
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಸ್ನೇಹಿತನ ಮದುವೆಗೆ ತೆರಳುತ್ತಿದ್ದ ಮೂವರು ರಿಸರ್ವ್ ಸಬ್ ಇನ್ಸ್‌ಪೆಕ್ಟರ್‌ಗಳು (RSI) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಗೆ ಸಂತಾಪ ಸೂಚಿಸಿರುವ ರಾಜ್ಯ ಸರ್ಕಾರ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ಘೋಷಿಸಿದೆ.
ಚಿತ್ರದುರ್ಗ (ಮಾ.18): ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್ ಬಳಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕರ್ತವ್ಯದ ನಡುವೆಯೇ ಸ್ನೇಹಿತನ ಮದುವೆಗೆ ಒಂದು ದಿನ ರಜೆ ಹಾಕಿ ಹೋಗುವಾಗ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಮೂವರು ರಿಸರ್ವ್ ಸಬ್ ಇನ್ಸ್‌ಪೆಕ್ಟರ್‌ಗಳ (RSI) ಕುಟುಂಬಕ್ಕೆ ರಾಜ್ಯ ಸರ್ಕಾರ ಈಗ ಪರಿಹಾರ ಘೋಷಣೆ ಮಾಡಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ತಿಳಿಸಿದೆ.
ಏನಿದು ಘಟನೆ?
ಭಾನುವಾರ ಬೆಳಗ್ಗೆ ಚಿತ್ರದುರ್ಗದ ಚಳ್ಳಕೆರೆ ಮಾರ್ಗವಾಗಿ ಚಲಿಸುತ್ತಿದ್ದ ಪೊಲೀಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರಂತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಪೊಲೀಸ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಮೂವರು ಆರ್‌ಎಸ್‌ಐಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದಲ್ಲಿ ಮೃತಪಟ್ಟ ಮಂಜುನಾಥ್ (31), ಅಮರೇಶ್ (25) ಮತ್ತು ಸಚಿನ್ (32) ಅವರು ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ನೇಮಕಗೊಂಡು ಸೇವೆಯಲ್ಲಿದ್ದರು. ಗೆಳೆಯನ ಮದುವೆ ಸಮಾರಂಭಕ್ಕಾಗಿ ರಜೆ ಪಡೆದು ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ‘ಮದುವೆಯ ಸಂಭ್ರಮಕ್ಕೆ ಹೋಗುತ್ತಿದ್ದ ಯುವ ಅಧಿಕಾರಿಗಳು ಹೀಗೆ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ’ ಎಂದು ಪರಮೇಶ್ವರ್ ತಿಳಿಸಿದ್ದರು.
Scroll to load tweet…
ಸರ್ಕಾರದ ಪರಿಹಾರ ಮತ್ತು ಸಾಂತ್ವನ:
ಈ ದುರದೃಷ್ಟಕರ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸರ್ಕಾರ, ‘ಇದು ಅತ್ಯಂತ ದುರದೃಷ್ಟಕರ ಘಟನೆ. ನಾಡಿನ ಸೇವೆಗೆ ಮುಡಿಪಾಗಿದ್ದ ಅಧಿಕಾರಿಗಳನ್ನು ಕಳೆದುಕೊಂಡಿರುವುದು ಪೊಲೀಸ್ ಇಲಾಖೆಗೆ ದೊಡ್ಡ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ’ ಎಂದು ಪ್ರಾರ್ಥಿಸಿದೆ. ಮೃತ ಅಧಿಕಾರಿಗಳ ಕುಟುಂಬದ ಆಧಾರಸ್ತಂಭಗಳು ಕುಸಿದಿರುವ ಹಿನ್ನೆಲೆಯಲ್ಲಿ, ತಕ್ಷಣದ ನೆರವಾಗಿ ತಲಾ 5 ಲಕ್ಷ ರೂಪಾಯಿ ಘೋಷಿಸಲಾಗಿದೆ. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಪೊಲೀಸರಿಗೆ ತಲಾ 2 ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚ ಮತ್ತು ಪರಿಹಾರ ನೀಡಲು ಆದೇಶಿಸಲಾಗಿದೆ.
ಹೆಗ್ಗೆರೆ ಗೇಟ್ ಬಳಿ ಹೆಚ್ಚುತ್ತಿರುವ ರಕ್ತಪಾತ:
ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್ ಬಳಿ ಈ ಹಿಂದೆಯೂ ಹಲವು ಭೀಕರ ಅಪಘಾತಗಳು ಸಂಭವಿಸಿವೆ. ಈ ರಸ್ತೆಯಲ್ಲಿ ವಾಹನಗಳ ವೇಗ ಮತ್ತು ಅವೈಜ್ಞಾನಿಕ ತಿರುವುಗಳು ಸಾವಿನ ಬಲೆಗಳಾಗಿ ಪರಿಣಮಿಸಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಚಿತ್ರದುರ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಸಿಬ್ಬಂದಿ ಇರುವ ವಾಹನಗಳೇ ಈ ರೀತಿ ಅಪಘಾತಕ್ಕೀಡಾಗಿರುವುದು ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.