
ಮಾಜಿ ಬಿಗ್‌ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಯುವಕನೊಬ್ಬನಿಗೆ ಎರಡು ಮದುವೆ ಹಾಗೂ ಸೊಸೆಯಿಂದ ತಾಯಿಗೆ ಅಪಾಯ ಎಂದು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು (ಮಾ.18): ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಅವರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ. ಬಿಗ್‌ಬಾಸ್‌ನ ಸೀಸನ್ 9ರ ಸ್ಪರ್ಧಿಯಾಗಿದ್ದ ಆರ್ಯವರ್ಧನ್ ಗುರೂಜಿ, ಬಿಗ್‌ಬಾಸ್ ಒಟಿಟಿ ಮೊದಲ ಸೀಸನ್‌ನಲ್ಲೂ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್ ಮನೆಯಲ್ಲೇ ಇದೊಂದು ಫಿಕ್ಸಿಂಗ್ ಆಟ ಎಂದು ಹೇಳಿ ಸುದ್ದಿಯಾಗಿದ್ದ ಆರ್ಯವರ್ಧನ್ ಗುರೂಜಿ, ಆ ಬಳಿಕ ಹಲವು ವೇದಿಕೆಗಳಲ್ಲಿ ತಮ್ಮ ಮಾತುಗಳಿಂದಲೇ ವಿವಾದ ಸೃಷ್ಟಿಸಿದ್ದರು. ಮೀಮ್ ಪೇಜ್‌ಗಳಿಗೆ ಇವರು ಈಗಲೂ ಒಂದು ಟ್ಯಾಂಪ್ಲೆಟ್ ಆಗಿ ಗುರುತಿಸಿಕೊಂಡಿದ್ದಾರೆ. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ರಾಶಿ ಭವಿಷ್ಯ ಮತ್ತು ಗೃಹಗತಿಗಳ ಬಗ್ಗೆ ಭವಿಷ್ಯವಾಣಿಗಳನ್ನು ನೀಡುವ ಆರ್ಯವರ್ಧನ್ ಅವರ ವೈರಲ್ ಆಗಿರುವ ವಿಡಿಯೋವನ್ನು ನೋಡಿರುವ ಜನ ಟಿವಿಯಲ್ಲಿ ಕುಳಿತು ಭವಿಷ್ಯ ಹೇಳೋದರೊಂದಿಗೆ ವ್ಯವಹಾರ ಮಾಡೋದನ್ನ ಇವರಿಂದ ಕಲಿಯಬೇಕು ಎಂದು ಕಾಲೆಳೆದಿದ್ದಾರೆ.
ಟಿವಿಯಲ್ಲಿ ಕುಳಿತ ಆರ್ಯವರ್ಧನ್ ಗುರೂಜಿಗೆ ಕರೆ ಮಾಡುವ ಮಹಿಳೆಯ ಬಳಿಯಿಂದ ಅವರ ಪುತ್ರನ ಜನ್ಮದಿನಾಂಕವನ್ನು ಕೇಳುತ್ತಾರೆ. ಆಕೆ 29, 7 1998 ಮಧ್ಯಾಹ್ನ 1.30ಕ್ಕೆ ಎಂದು ಹೇಳುತ್ತಿದ್ದಂತೆಯೇ, ‘ಮಗ ಏನ್ಮಾಡ್ತಿದ್ದಾನೆ..’ ಎಂದು ಆರ್ಯವರ್ಧನ್ ಕೇಳಿದ್ದಾರೆ. ಮಗ ಮನೆ ಕಡೆಯಲ್ಲೇ ಇರೋದು, ಅಲ್ಲಿ ನೋಡಿಕೊಳ್ಳುತ್ತಿದ್ದಾನೆ ಎಂದು ಮಹಿಳೆ ಹೇಳುತ್ತಾರೆ.
