
ಹುಣಸೂರು, ಮಾ.19: ಆಹಾರ ಮತ್ತು ನೀರು ಅರಸಿ ನಾಡಿಗೆ ಬಂದಿದ್ದ ಒಂಟಿ ಸಲಗವೊಂದು ವಾಪಸ್ ಕಾಡಿಗೆ ಹೋಗುವ ಸಂಭ್ರಮದಲ್ಲಿ ಬ್ಯಾರಿಕೇಡ್ ನಡುವೆ ಸಿಲುಕಿ ಅಕ್ಷರಶಃ ಮರಣಾತನೆ ಅನುಭವಿಸಿದ ಘಟನೆ ಉಡುವೆಪುರ ಗ್ರಾಮದ ಬಳಿ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಈ ಒಂಟಿ ಸಲಗ, ಹಸಿವಿನಿಂದಾಗಿ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿತ್ತು. ಬೆಳ್ಳಂಬೆಳಿಗ್ಗೆ ಜಮೀನಿನಲ್ಲಿ ಆನೆಯನ್ನು ಕಂಡ ರೈತರು ಭಯದಿಂದ ಜೋರಾಗಿ ಕೂಗಾಡಿದ್ದಾರೆ. ಜನರ ಚೀರಾಟ ಮತ್ತು ವಾಹನಗಳ ಹಾರ್ನ್ ಸದ್ದಿನಿಂದ ಬೆದರಿದ ಆನೆ, ಗಾಬರಿಯಿಂದ ಕಾಡಿನತ್ತ ಓಡುತ್ತಿದೆ. ಕಾಡಿನೊಳಗೆ ಪ್ರವೇಶಿಸುವ ಬರದಲ್ಲಿ ಆನೆಯು ತಡೆಗೋಡೆಯ ಹಳಿಗಳಿಂದ ನಿರ್ಮಿಸಲಾಗಿದ್ದ (ರೈಲ್ವೆ ಟ್ರ್ಯಾಕ್ ಬೇಲಿ) ಅಡಿಯಿಂದ ನುಸುಳಲು ಪ್ರಯತ್ನಿಸಿದೆ. ಈ ವೇಳೆ ಆನೆಯ ದೇಹವು ಕಂಬಗಳ ನಡುವೆ ಸಿಲುಕಿಕೊಂಡಿದೆ. ಸುಮಾರು ಹೊತ್ತು ಆನೆಯು ಹೊರಬರಲಾರದೆ ಓಡಿದ್ದು, ಅದರ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆನೆಗೆ ಯಾವುದೇ ಗಾಯವಾಗದಂತೆ ಜಾಣ್ಮೆಯಿಂದ ಅದನ್ನು ಬಿಡಿಸುವಲ್ಲಿ ಯಶಸ್ವಿಯಾದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