಉತ್ಪಾದನೆ ಕುಸಿತ
ಲೋಕಾಯುಕ್ತ ಬಲೆಗೆ ಬೀಳುವಂತೆ ಕಂಗಾಲಾದ ಮಂಜುಳಾ, ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ. ಅಧಿಕಾರಿಗಳು ಮುಂದೆಯೇ ಹೈಡ್ರಾಮಾ ಸೃಷ್ಟಿಸಿ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಅನಾರೋಗ್ಯ ಪಿಡಿಯೋ ಮಂಜುಳಾ ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ನಂತರ ಲೋಕಾಯುಕ್ತ ವೈದ್ಯರ ವಿಚಾರಣೆ ಮುಂದುವರಿಸಲಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