ಇದರ ಬೆನ್ನಲ್ಲಿಯೇ ಆರ್ಯವರ್ಧನ್ ಗುರೂಜಿ, ‘ನಿನ್ನ ಮಗನಿಗೆ ಡೈವೋರ್ಸ್ ಆಗುತ್ತೆ. ಎರಡು ಮದುವೆ ಆಗುತ್ತೆ. ಅವನ ಜಾತಕ ಹಾಳಾಗೋಯ್ತು. 7ನೇ ಮನೆಯಲ್ಲಿ ಶನಿ ಇದ್ದಾನೆ. ಅವನು ನೀಚ ಶನಿ. ಗುರು 6ನೇ ಮನೆಯಲ್ಲಿದ್ದಾನೆ. ಇವನ ಜಾತಕ ಮುಂಡಾಮುಚ್ಕಂಡು ಹೋಯ್ತು. 10ನೇ ಮನೆಯಲ್ಲಿ ಚಂದ್ರ ಇದ್ದಾನೆ. ಹಾಗಂದ್ರೆ ಇನ್ನೂ ಎಕ್ಕುಟ್ಟಿ ಹೋಗಿದೆ ಅಂತಾನೆ ಲೆಕ್ಕ. ಎರಡು ಮದುವೆ ಅನ್ನೋದು ಲೆಕ್ಕಾ ಮಾಡಿಕೊಳ್ಳಿ. ಮೊದಲನೆ ಮದುವೆಯಲ್ಲಿ ಬಂದ ಸೊಸೆ ನಿಮ್ಮ ‘ಬುಂಡೆ’ (ತಲೆ) ಒಡಿಯೋಕೆ ಹೋಗ್ತಾಳೆ’ ಎಂದು ಆರ್ಯವರ್ಧನ್ ಹೇಳುತ್ತಿದ್ದಂತೆ, 7ನೇ ಮನೆಯಲ್ಲಿ ಚಂದ್ರ ಇರೋದು ಅಂತಾರಾಲ್ಲ ಎಂದು ಆ ಮಹಿಳೆ ಹೇಳುತ್ತಾರೆ.
ಇದಕ್ಕೆ ಉತ್ತರಿಸಿರುವ ಆರ್ಯವರ್ಧನ್ ಗುರೂಜಿ,’ಮಧ್ಯಾಹ್ನ 1.30ಕ್ಕೆ ಹುಟ್ಟಿರೋದಲ್ವ. ಹಾಗಿದ್ರೆ 7ನೇ ಮನೆಯಲ್ಲಿ ಇರೋದು ಶನಿ. ತುಲಾ ಲಗ್ನ. ಬರೋ ಸೊಸೆ ನಿಮ್ಮ ಬುರುಡೆ ಒಡಿಯೋಕೆ ಹೋಗ್ತಾಳೆ. ನಿಮಗೆ ತಿ*ದ ಮೇಲೆಲ್ಲಾ ಒದೀತಾಳೆ. ಸೊಸೆಗೆ ನೀವು ಒದಿತಾ ಇದ್ರಲ್ಲ. ಅದೇ ರೀತಿ ಈಗ ಸೊಸೆ ನಿಮ್ಮನ್ನ ಒದೀತಾಳೆ. ಅತ್ತೆ ಮೇಲೆಲ್ಲಾ ಕೇಸ್ ಹಾಕಿ ಜೈಲಿಗೆ ಕಳಿಸ್ತಾಳೆ. ನನ್ನ ಸಾಯಿಸೋಕೆ ಬಂದಿದ್ಲು ಅಂತಾ ಸುಳ್ಳು ಕೇಸ್ ಹಾಕ್ತಾಳೆ. ನಿಮ್ಮ ಮಗನಿಗೆ ಮದುವೆ ಮಾಡ್ವೇಡಿ. ಯಾವುದಾದರೂ ಆಶ್ರಮಕ್ಕೆ ಕೊಟ್ಟುಬಿಡಿ’ ಎಂದಿದ್ದಾರೆ.
