
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದೊಂದಿಗೆ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದು, ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾದರೂ ಅಚ್ಚರಿಯಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾನು ಅಭ್ಯರ್ಥಿ ಹಾಕುವ ಬಗ್ಗೆ ಕಾದು ನೋಡುತ್ತೇನೆ: ಯತ್ನಾಳ್
ವಿಜಯಪುರ: ರಾಜ್ಯದಲ್ಲಿ ಬಾಗಲಕೋಟೆ, ದಾವಣಗೆರೆ ಈ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ದಾವಣಗೆರೆಯಲ್ಲಿ ಬಿಜೆಪಿ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದ್ದರೆ, ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ, ಹಿಂದೂ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ದಾವಣಗೆರೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆಯಾದರು ಅಚ್ಚರಿಯಿಲ್ಲ
ಬಿಜೆಪಿಯವರು ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ನಾನು ಅಭ್ಯರ್ಥಿ ಹಾಕುವ ಬಗ್ಗೆ ಕಾದು ನೋಡುತ್ತೇನೆ. ವಿಜಯೇಂದ್ರ ಎಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾನೆ ಅನ್ನೋದನ್ನ ಚೆಕ್ ಮಾಡ್ತೇವೆ. ದಾವಣಗೆರೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆಯಾದರು ಅಚ್ಚರಿಯಿಲ್ಲ, ಏಕೆಂದರೆ ಶಾಮನೂರು ಕುಟುಂಬದ ಜೊತೆಗೆ ವಿಜಯೆಂದ್ರಗೆ ಹೊಂದಾಣಿಕೆ ಇದೆ. ದಾವಣಗೆರೆಯಲ್ಲಿ ಬಿಜೆಪಿ ಪರ ವಿಜಯೇಂದ್ರ ಕೆಲಸ ಮಾಡ್ತಾರೋ ಇಲ್ಲೋ ಗೊತ್ತಿಲ್ಲ.
ಶಾಮನೂರು ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ
ಯಡಿಯೂರಪ್ಪ ಹಾಗೂ ಶಾಮನೂರು ಕುಟುಂಬಗಳು ಬಹಿರಂಗವಾಗಿಯೇ ಹೊಂದಾಣಿಕೆಯಿಂದ ಇದೆ. ಬಿಜೆಪಿ ಪರ ಅಪ್ಪ ಮಗ ಕೆಲಸ ಮಾಡುವ ಬಗ್ಗೆ ನನಗೆ ಅನುಮಾನವಿದೆ. ಹೊಂದಾಣಿಕೆ ಮಾಡಿಕೊಂಡು ಇವರು ಕೊನೆ ಕ್ಷಣದಲ್ಲಿ ಶಾಮನೂರು ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿಯ ಹಿರಿಯ ಮುಖಂಡ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಯ್ತು ಕಾಡಾನೆಗಳ ಅಪರೂಪದ ದೃಶ್ಯ
ಒಂದು ವೇಳೆ ಕಾಂಗ್ರೆಸ್ ಮುಸ್ಲಿಂಮರಿಗೆ ಟಿಕೆಟ್ ನೀಡಿದರೆ, ಬಿಜೆಪಿಯವರು ಶಾಮನೂರು ಮಗನಿಗೆ ಟಿಕೆಟ್ ನೀಡಿದರು ಆಶ್ಚರ್ಯವಿಲ್ಲ. ನನಗೆ ಈ ಬಗ್ಗೆ 100%. ಮಾಹಿತಿ ಇದೆ ಎಂದು ಯತ್ನಾಳ್ ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಯಾರನ್ನು ಹಾಳು ಮಾಡ್ತೇಕು ಅಂತಾ ಈ ಅಪ್ಪ ಮಗ ಯೋಚನೆ ಮಾಡ್ತಾರೆ. ಯಡಿಯೂರಪ್ಪ ಕುಟುಂಬ ಹಲ್ಕಾ ರಾಜಕಾರಣ ಮಾಡೋದನ್ನ ಬಿಡಬೇಕು ಎಂದು ಯಡಿಯೂರಪ್ಪ ಕುಟುಂಬದವರ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.
