ಮಲೆ ಮಾದೇಶ್ವರ ಬೆಟ್ಟದಲ್ಲಿ ಕನ್ನಡಕ್ಕೆ ಅಪಮಾನ? ಯುಗಾದಿ ಜಾತ್ರೆಯಲ್ಲಿ ತಮಿಳು ದರ್ಬಾರ್: ಪ್ರಾಧಿಕಾರದ ವಿರುದ್ಧಆಕ್ರೋಶ! | Chamarajanagar Male Mahadeshwara Hills Tamil Welcome Board Controversy Ugadi Jatra Kannada Activists Sparks Sat

ಮಲೆ ಮಾದೇಶ್ವರ ಬೆಟ್ಟದಲ್ಲಿ ಕನ್ನಡಕ್ಕೆ ಅಪಮಾನ? ಯುಗಾದಿ ಜಾತ್ರೆಯಲ್ಲಿ ತಮಿಳು ದರ್ಬಾರ್: ಪ್ರಾಧಿಕಾರದ ವಿರುದ್ಧಆಕ್ರೋಶ! | Chamarajanagar Male Mahadeshwara Hills Tamil Welcome Board Controversy Ugadi Jatra Kannada Activists Sparks Sat



ಮಲೆ ಮಾದೇಶ್ವರ ಬೆಟ್ಟದಲ್ಲಿ ಕನ್ನಡಕ್ಕೆ ಅಪಮಾನ? ಯುಗಾದಿ ಜಾತ್ರೆಯಲ್ಲಿ ತಮಿಳು ದರ್ಬಾರ್: ಪ್ರಾಧಿಕಾರದ ವಿರುದ್ಧಆಕ್ರೋಶ! | Chamarajanagar Male Mahadeshwara Hills Tamil Welcome Board Controversy Ugadi Jatra Kannada Activists Sparks Sat

ಚಾಮರಾಜನಗರದ ಪ್ರಸಿದ್ಧ ಮಲೆ ಮಾದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಗೆ ಅಳವಡಿಸಲಾದ ಸ್ವಾಗತ ಕಮಾನು ಸಂಪೂರ್ಣವಾಗಿ ತಮಿಳಿನಲ್ಲಿರುವುದು ಭಾಷಾ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದ ನೆಲದಲ್ಲಿ ಕನ್ನಡವನ್ನು ಕಡೆಗಣಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಚಾಮರಾಜನಗರ (ಮಾ.18): ದಕ್ಷಿಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ, ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಮಲೆ ಮಾದೇಶ್ವರ ಬೆಟ್ಟದಲ್ಲಿ ಈಗ ಭಾಷಾ ವಿವಾದವೊಂದು ಭುಗಿಲೆದ್ದಿದೆ. ಶ್ರೀ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಯುಗಾದಿ ಜಾತ್ರೆಯ ಪ್ರಯೋಗವಾಗಿ ಅಳವಡಿಸಿರುವ ಸ್ವಾಗತ ಕಮಾನು (Banner) ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕದ ನೆಲದಲ್ಲಿ ಕನ್ನಡವನ್ನು ಕಡೆಗಣಿಸಿ, ಕೇವಲ ತಮಿಳು ಭಾಷೆಯಲ್ಲಿ ಬ್ಯಾನರ್ ಅಳವಡಿಸಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:

ಈ ಕುರಿತು ಕಾರ್ತಿಕ್ ವೆಂಕಟೇಶ್ (@VKkarthik169) ಎಂಬುವವರು ಎಕ್ಸ್ (ಟ್ವಿಟ್ಟರ್) ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದು, ಪ್ರಾಧಿಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ‘ಇದೇನು ಕರ್ನಾಟಕವೋ ಅಥವಾ ತಮಿಳುನಾಡೋ? ನಾಚಿಕೆಯಾಗಬೇಕು ನಿಮಗೆ, ಈ ಬ್ಯಾನರ್ ಅನ್ನು ಈ ಕೂಡಲೇ ಕಿತ್ತೊಗೆಯಿರಿ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಒಂದು ಕಡೆ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಭಾಷಣ ಮಾಡುತ್ತಾರೆ, ಆದರೆ ಅವರೇ ಅಧ್ಯಕ್ಷರಾಗಿರುವ ಪ್ರಾಧಿಕಾರದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ದುರಂತ ಎಂದು ಅವರು ಕಿಡಿಕಾರಿದ್ದಾರೆ.

Scroll to load tweet…

ಬ್ಯಾನರ್‌ನಲ್ಲಿ ಏನಿದೆ?

ಕರ್ನಾಟಕ ಸರ್ಕಾರದಿಂದ ಯುಗಾದಿ ಜಾತ್ರಾ ಮಹೋತ್ಸವ-2026ರ ಅಂಗವಾಗಿ ಈ ಸ್ವಾಗತ ಕಮಾನನ್ನು ಅಳವಡಿಸಲಾಗಿದೆ. ಇದರಲ್ಲಿ ‘ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಹದೇಶ್ವರ ಬೆಟ್ಟ-571490, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ. ಯುಗಾದಿ ಜಾತ್ರಾ ಮಹೋತ್ಸವ – 2026 ಎಲ್ಲರಿಗೂ ಸ್ವಾಗತ’ ಎಂದು ಸಂಪೂರ್ಣವಾಗಿ ತಮಿಳಿನಲ್ಲಿ ಬರೆಯಲಾಗಿದೆ. ಗಡಿ ಭಾಗದ ಜಿಲ್ಲೆಯಾದ್ದರಿಂದ ತಮಿಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ಕಾರಣಕ್ಕೆ ತಮಿಳು ಬಳಸುವುದು ತಪ್ಪಲ್ಲ, ಆದರೆ ಕನ್ನಡವನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ.

ಜನಪ್ರತಿನಿಧಿಗಳ ಮೌನಕ್ಕೆ ಪ್ರಶ್ನೆ:

ಈ ವಿವಾದಾತ್ಮಕ ಬ್ಯಾನರ್ ಅಳವಡಿಕೆಯಾಗಿದ್ದರೂ ಹನೂರು ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ‘ಇವರಿಗೆ ಕಣ್ಣು ಕಾಣುತ್ತಿಲ್ಲವೇ? ಅಥವಾ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕನ್ನಡದ ಅಸ್ಮಿತೆಯನ್ನು ಬಲಿ ಕೊಡುತ್ತಿದ್ದಾರೆಯೇ?’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದ್ದಿವೆ.

ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಆಗ್ರಹ:

ಮಲೆ ಮಾದೇಶ್ವರ ಬೆಟ್ಟದ ಪ್ರಾಧಿಕಾರವು ಕೂಡಲೇ ಈ ಬ್ಯಾನರ್ ಅನ್ನು ತೆರವುಗೊಳಿಸಿ, ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವ ಬ್ಯಾನರ್‌ಗಳನ್ನು ಅಳವಡಿಸಬೇಕು. ಕನ್ನಡ ನಾಡಿನ ಸಾಂಸ್ಕೃತಿಕ ಕೇಂದ್ರವೊಂದರಲ್ಲಿ ಕನ್ನಡಕ್ಕೆ ಈ ರೀತಿಯ ಅವಮಾನವಾಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಘಟನೆ ಜಿಲ್ಲಾಡಳಿತ ಮತ್ತು ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.



Source link

Leave a Reply

Your email address will not be published. Required fields are marked *