
ಬೆಂಗಳೂರು, ಮಾರ್ಚ್ 17: ರಾಜ್ಯದಲ್ಲಿ ಗ್ಯಾಸ್‌ಗಾಗಿ ದೊಡ್ಡ ಸಂಕಷ್ಟವೇ ಎದುರಾಗಿದೆ, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಗೃಹಬಳಕೆ ಗ್ಯಾಸ್ ಸಿಲಿಂಡರ್ಗಳನ್ನು (ಗ್ಯಾಸ್ ಸಿಲಿಂಡರ್) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವೆಡೆ ಕಳ್ಳಾಟ ಆಡುತ್ತಿದ್ದವರಿಗೆ ಇದೀಗ ಪೊಲೀರು ಬಿಸಿಮುಟ್ಟಿಸಿದ್ದು ಜೊತೆಗೆ ನೂರಾರು ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೀದರ್‌ನಲ್ಲಿ 105 ಗ್ಯಾಸ್ ಸಿಲಿಂಡರ್ ವಶಕ್ಕೆ
ಇರಾನ್-ಇಸ್ರೇಲ್, ಅಮೆರಿಕ ಯುದ್ಧದಿಂದ ಭಾರತದಲ್ಲಿ ಅಡುಗೆ ಅನಿಲ ಸಮಸ್ಯೆ ತಲೆದೋರಿದ್ದು, ಕರುನಾಡಿನಲ್ಲೂ ಸಂಕಷ್ಟ ಇದೆ. ಇಂಥಾ ಹೊತ್ತಲ್ಲೇ ಬೀದರ್‌ನಲ್ಲಿ ಅಕ್ರಮವಾಗಿ ಗ್ಯಾಸ್ ದಂಧೆ ನಡೆದಿತ್ತು. ಬೀದರ್ ತಾಲ್ಲೂಕಿನ ಜನವಾಡಾ ಪೊಲೀಸ್ ಠಾಣೆ ಅಕ್ರಮವಾಗಿ ಗ್ಯಾಸ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು 23 ಹಾಗೂ 82 ಖಾಲಿ ಸಿಲಿಂಡರ್ ಸೇರಿದಂತೆ 105 ಗೃಹಬಳಕೆ ಸಿಲಿಂಡರ್ ಸೀಜ್ ಮಾಡಲಾಗಿದೆ.
ಇದನ್ನೂ ಓದಿ: ಕೋಲಾರ: ಹೋಟೆಲ್, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿರುವ 21 ಗೃಹಬಳಕೆ ಸಿಲಿಂಡರ್ ವಶಕ್ಕೆ
ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಟ್ಟದ್ದ ದಂಧೆಕೋರರು, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿದ್ದಾರೆ
ದಾವಣಗೆರೆ, ಯಾದಗಿರಿಯಲ್ಲೂ ಸಿಲಿಂಡರ್ ವಶಕ್ಕೆ!
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಡಲಾಯಿತು. ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 20 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಯಾದಗಿರಿ ಜಿಲ್ಲೆಯ ಶಹಾಪುರದ ಹೋಟೆಲ್ ಮತ್ತು ರೆಸ್ಟೋರೆಂಟ್ ಗೃಹಬಳಕೆಯ ಸಿಲಿಂಡರ್ಗಳು ಪತ್ತೆ ಆಗಿವೆ. ಶಹಾಪುರ ಹಾಗೂ ಭೀಮರಾಯನಗುಡಿಯಲ್ಲಿ 19 ಗೃಹಬಳಕೆ ಸಿಲಿಂಡರ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ಗಾಗಿ ಬಿಸಿ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್: ರಿಟ್ ಅರ್ಜಿ ಸಲ್ಲಿಕೆ
ಹೋಟೆಲ್‌ಗಳಲ್ಲಿ ಗೃಹಬಳಕೆಯ ಸಿಲಿಂಡರ್ ಬಳಕೆ ಹಿನ್ನೆಲೆ ಕೆಜಿಎಫ್ ತಹಶೀಲ್ದಾರ್ ಭಾರತ್ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ರಾಬರ್ಟ್‌ಸನ್‌ಪೇಟೆ, ಆಯಂಡರ್ ಸನ್‌ಪೇಟೆಯಲ್ಲಿ ದಾಳಿ ಮಾಡಿದ್ದು, 3 ಗೃಹಬಳಕೆ ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಗರಸಭೆ ಆಹಾರ ನಿರೀಕ್ಷಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೊಪ್ಪಳ, ಗದಗದಲ್ಲಿ ನೋ ಸ್ಟಾಕ್
ಗದಗ ಜಿಲ್ಲೆಯ ನರಗುಂದದಲ್ಲಿರುವ ಇಂಡಿಯನ್ ಗ್ಯಾಸ್ ಏಜೆನ್ಸಿ ನೋ ಸ್ಟಾಕ್ ಬೋರ್ಡ್ ಹಾಕಿದೆ. ಗ್ರಾಮೀಣ ಭಾಗದಿಂದ ಖಾಲಿ ಸಿಲಿಂಡರ್ ಹೊತ್ತು ಬಂದಿದ್ದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಪ್ಪಳದಲ್ಲೂ ಸಿಲಿಂಡರ್ ಸಿಗದಿದ್ದಕ್ಕೆ ಎಜೆನ್ಸಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳದ ಗುರುಪ್ರಸಾದ್ ಗ್ಯಾಸ್ ಏಜೆನ್ಸಿ ಮುಂದೆ ವಾಗ್ವಾದ ನಡೆಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.