
ವಿಜಯಪುರ, ಮಾರ್ಚ್ 19: ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಬಾಗಕೋಟೆಗೆ ವೀರಣ್ಣ ಚರಂತಿಮಠ ಹಾಗೂ ದಾವಣಗೆರೆಗೆ ಶ್ರೀನಿವಾಸ ಹೆಸರು ಫೈನಲ್ ಆಗಿದೆ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ಬಸನಗೌಡ ಪಾಟೀಲ್ ಯತ್ನಾಳ್) ಮಾತನಾಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠಕ್ಕೆ ನಾನು ಬೆಂಬಲ ನೀಡುತ್ತೇನೆ. ಜೊತೆಗೆ ದಾವಣಗೆರೆಯಲ್ಲಿ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು, ಶಾಮನೂರು ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ವೀರಣ್ಣ ಚರಂತಿಮಠಗೆ ಬೆಂಬಲಿಸುವೆ ಎಂದ ಯತ್ನಾಳ್
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚರಂತಿಮಠಕ್ಕೆ ಬೆಂಬಲಿಸಿದರು. ಚರಂತಿಮಠ ಹಾಗೂ ನಮ್ಮದು ಹಳೆಯ ಸಂಬಂಧ. ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡಿದೆ. ಅವರಿಗೆ ಈ ಹಿಂದೆ ಬಿಜೆಪಿ ಟಿಕೆಟ್ ಕೊಡ್ತೇನೆ. ಆಗ ವೀರಣ್ಣ ಚರಂತಿಮಠಕ್ಕೆ ಟಿಕೆಟ್ ಕೊಡುವ ಮನಸ್ಸು ಯಡಿಯೂರಪ್ಪಗೆ ಇರಲಿಲ್ಲ. ಅನಂತಕುಮಾರ ನಾನು ಹಾಗೂ ಎಟ್ ಸೇರಿ ಚರಂತಿಮಠ ಅವರಿಗೆ ಟಿಕೆಟ್ ಕೊಡಿಸಿದ್ದೆವು. ಆಗ ಜಗದೀಶ್ ಶೆಟ್ಟರ್ ಎಲೆಕ್ಷನ್ ಕಮೀಟಿ ಚೇರ್ಮನ್ ಆಗಿದ್ದರು. ಶೆಟ್ಟರ್ ಜೊತೆಗೆ ಜಗಳ ಮಾಡಿ ಚರಂತಿಮಠಕ್ಕೆ ಟಿಕೆಟ್ ಕೊಡಿಸಿದ್ದಾರೆ.
ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಾಗ್ದಾಳಿ ಮಾಡಿದ ಯತ್ನಾಳ್, ಬಿಜೆಪಿ ಮಹಾನ್ ನಾಯಕರು ಎಲ್ಲೆಲ್ಲಿ ಹೊಂದಾಣಿಕೆ ಇದೆ ಎಂದು ನೋಡಬೇಕು. ಅಪ್ಪ-ಮಕ್ಕಳು ಯಾರನ್ನು ಕೊಲ್ಲಬೇಕೆಂದು ನೋಡಬೇಕು. ಅವರದ್ದು ಶಾಮನೂರು ಜೊತೆ ಹೊಂದಾಣಿಕೆ ಇದೆಯಲ್ಲ ಬಿಜೆಪಿ ಪರ ಕೆಲಸ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಯಡಿಯೂರಪ್ಪ ಹಾಗೂ ಮಕ್ಕಳು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ವೋ ಎಂದು ಗೊತ್ತಿಲ್ಲ. ಇನ್ನು ಶಾಮನೂರು ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ಸಿಗುತ್ತೋ ಇಲ್ವೋ ಅದೂ ಗೊತ್ತಿಲ್ಲ. ಶಾಮನೂರು, ಯಡಿಯೂರಪ್ಪ ಕುಟುಂಬಗಳು ಹೊಂದಾಣಿಕೆ ಮಾಡಿಕೊಂಡಿವೆ. ಒಂದು ವೇಳೆ ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಮುಸ್ಲಿಂಮರಿಗೆ ಕೊಟ್ಟರೆ, ಶಾಮನೂರು ಮಲ್ಲಿಕಾರ್ಜುನ ಮಗನಿಗೆ ಬಿಜೆಪಿ ಟಿಕೆಟ್ ಕೊಟ್ಟರೂ ಆಶ್ಚರ್ಯವಿಲ್ಲ. ನೂರಕ್ಕೆ ನೂರರಷ್ಟು ಮಾಹಿತಿ ನನಗಿದೆ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಯತ್ನಾಳ್ ಬಿಜೆಪಿಗೆ ಏಕೆ ಕೆಲವರು ಪೋಸ್ಟ್ ಮಾಡುತ್ತಾರೆ. ಇದೆಲ್ಲಾ ಕೆಲಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಕಲಿ ಫೇಸ್ ಬುಕ್ ಮೂಲಕ ಮಾಡುತ್ತಾನೆ. ಬಿ.ಎಲ್ ಸಂತೋಷ್, ಪ್ರಲ್ಹಾದ್ ಜೋಶಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾನೆ. ಅದಕ್ಕಾಗಿ ತಿಂಗಳಿಗೆ 50 ಲಕ್ಷ ರೂ ಖರ್ಚು ಮಾಡುತ್ತಾನೆಂದು ವಾಗ್ದಾಳಿ ಮಾಡಿದರು. ತಾಯಿಗೆ ದ್ರೋಹ ಬಗೆಯಲ್ಲಾ ಎಂದು ನಿಮ್ಮಪ್ಪ ಭಾಷಣ ಮಾಡುತ್ತಿದ್ದಾರೆ. ಅದನ್ನೇ ನೋಡಿ ಕನ್ನಡಿ ಮುಂದೆ ನಿಂತು ಭಾಷಣ ಕಲಿತಿದ್ದೀಯಾ, ನಿನಗೆ ಹಣ ತಿನ್ನೋದು ಮಾತ್ರ ಗೊತ್ತಿದೆ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ಈಗ ಉಪ ಚುನಾವಣೆಯಲ್ಲಿ ನೀನು ಬಾಗಲಕೋಟೆ, ದಾವಣಗೆರದಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಶಾಮನೂರು ಜೊತೆ ಹೋಗಬಹುದು.
ಇದನ್ನೂ ಓದಿ: ಉಪಚುನಾವಣೆ ಪ್ರಚಾರಕ್ಕೆ ಉಚ್ಛಾಟಿತ ಶಾಸಕ? ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯ ಸ್ಫೋಟಕ ಹೇಳಿಕೆ
ಕುಮಾರಸ್ವಾಮಿಯನ್ನು ಸೋಲಿಸಲು ಪ್ರಯತ್ನಿಸಿದರು, ಸೋಮಣ್ಣರನ್ನು ಸೋಲಿಸಲು ಪ್ರಯತ್ನಿಸಿದರು. ಕೊಪ್ಪಳದಲ್ಲಿ ಡೀಲಿಂಗ್, ಶಿಖಾರಿಪುರದ ಡೀಲಿಂಗ್, ಕಲಬುರಗಿಯಲ್ಲೂ ಸೋಲು ಹೊಂದಾಣಿಕೆ ಮಾಡಿಕೊಂಡರು. ರಾಯಚೂರು, ಬಳ್ಳಾರಿ, ಕೊಪ್ಪಳದಲ್ಲೂ ಹೊಂದಾಣಿಕೆ ಮಾಡಿದರು. ಇದೆಲ್ಲಾ ಮುಂದೆ ನಡೆಯಲ್ಲ. ಯಡಿಯೂರಪ್ಪ ಲಿಂಗಾಯತ ಇರುತ್ತಾರೆ, ಇಲ್ಲದಿದ್ದರೆ ಇಡಿ ಕರ್ನಾಟಕ ಬಿಜೆಪಿ ಮುಳುಗುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿಗಳು ಹೇಳುವುದನ್ನು ನಂಬಿ ಪಿಎಂ
ಮೋದಿ, ಅಮೀತ್ ಶಾ, ಬಿಜೆಪಿ ಹೈಕಮಾಂಡ್ ಕಣ್ಣು ಮುಚ್ಚಬಾರದು ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.