
ಧ್ರುವ ಸರ್ಜಾ (ಧ್ರವ ಸರ್ಜಾ) ನಟಿಸಿ, ಪ್ರೇಮ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ದ ಹಾಡೊಂದು ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ನೋರಾ ಫತೇಹಿ ನಟಿಸಿರುವ ಹಾಡನ್ನು ಬಲು ಅದ್ಧೂರಿಯಾಗಿ ಚಿತ್ರತಂಡೆ ಬಿಡುಗಡೆ ಮಾಡಿತು. ಕನ್ನಡದಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಯೂಟ್ಯೂಬ್‌ನಲ್ಲಿ ರಿಲೀಸ್ ಆಯ್ತು. ಆದರೆ ಈ ಹಾಡು ಇದೀಗ ವಿವಾದಕ್ಕೆ ಸಿಲುಕಿದೆ. ಕನ್ನಡದಲ್ಲಿ ‘ಸರ್ಸೆ ಸೆರಗ ಸರ್ಸೆ’ ಎಂದಿರುವ ಈ ಹಾಡು ಹಿಂದಿಯಲ್ಲಿ ‘ಸರ್ಕೆ ಚುನರ್’ ಎಂದಿದೆ. ಆದರೆ ಈ ಹಾಡಿನ ಸಾಹಿತ್ಯ ಟೀಕೆಗೆ ಗುರಿಯಾಗಿರುವುದು, ಹಾಡಿನ ವಿರುದ್ಧ ದೂರು ದಾಖಲಾಗಿದೆ.
ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಐಟಂ ಸಾಂಗ್ ಬಿಡುಗಡೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿರುವ ನೋರಾ ಫತೇಹಿ ಅವರ ನೃತ್ಯದ ಭಂಗಿಗಳು ‘ಅತಿರೇಕದ ಅಶ್ಲೀಲತೆ’ಯಿಂದ ಕೂಡಿವೆ. ಅದರಲ್ಲೂ ಹಾಡಿನ ಸಾಹಿತ್ಯವಂತೂ ತೀರ ಅಶ್ಲೀಲವಾಗಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಹಿಂದಿ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಟೀಕೆಗಳು ಕಂಡುಬಂದಿದ್ದು, ಇದೀಗ ದೆಹಲಿಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ದೆಹಲಿಯ ವಕೀಲ ವಿನೀತ್ ಜಿಂದಾಲ್ ಎಂಬವರು ಹಾಡಿನ ವಿರುದ್ಧ ಸಿಬಿಎಫ್ ಸಿಗೆ ದೂರು ನೀಡಿದ್ದು, ಈ ಕೂಡಲೇ ಹಾಡನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ. ವಕೀಲ ವಿನೀತ್ ಅವರು ದೆಹಲಿಯ ಸೈಬರ್ ಪೊಲೀಸರಿಗೂ ಸಹ ದೂರು ನೀಡಿದ್ದು, ಈ ಹಾಡಿನ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 (ಮಹಿಳೆಯ ಮಾನಕ್ಕೆ ಧಕ್ಕೆ) ಮತ್ತು ಪೋಕ್ಸೊ ಕಾಯ್ದೆಯ ಅಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ
ವಕೀಲ ವಿನೀತ್ ಮಾತ್ರವೇ ಅಲ್ಲದೆ ಕೆಲವು ಗಾಯಕರು ಸಹ ಈ ಹಾಡಿನ ಸಾಹಿತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇದರ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಆಯೋಗವು ಆಕ್ಷೇಪಿಸಿದೆ.
‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಹಾಡಾಗಿದ್ದರೆ, ನೋರಾ ಫತೇಹಿ ಗ್ಲಾಮರಸ್ ಆಗಿ ಕುಣಿದಿದ್ದಾರೆ. ಸಂಜಯ್ ದತ್ ಸಹ ಹಾಡಿನಲ್ಲಿದ್ದಾರೆ. ನೋರಾ ಫತೇಹಿ ಮದ್ಯದ ಕುರಿತಾಗಿ ಹಾಡುವ ಹಾಡು ಅದಾಗಿದೆ ಆದರೆ ಹಾಡಿನಲ್ಲಿ ಸಾಕಷ್ಟು ದ್ವಂದ್ವಾರ್ಥಗಳಿವೆ. ಇದೇ ಕಾರಣಕ್ಕೆ ಇದೀಗ ಹಾಡು ವಿವಾದಕ್ಕೆ ಕಾರಣವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