
ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿದ್ದನ್ನು ‘ದೊಡ್ಡ ರಾಜತಾಂತ್ರಿಕ ಪ್ರಮಾದ’ ಎಂದು ಕ್ರೀಡಾ ಸಚಿವರು ಕರೆದಿದ್ದಾರೆ. ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಢಾಕಾ: ಈ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿದ್ದು ಒಂದು ದೊಡ್ಡ ರಾಜತಾಂತ್ರಿಕ ಪ್ರಮಾದ ಎಂದು ಕ್ರೀಡಾ ಸಚಿವ ಅಮಿನುಲ್ ಹಖ್ ಹೇಳಿದ್ದಾರೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ಎರಡನೇ ಸಮಿತಿಯೊಂದನ್ನು ರಚಿಸುವುದಾಗಿ ಅವರು ಘೋಷಿಸಿದ್ದಾರೆ. ವಿಶ್ವಕಪ್ ಬಹಿಷ್ಕರಿಸುವ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಲಾಯಿತು ಮತ್ತು ಇದು ದೇಶದ ಕ್ರೀಡಾ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಈ ಸಮಿತಿ ಪರಿಶೀಲಿಸಲಿದೆ.
ವಿಶ್ವಕಪ್‌ನಿಂದ ಹಿಂದೆ ಸರಿಯಲು ಕಾರಣವೇನು?
ಸ್ಟಾರ್ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಅನಿರೀಕ್ಷಿತವಾಗಿ ಕೈಬಿಟ್ಟಿದ್ದೇ ಈ ಎಲ್ಲಾ ವಿವಾದಗಳಿಗೆ ಕಾರಣ. ಇದನ್ನು ವಿರೋಧಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿತ್ತು. ಆದರೆ, ಐಸಿಸಿ ಈ ಮನವಿಯನ್ನು ತಿರಸ್ಕರಿಸಿ, ಟೂರ್ನಿಯನ್ನು ಮುಂದುವರಿಸಲು ನಿರ್ಧರಿಸಿತು. ಇದರಿಂದಾಗಿ ಬಾಂಗ್ಲಾದೇಶ ಟೂರ್ನಿಯಿಂದ ಹೊರಗುಳಿಯಲು ತೀರ್ಮಾನಿಸಿತು. ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ತಂಡ ವಿಶ್ವಕಪ್‌ನಲ್ಲಿ ಆಡಿತ್ತು.
ಈ ಬಗ್ಗೆ ಮಾತನಾಡಿದ ಅಮಿನುಲ್ ಹಖ್, “ನಮ್ಮ ಕ್ರೀಡಾ ರಾಜತಾಂತ್ರಿಕತೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ನಾವು ಅರಿಯಬೇಕು. ಈದ್ ಹಬ್ಬದ ರಜೆ ಮುಗಿದ ನಂತರ ತನಿಖಾ ಸಮಿತಿಯನ್ನು ರಚಿಸಲಾಗುವುದು. ಭವಿಷ್ಯದಲ್ಲಿ ಇಂತಹ ದೊಡ್ಡ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ” ಎಂದು ಮಾಧ್ಯಮಗಳಿಗೆ ತಿಳಿಸಿದರು. ವಿಶ್ವಕಪ್ ವಿವಾದದ ಜೊತೆಗೆ, ಕಳೆದ ವರ್ಷ ನಡೆದ ಬಿಸಿಬಿ ಚುನಾವಣೆಯಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಸಚಿವಾಲಯ ತನಿಖೆ ನಡೆಸುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ರಿಕೆಟ್ ಮಂಡಳಿ ಚುನಾವಣೆಯಲ್ಲಿ ನೇರ ಹಸ್ತಕ್ಷೇಪ ನಡೆದಿದೆ ಎಂದು ಸಚಿವರು ಆರೋಪಿಸಿದ್ದಾರೆ. ಈ ಕುರಿತು ಢಾಕಾದ ಕ್ಲಬ್‌ಗಳು ಮತ್ತು ಜಿಲ್ಲೆಗಳಿಂದ ಹಲವಾರು ದೂರುಗಳು ಬಂದಿವೆ.
ಮಾಜಿ ನಾಯಕ ತಮೀಮ್ ಇಕ್ಬಾಲ್ ಮತ್ತು ಕೆಲವು ಕ್ಲಬ್ ಪದಾಧಿಕಾರಿಗಳು ಸೇರಿ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವಿದೆ. ನಾಮಪತ್ರ ಸಲ್ಲಿಸುವ ಸಮಯವನ್ನು ಹಲವು ಬಾರಿ ಬದಲಾಯಿಸಿದ್ದು ಕೂಡ ಈ ಅನುಮಾನಗಳಿಗೆ ಕಾರಣವಾಗಿದೆ. ತನಿಖಾ ಸಮಿತಿಯು 15 ಕೆಲಸದ ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ಈ ವರದಿ ಬಂದ ನಂತರ, ಕ್ರೀಡಾ ಸಚಿವರು ಐಸಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಕ್ರಿಕೆಟ್ ಮಂಡಳಿಗಳಲ್ಲಿ ಸರ್ಕಾರದ ಹಸ್ತಕ್ಷೇಪ ಐಸಿಸಿ ನಿಯಮಗಳಿಗೆ ವಿರುದ್ಧವಾಗಿರುವುದರಿಂದ, ಮುಂದಿನ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ಇಡಲಾಗುವುದು. ಸಮಿತಿಯು ಬೋರ್ಡ್ ಪದಾಧಿಕಾರಿಗಳು, ಸಿಇಒ ಮತ್ತು ಜಿಲ್ಲಾ ಆಡಳಿತಾಧಿಕಾರಿಗಳಿಂದ ಹೇಳಿಕೆಗಳನ್ನು ಪಡೆಯಲಿದೆ.
ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದ ಪಾಕಿಸ್ತಾನ
ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ದನ್ನು ಪಾಕಿಸ್ತಾನ ಸರ್ಕಾರ ಕೂಡಾ ಬಹಿರಂಗವಾಗಿಯೇ ಬೆಂಬಲಿಸಿತ್ತು. ಜತೆಗೆ ಭಾರತ ಎದುರಿನ ಕೊಲಂಬೋದಲ್ಲಿ ನಿಗದಿಯಾಗಿದ್ದ ಮ್ಯಾಚ್ ಬಾಯ್ಕಾಟ್ ಮಾಡುವುದಾಗಿಯೂ ಬೆದರಿಸಿತ್ತು. ಆದರೆ ಆದರೆ ಪಾಕಿಸ್ತಾನದ ಗೊಡ್ಡು ಬೆದರಿಕೆಗೆ ಐಸಿಸಿ ಸೊಪ್ಪು ಹಾಕಲಿಲ್ಲ. ಒಂದು ವೇಳೆ ಭಾರತ ಎದುರಿನ ಮ್ಯಾಚ್ ಬಾಯ್ಕಾಟ್ ಮಾಡಿದರೇ ಮುಂದೆ ಆಗುವ ಪರಿಣಾಮಗಳ ಬಗ್ಗೆ ಐಸಿಸಿ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಪಾಕ್ ಮರು ಮಾತಿಲ್ಲದೇ ಭಾರತ ಎದುರಿನ ಮ್ಯಾಚ್ ಆಡಲು ಒಪ್ಪಿಕೊಂಡಿತು. ಪಾಕಿಸ್ತಾನ ಸೂಪರ್ 8 ಹಂತದಲ್ಲೇ ತನ್ನ ಅಭಿಯಾನ ಮುಗಿಸಿತ್ತು.