ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ. ಕೊಹ್ಲಿ 2011 ರಿಂದ 2023ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು. ಈ ಅವಧಿಯಲ್ಲಿ ನಾಯಕನಾಗಿ 143 ಪಂದ್ಯಗಳನ್ನಾಡಿದ್ದ ಕೊಹ್ಲಿ 4994 ರನ್ ಬಾರಿಸಿದ್ದರು. ಇದರಲ್ಲಿ ಐದು ಶತಕಗಳು ಮತ್ತು 37 ಅರ್ಧಶತಕಗಳು ಸೇರಿದ್ದವು. ಆದಾಗ್ಯೂ ಕೊಹ್ಲಿಗೆ ತಂಡವನ್ನು ಟ್ರೋಫಿ ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.
ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ ಎಂಎಸ್ ಧೋನಿ ಇದ್ದಾರೆ. ನಾಯಕನಾಗಿ ಧೋನಿ 226 ಪಂದ್ಯಗಳಲ್ಲಿ 4753 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಇವೆ. ಧೋನಿಯ ಗರಿಷ್ಠ ಸ್ಕೋರ್ ಅಜೇಯ 84 ರನ್.
ಮೂರನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಐಪಿಎಲ್ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ರೋಹಿತ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು 158 ಪಂದ್ಯಗಳಲ್ಲಿ ನಾಯಕನಾಗಿ 3986 ರನ್ ಮತ್ತು 25 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 98 ರನ್.
ನಾಲ್ಕನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎರಡು ಐಪಿಎಲ್ ಪ್ರಶಸ್ತಿಗಳಲ್ಲಿ ಮುನ್ನಡೆಸಿದ ಗೌತಮ್ ಗಂಭೀರ್ ಇದ್ದಾರೆ. ಗಂಭೀರ್ ನಾಯಕನಾಗಿ 129 ಪಂದ್ಯಗಳಲ್ಲಿ 3518 ರನ್ ಗಳಿಸಿದ್ದಾರೆ ಮತ್ತು 31 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಇದ್ದಾರೆ. ವಾರ್ನರ್ ನಾಯಕನಾಗಿ 83 ಪಂದ್ಯಗಳಲ್ಲಿ 3356 ರನ್ ಗಳಿಸಿದ್ದಾರೆ. 2016 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಟ್ರೋಫಿಗೆ ಮುನ್ನಡೆಸಿದ್ದ ವಾರ್ನರ್ ಒಂದು ಶತಕ ಮತ್ತು 32 ಅರ್ಧಶತಕಗಳನ್ನು ಸಿಡಿಸಿದ್ದಾರೆ.




