ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಶಾಮನೂರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕೃತ ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರ ಆರಂಭಿಸಿ ಸಂಚಲನ ಮೂಡಿಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸುತ್ತಾ, ತಾವೇ ಮುಂದಿನ ಅಭ್ಯರ್ಥಿ ಎಂಬ ಪರೋಕ್ಷ ಸಂದೇಶ ರವಾನಿಸುತ್ತಿದ್ದಾರೆ.

ದಾವಣಗೆರೆ: ರಾಜ್ಯ ರಾಜಕಾರಣದ ‘ಬೆಣ್ಣೆ ನಗರಿ’ ದಾವಣಗೆರೆಯಲ್ಲಿ ಈಗಿನಿಂದಲೇ ಚುನಾವಣಾ ಕಾವು ಜೋರಾಗಿದೆ. ಅದರಲ್ಲೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಶಾಮನೂರು ಅವರು ಅಧಿಕೃತವಾಗಿ ಟಿಕೆಟ್ ಘೋಷಣೆಯಾಗುವ ಮೊದಲೇ ಅಖಾಡಕ್ಕಿಳಿದು ಸಂಚಲನ ಮೂಡಿಸಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಸಮರ್ಥ ಶಾಮನೂರು ಭರ್ಜರಿ ಮಿಂಚಿನ ಸಂಚಾರ ನಡೆಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ದಂಡಿನೊಂದಿಗೆ ವಾರ್ಡ್ಗಳಿಗೆ ಭೇಟಿ ನೀಡಿದ ಅವರು, ಜನರ ಸಮಸ್ಯೆಗಳನ್ನು ಆಲಿಸಿ ಸಮಾಲೋಚನೆ ನಡೆಸಿದರು. ಈ ಮೂಲಕ ಮುಂಬರುವ ಚುನಾವಣೆಗೆ ತಾವೇ ಸಿದ್ಧ ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ.

ಸಮರ್ಥ ಶಾಮನೂರು ಅವರ ಈ ದಿಢೀರ್ ಸಕ್ರಿಯತೆ ದಾವಣಗೆರೆ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರನಾಗಿರುವ ಸಮರ್ಥ ಅವರಿಗೆ ಹೈಕಮಾಂಡ್ ಅಥವಾ ಕುಟುಂಬದಿಂದ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಸ್ಥಳೀಯ ಕಾರ್ಯಕರ್ತರು ಸಮರ್ಥ ಅವರ ಪರವಾಗಿ ಜೈಕಾರ ಹಾಕುತ್ತಿದ್ದು, ಯುವ ನಾಯಕನ ಎಂಟ್ರಿಯಿಂದ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿದೆ.

ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ನಗರದ ಪ್ರಸಿದ್ಧ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸಮರ್ಥ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ‘ಇಂದು ಅಮಾವಾಸ್ಯೆ ವಿಶೇಷವಾಗಿ ದೇವಸ್ಥಾನಕ್ಕೆ ಬಂದಿದ್ದೆ. ಅಲ್ಲಿ ಜನರ ಪ್ರೀತಿ ಕಂಡು ಅವರ ಜೊತೆ ಮಾತನಾಡುತ್ತಿದ್ದೇನೆ. ಅಭ್ಯರ್ಥಿ ಆಯ್ಕೆ ಎನ್ನುವುದು ಹಿರಿಯರು ಮತ್ತು ಪಕ್ಷದ ಮುಖಂಡರಿಗೆ ಬಿಟ್ಟ ವಿಚಾರ. ಎಲ್ಲರೂ ಸೇರಿ ಈ ಬಗ್ಗೆ ತೀರ್ಮಾನ ಮಾಡುತ್ತಾರೆ’ ಎಂದು ಸಮರ್ಪಕವಾಗಿ ಉತ್ತರಿಸಿದರು.

ತಮ್ಮ ರಾಜಕೀಯ ಆಕಾಂಕ್ಷೆಗಳ ಬಗ್ಗೆ ಮಾತನಾಡುತ್ತಾ, ‘ನಾನು ಈಗ ಹೊಸದಾಗಿ ಬಂದವನಲ್ಲ. ತಾತ (ಶಾಮನೂರು ಶಿವಶಂಕರಪ್ಪ) ಮತ್ತು ಅಪ್ಪನ (ಎಸ್.ಎಸ್. ಮಲ್ಲಿಕಾರ್ಜುನ) ಜೊತೆ ಮೊದಲಿನಿಂದಲೂ ಕ್ಷೇತ್ರದಲ್ಲಿ ಓಡಾಡಿದ್ದೇನೆ. ಇಲ್ಲಿನ ಪ್ರತಿ ಓಣಿ, ಪ್ರತಿ ವಾರ್ಡ್ ಮತ್ತು ಜನರು ನನಗೆ ಚಿರಪರಿಚಿತರು. ಜನರೊಂದಿಗಿನ ಈ ಸಂಬಂಧ ಇಂದಿನದಲ್ಲ, ಇದು ಮೊದಲಿನಿಂದಲೂ ಇದೆ’ ಎಂದು ಸಮರ್ಥ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸಮರ್ಥ ಶಾಮನೂರು ಅವರ ಈ ನಡೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಯುವ ನಾಯಕನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಯುವಕರು ಮತ್ತು ಮಹಿಳೆಯರು ಮುಗಿಬಿದ್ದಿದ್ದು ಕಂಡುಬಂತು. ಒಟ್ಟಿನಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ‘ಕೈ’ ಪಡೆಗೆ ಹೊಸ ಬಲ ಬಂದಂತಾಗಿದ್ದು, ಮುಂದಿನ ದಿನಗಳಲ್ಲಿ ಟಿಕೆಟ್ ಫೈಟ್ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನ ಪ್ರಚಾರದ ಅಖಾಡಕ್ಕಿಳಿದ ಸಮರ್ಥ ಮಲ್ಲಿಕಾರ್ಜುನ!