
ಮಂಗಳೂರು, (ಮಾರ್ಚ್ 17): ಕೌಟುಂಬಿಕ ಕಲಹದ ವಿಚಾರಕ್ಕೆ ದೂರು ನೀಡಲು ಬಂದ ಮಹಿಳೆಯರನ್ನು ಅಸಭ್ಯವಾಗಿ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ (ಮೂಡುಬಿದಿರೆ ನಿರೀಕ್ಷಕ ಸಂದೇಶ್) ವಿರುದ್ಧ ಈಗ ರಾಜ್ಯ ಮಹಿಳಾ ಆಯೋಗವು ಸಿಡಿದೆದ್ದಿದ್ದು, ಸುಮೋಟೋ ಕೇಸ್ ದಾಖಲಿಸಿದೆ. ಈ ಪ್ರಕರಣ ಸಂಬಂಧ ವರದಿ ನೀಡುವಂತೆ ಮಂಗಳೂರ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಇನ್ಸ್ ಪೆಕ್ಟರ್ ಸಂದೇಶವನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ. ಆಡಿಯೋ, ವಿಡಿಯೋದಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆಯ ಕಾರಣ ನೀಡಿ ಸಂದೇಶ ಅವರನ್ನ ಸಸ್ಪೆಂಡ್ ಮಾಡಲಾಗಿದೆ.
ಸಂತ್ರಸ್ತೆ ಮಹಿಳೆ ಆರೋಪದ ಕೆಲ ಆಡಿಯೋ ವಿಡಿಯೋಗಳ ಬಯಲಿಗೆ ಬರುತ್ತಿದ್ದಂತೆಯೇ ಇನ್ಸ್ ಪೆಕ್ಟರ್ ವಿರುದ್ಧ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಎಸ್ಸಿಪಿ ಶ್ರೀಕಾಂತ್‌ಗೆ ನೀಡಲಾಗಿದೆ. ಮತ್ತೊಂದೆಡೆಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ ಮಹಿಳೆಯರಿಗೆ ಕಿರುಕುಳ ಆರೋಪ ಸಂಬಂಧ ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರನ್ನ ಭೇಟಿ ಮಾಡಿ, ಸಂದೇಶ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡುವಂತೆ ಮನವಿ ಮಾಡಿದರು. ಈ ಬಗ್ಗೆ ಮಹಿಳಾ ಆಯೋಗ ಸಹ ಸುಮಾಟೋ ಕೇಸ್ ದಾಖಲಿಸಿಕೊಂಡಿದ್ದು, ಪ್ರಕರಣದ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು. ಈ ಎಲ್ಲಾ ಬೆಳವಣಿಗೆಯ ನಂತರ ಇನ್ಸ್ ಪೆಕ್ಟರ್ ಸಂದೇಶ ಅವರನ್ನು ಕೊನೆಗೂ ಅಮಾನತುಗೊಳಿಸಲಾಗಿದೆ.