ದಾವಣಗೆರೆಯಲ್ಲಿ ಬಹುಕೋಟಿ ಉದ್ಯೋಗ ವಂಚನೆ: ಹಿರೇಉಡ ತಾಂಡಾ ವಂಚಕರ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು! | Crore Job Scam In Davanagere Fake Government Jobs Offered To More Than 200 Victims In Channagiri Gdp

ದಾವಣಗೆರೆಯಲ್ಲಿ ಬಹುಕೋಟಿ ಉದ್ಯೋಗ ವಂಚನೆ: ಹಿರೇಉಡ ತಾಂಡಾ ವಂಚಕರ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು! | Crore Job Scam In Davanagere Fake Government Jobs Offered To More Than 200 Victims In Channagiri Gdp


ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಉಡ ತಾಂಡಾದಲ್ಲಿ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ನೂರಾರು ನಿರುದ್ಯೋಗಿಗಳಿಂದ ಸುಮಾರು ₹60 ಕೋಟಿ ವಂಚಿಸಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತ ಸಂಘ ಒತ್ತಾಯಿಸಿದ್ದು, ಪೊಲೀಸರ ನಿಷ್ಕ್ರಿಯತೆ ವಿರುದ್ಧ 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಉಡ ತಾಂಡಾದಲ್ಲಿ ನಡೆದಿರುವ ಬಹು ಕೋಟಿ ವಂಚನೆ ಪ್ರಕರಣವು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಉದ್ಯೋಗ ನೀಡುವುದಾಗಿ ನೂರಾರು ನಿರುದ್ಯೋಗಿಗಳಿಗೆ ಭರವಸೆ ನೀಡಿ ಸುಮಾರು ₹50 ರಿಂದ ₹60 ಕೋಟಿ ವಂಚನೆ ಮಾಡಿರುವ ಆರೋಪದ ಹಿನ್ನೆಲೆ, ಸಂಬಂಧಿಸಿದ ನಾಲ್ವರು ಆರೋಪಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ ನಾಯ್ಕ, “ಹಿರೇಉಡ ತಾಂಡಾದ ಮಂಜಾನಾಯ್ಕ, ರಾಘವೇಂದ್ರ ನಾಯ್ಕ, ಸುನೀತಾ ಮತ್ತು ಸಚಿನ್ ಎಂಬವರು ನಕಲಿ ನೇಮಕಾತಿ ಆದೇಶಗಳನ್ನು ನೀಡಿ ನಿರುದ್ಯೋಗಿಗಳನ್ನು ಮೋಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಆರೋಪಿಗಳನ್ನು ಬಂಧಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ” ಎಂದು ಕಿಡಿಕಾರಿದರು.

ಅವರ ಪ್ರಕಾರ, ಆರೋಪಿಗಳು ಬೆಸ್ಕಾಂ, ಆರ್‌ಡಿಪಿಆರ್, ಅಬಕಾರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ಉದ್ಯೋಗ ನೀಡುವುದಾಗಿ ಹೇಳಿ, ವಿಶ್ವಾಸ ಮೂಡಿಸಲು ನಕಲಿ ನೇಮಕಾತಿ ಪತ್ರಗಳು ಹಾಗೂ ಚೆಕ್‌ಗಳನ್ನು ನೀಡಿದ್ದಾರೆ. ಕೆಲವರಿಗೆ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಹುದ್ದೆಯ ನಕಲಿ ನೇಮಕಾತಿ ಆದೇಶಗಳನ್ನೂ ನೀಡಿರುವುದು ಬೆಳಕಿಗೆ ಬಂದಿದೆ. “ಬಸ್ ಟಿಕೆಟ್ ಹಂಚಿದಂತೆ ಚೆಕ್‌ಗಳನ್ನು ನೀಡಿರುವುದು, ವಂಚಕರು ಎಷ್ಟು ಯೋಜಿತವಾಗಿ ಈ ಕೃತ್ಯ ನಡೆಸಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆ ಇನ್ನೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ

ಈ ಪ್ರಕರಣದಲ್ಲಿ, ವಂಚನೆಗೊಳಗಾದವರು ದೂರು ನೀಡಿದಾಗ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಪೊಲೀಸ್ ಇಲಾಖೆ ಇನ್ನೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. “ವಂಚಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಸಿಪಿಐ ರವೀಶ್ ಹಾಗೂ ಕೆಲ ಸಿಬ್ಬಂದಿ ದೂರುದಾರರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಅನುಮಾನವೂ ಮೂಡಿದೆ” ಎಂದು ಶೇಖರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ವಂಚನೆಯ ಮೂಲಕ ಸಂಗ್ರಹಿಸಿದ ಹಣದಿಂದ ಆರೋಪಿಗಳು ಚನ್ನಗಿರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಮೀನು, ತೋಟ ಹಾಗೂ ಬಂಗಲೆಗಳನ್ನು ಖರೀದಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಇರುವ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಇನ್ನೂ 15 ದಿನಗಳೊಳಗೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ, ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಜ್ಯ ರೈತಮಿತ್ರ ಸಂಘಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಭಾರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ರಾಜ್ಯ ಸಂಚಾಲಕ ವಸಂತಕುಮಾರ, ಕರ್ನಾಟಕ ರೈತ ಮಿತ್ರ ಸಂಘದ ಎಚ್. ವೆಂಕಟೇಶ್, ಸಂತೋಷಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೋಸ ಹೋದವರಲ್ಲಿ ಲಂಬಾಣಿಗರೇ ಅಧಿಕ ಮಂದಿ

ಪ್ರತಿಯೊಬ್ಬರಿಂದ ₹10 ಲಕ್ಷದಿಂದ ₹20 ಲಕ್ಷವರೆಗೆ ಪಡೆದುಕೊಂಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಜನರಿಗೆ ಇದೇ ರೀತಿ ವಂಚಿಸಿದ್ದಾರೆ. ಮೋಸ ಹೋದವರಲ್ಲಿ ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯದವರಿಗೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು 15 ದಿನದೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿ, ಅಮಾಯಕ ಹಾಗೂ ಬಡ ಕುಟುಂಬಗಳಿಗೆ ಹಣ ಕೊಡಿಸಿ, ಸಂತ್ರಸ್ಥರಿಗೆ ನ್ಯಾಯ ಕೊಡಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ, ಡಿಸಿ- ಎಸ್‌ಪಿ ಕಚೇರಿಗಳಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸುವುದಾಗಿ ಶೇಖರ ನಾಯ್ಕ ಎಚ್ಚರಿಸಿದರು.



Source link

Leave a Reply

Your email address will not be published. Required fields are marked *