
ಕೇಂದ್ರ ಸರ್ಕಾರದ ಸಂಸದೀಯ ಸ್ಥಾಯಿ ಸಮಿತಿಯು, ಇಪಿಎಸ್-95 ಯೋಜನೆಯಡಿ ನೀಡಲಾಗುತ್ತಿರುವ ₹1,000 ಕನಿಷ್ಠ ಮಾಸಿಕ ಪೆನ್ಶನ್ ಅನ್ನು ತುರ್ತಾಗಿ ಹೆಚ್ಚಿಸಲು ಶಿಫಾರಸು ಮಾಡಿದೆ. ಪ್ರಸ್ತುತ ಮೊತ್ತವು ಜೀವನ ವೆಚ್ಚಕ್ಕೆ ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ.
ಬೆಂಗಳೂರು (ಮಾ.17): ಕೇಂದ್ರ ಸರ್ಕಾರದ ಕಾರ್ಮಿಕ, ಜವಳಿ ಮತ್ತು ಕೌಶಲ್ಯಾಭಿವೃದ್ಧಿ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯು ಮಂಗಳವಾರದಂದು ಮಹತ್ವದ ವರದಿಯನ್ನು ಸಲ್ಲಿಸಿದ್ದು, ಉದ್ಯೋಗಿಗಳ ಪೆನ್ಶನ್ ಯೋಜನೆ 1995 (EPS-95) ಅಡಿಯಲ್ಲಿ ಸಿಗುತ್ತಿರುವ ಕನಿಷ್ಠ ಮಾಸಿಕ ಪೆನ್ಶನ್ ಮೊತ್ತವನ್ನು ತುರ್ತಾಗಿ ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಪ್ರಸ್ತುತ ನೀಡಲಾಗುತ್ತಿರುವ 1,000 ರೂಪಾಯಿ ಕನಿಷ್ಠ ಮಾಸಿಕ ಪೆನ್ಶನ್ ಇಂದಿನ ಬೆಲೆ ಏರಿಕೆ ಹಾಗೂ ಜೀವನ ವೆಚ್ಚಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ. ಇದು ಕನಿಷ್ಠ ಮೂಲಭೂತ ಅಗತ್ಯಗಳನ್ನು ಪೂರೈಸಲು ಕೂಡ ಸಾಕಾಗುವುದಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಇತ್ತೀಚೆಗೆ ಮಾರ್ಚ್ 9 ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪೆನ್ಶನರ್‌ಗಳು, ಕನಿಷ್ಠ ಮಾಸಿಕ ಪೆನ್ಶನ್ ಮೊತ್ತವನ್ನು 7,500 ರೂಪಾಯಿಗೆ ಏರಿಸಬೇಕೆಂದು ಒತ್ತಾಯಿಸಿದ್ದರು. ಕೇಂದ್ರ ಸರ್ಕಾರವು ಈ ಯೋಜನೆಗೆ ಬಜೆಟ್ ಮೂಲಕ ಹೆಚ್ಚಿನ ಆರ್ಥಿಕ ನೆರವು ನೀಡುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಸಮಿತಿ ಸೂಚಿಸಿದೆ.
ಸಂಸದೀಯ ಸಮಿತಿಯ ಇತರ ಪ್ರಮುಖ ಶಿಫಾರಸುಗಳು
ಇದರೊಂದಿಗೆ ಸಂಸದೀಯ ಸಮಿತಿ ಇನ್ನೂ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಕಾಯಂ ಕಾರ್ಮಿಕರಂತೆಯೇ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಅಪಘಾತದ ಸಂದರ್ಭದಲ್ಲಿ ಪರಿಹಾರ ವಿಳಂಬವಾಗುತ್ತಿದೆ. ಆದ್ದರಿಂದ ಅವರಿಗೆ ಇಎಸ್ಐ (ESI) ಮತ್ತು ಪಿಎಫ್ (PF) ಸೌಲಭ್ಯಗಳು ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
ಗಿಗ್ ವರ್ಕರ್ಸ್ (Gig Workers) ನೋಂದಣಿ ಕಡ್ಡಾಯ: ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಗಿಗ್ ವರ್ಕರ್ಸ್‌ಗಳನ್ನು ‘ಇ-ಶ್ರಮ್’ (e-Shram) ಪೋರ್ಟಲ್‌ನಲ್ಲಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸಬೇಕು. ಅವರಿಗೆ ವಿಮೆ ಮತ್ತು ಅಪಘಾತ ಪರಿಹಾರದಂತಹ ಸೌಲಭ್ಯಗಳನ್ನು ಒದಗಿಸಬೇಕು.
ಗಣಿಗಾರಿಕೆ ಮತ್ತು ಸುರಕ್ಷತೆ: ದೇಶದಲ್ಲಿರುವ ನೋಂದಾಯಿತ ಮತ್ತು ನೋಂದಾಯಿತವಲ್ಲದ ಗಣಿಗಳ ಸಮಗ್ರ ಡೇಟಾಬೇಸ್ ಸಿದ್ಧಪಡಿಸಬೇಕು. ಅಕ್ರಮ ಗಣಿಗಾರಿಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು.
ಇಎಸ್ಐ (ESI) ವ್ಯಾಪ್ತಿ ವಿಸ್ತರಣೆ: ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು, ಇಎಸ್ಐಸಿ (ESIC) ಅಡಿಯಲ್ಲಿರುವ ವೇತನ ಮಿತಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕು.
ಹಣಕಾಸು ಶಿಸ್ತು: ಕಾರ್ಮಿಕ ಸಚಿವಾಲಯವು ಬಜೆಟ್ ಹಂಚಿಕೆ ಮತ್ತು ವೆಚ್ಚದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಐಟಿ ಮೂಲಸೌಕರ್ಯ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ವ್ಯವಸ್ಥಿತವಾಗಿ ಹಣ ಮೀಸಲಿಡಬೇಕು ಎಂದಿದೆ.