ಕೊನೆಗೆ ಪರಿಹಾರ ಎನ್ನುವಂತೆ, ‘ಮದುವೆ ಆದ ನಂತರ ನೀವು ಅವರ ಜೊತೆ ಇರಬೇಡಿ. ಅವರನ್ನ ಬೇರೆ ಕಳಿಸಿ. ಮಕ್ಕಳು-ಮರಿ ಹುಟ್ಟೋವರೆಗೂ ಏನಾದರೂ ಜಗಳ ಆಯ್ತೋ, ನೀವೆಲ್ಲಾ ಕಂಬಿ ಎಣಿಸಬೇಕಾಗುತ್ತೆ. ಇಡೀ ಕುಟುಂಬದವರು ಬೇಲ್ ತೆಗೆದುಕೊಳ್ಳಬೇಕಾಗುತ್ತೆ. ಮೂರು ಸ್ಟೋನ್ ಕೊಡುತ್ತೇನೆ. ಅದನ್ನು ನೀರಲ್ಲಿ ಹಾಕಿ ಸ್ನಾನ ಮಾಡಿ ಎಲ್ಲವೂ ಸರಿ ಆಗುತ್ತೆ. ಯಾವಾಗ ತರಿಸಿಕೊಳ್ತೀರಿ? ನಾಳೆ ಬಂದ್ರೂ ಸಿಗುತ್ತೆ. ನೀವು ಬೆಂಗಳೂರಿಗೆ ಬರೋದೇನು ಬೇಡ. ಆನ್‌ಲೈನ್‌ನಲ್ಲೇ ಕಳಿಸಿಕೊಡ್ತೀನಿ’ ಎಂದು ಆರ್ಯವರ್ಧನ್ ಹೇಳಿದ್ದಾರೆ.
ಬೆದರಿಸಿ ಸ್ಟೋನ್ ವ್ಯಾಪಾರ ಮಾಡಿಸಿದ ಆರ್ಯವರ್ಧನ್ ಗುರೂಜಿ
ಇವರ ವಿಡಿಯೋಗೆ ಕಾಮೆಂಟ್ ಮಾಡಿರುವ ಹಲವರು, ವ್ಯವಹಾರ ಮಾಡೋದನ್ನ ಇಂಥವರಿಂದ ಕಲಿಯಬೇಕು ಎಂದಿದ್ದಾರೆ. ‘ಕೊನೆಗೂ ಮೂರು ಸ್ಟೋನ್‌ಗಳನ್ನು ವ್ಯಾಪಾರ ಮಾಡಿಬಿಟ್ಟ’ ಎಂದು ಕಾಮೆಂಟ್ ಮಾಡಿದ್ದರೆ, ‘ಜನ ಮರಳೋ ಜಾತ್ರೆ ಮರಳೋ ಎಲ್ಲಿವರೆಗೂ ಟೋಪಿ ಹಾಕಿಸಿಕೊಳ್ಳೋರು ಇರ್ತಾರೋ ಅಲ್ಲಿವರೆಗೂ ಟೋಪಿ ಹಾಕೋರು ಇದ್ದೇ ಇರ್ತಾರೆ’ ಎಂದಿದ್ದಾರೆ. ‘ಜಾತಕ ಫಲ ವಿಮರ್ಶೆ ಮಾಡುವಾಗ ಜನರನ್ನು ಹೆದರಿಸುವ ರೀತಿ ಫಲ ಹೇಳಬಾರದು. ಸಪ್ತಮ ದೋಷಕ್ಕೆ ಪರಿಹಾರ ಶಾಸ್ತ್ರದಲ್ಲಿ ಹೇಳಿದ್ದಾರೆ. ಯಾವುದೇ ಕಷ್ಟಕ್ಕೂ ದೇವರನ್ನೂ ಆರಾಧಿಸಿಯೇ ಫಲ ಪಡೆದುಕೊಳ್ಳಬೇಕೆ ಹೊರತು ಕಲ್ಲು ಧಾರಣೆಯಿಂದ ದೇವತಾ ಆರಾಧನೆ ಮಾಡಿದಷ್ಟು ಫಲ ಲಭಿಸೋದಿಲ್ಲ. ಶಾಸ್ತ್ರವನ್ನುಹೇಳಲು ಕೆಲವು ಸಾಮಾನ್ಯ ಮಾನದಂಡವನ್ನಾದರೂ ಅನುಸರಿಸಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ. ‘ಜ್ಯೋತಿಷ್ಯ ಅನ್ನೋ ಮಹಾಜ್ಞಾನಕ್ಕೆ ಇಂಥ ಕಚಡಾಗಳಿಂದ ಕೆಟ್ಟ ಹೆಸರು ಬಂದಿರೋದು..’ ಎಂದು ಮತ್ತೊಬ್ಬರು ಬರೆದಿದ್ದಾರೆ.