ನಂತರ ಬಾಗಲಕೋಟ ಬಿಜೆಪಿ ಅಭ್ಯರ್ಥಿಯಾಗಿ ವೀರಣ್ಣ ಚರಂತಿಮಠ ಆಯ್ಕೆಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಚರಂತಿಮಠ ಕುಟುಂಬದ ಜೊತೆಗೆ ನಮಗೆ ಒಳ್ಳೆಯ ಸಂಬಂಧ ಇದೆ. ನಾನು ಅಲ್ಲಿ ಅಭ್ಯರ್ಥಿ ಹಾಕುವ ಬಗ್ಗೆ ಇನ್ನೂ ಚಿಂತನೆ ನಡೆಸಬೇಕಷ್ಟೇ ಎಂದ ಹೇಳಿದ್ದಾರೆ.
ಬಾಗಲಕೋಟೆ ಅಭ್ಯರ್ಥಿ ವೀರಣ್ಣ ಚರಂತಿಮಠ ಹೇಳಿದ್ದೇನು?
ಇದಕ್ಕೂ ಮೊದಲು ಬಾಗಲಕೋಟೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮಾತನಾಡಿದ ವೀರಣ್ಣ ಚರಂತಿಮಠ, ಯುಗಾದಿ ಹಬ್ಬದ ದಿನವೇ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ಘೋಷಣೆ ಮಾಡಿದ್ದಕ್ಕೆ ರಾಜ್ಯ & ರಾಷ್ಟ್ರೀಯ ನಾಯಕರಿಗೆ ಧನ್ಯವಾದ ಹೇಳ್ತೇನೆ. ಮಾರ್ಚ್ 23ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಬೀಳೂರು ಗುರುಬಸವ ದೇವಸ್ಥಾನದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ಹಿಂದುತ್ವ ಮತ್ತು ಅಭಿವೃದ್ಧಿ ಎರಡು ದೃಷ್ಠಿಕೋನ ಇಟ್ಟುಕೊಂಡು ಜನರ ಮುಂದೆ ಹೋಗ್ತೇವೆ. ಕಳೆದ ಬಾರಿ ಕೆಲವು ಕಾರಣದಿಂದ ಸೋಲಾಗಿದೆ. ಈ ಬಾರಿ ಹಾಗಾಗೋದಿಲ್ಲ, ಎಲ್ಲವನ್ನ ಸರಿಪಡಿಸಿಕೊಂಡು ಗೆಲುವು ಕಾಣುತ್ತೇವೆ. ಈ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು ಬರಲಿದ್ದಾರೆ. ಹಿಂದುತ್ವದ ಅಜೆಂಡಾ ಇರೋದ್ರಿಂದ ಯತ್ನಾಳ್ ಅವರು ಬಂದರೂ ಬರಬಹುದು. ಈಗಾಗಲೇ ಈ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರು ಎಂಎಲ್ಸಿ ಆದವರು, ಅವರಿಗೆ ಕ್ಷೇತ್ರ ಪರಿಚಯ ಚೆನ್ನಾಗಿದೆ. ನಮ್ಮ ವೈಯಕ್ತಿಕ ಸಂಬಂಧದ ಮೇಲೆ ಅವರು ಬಂದು ಪ್ರಚಾರ ಮಾಡಬಹುದು. ಪಕ್ಷವನ್ನ ಬಿಟ್ಟು ಹೋದವರ ಕರೆತರುವ ಕೆಲಸ ನಡಿತಿದೆ. ಇದನ್ನ ಮಾಜಿ ಸಚಿವ ಗೋವಿಂದ ಕಾರಜೋಳ ಮಾಡ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಗೆಲುವು ಸಾಧಿಸುತ್ತೇವೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ವೀರಣ್ಣ ಚರಂತಿಮಠ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ದಾವಣಗೆರೆ ದಕ್ಷಿಣ ಬಿಜೆಪಿ ಟಿಕೆಟ್ ಸಿಗ್ತಿದ್ದಂತೆ ಹಮಾಲಿಯಾಗಿದ್ದ ತಂದೆಯ ನೆನೆದು ಭಾವುಕರಾದ ಶ್ರೀನಿವಾಸ್ ದಾಸಕರಿಯಪ್ಪ