
ಎಂ.ಎಲ್. ಪ್ರಸನ್ನ ಅವರು ನಿರ್ದೇಶನ ಮಾಡಿದ ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾದಲ್ಲಿ ವಿಶೇಷ ಕಥಾಹಂದರ ಇದೆ. ಈ ಸಿನಿಮಾ ಬಿಡುಗಡೆಯಾಗಿ 50 ದಿನಗಳು (50 ದಿನಗಳು) ಪೂರೈಸಿದೆ. ಕನ್ನಡದಲ್ಲಿ ಅರ್ಧ ಶತಕ ಪೂರೈಸಿದ 2026ರ ಮೊದಲ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ. ಆ ಸಲುವಾಗಿ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಯಿತು. ವಿ. ನಾಗೇಂದ್ರ ಪ್ರಸಾದ್, ಧರ್ಮರಾಜ್, ರವಿ ಗೌಡ, ಮೋಹನ್, ಜಡೇಶ್ ಕೆ. ಹಂಪಿ, ಓಂ ಪ್ರಕಾಶ್ ರಾವ್, ಚಕ್ರವರ್ತಿ ಚಂದ್ರಚೂಡ್, ವೀರಕಪುತ್ರ ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಭಾರತಿ ಟೀಚರ್ 7ನೇ ತರಗತಿ’ (ಭಾರತಿ ಟೀಚರ್) ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದರು.
‘ಪೂಜ್ಯ ಫಿಲ್ಮ್ಸ್’ ಬ್ಯಾನರ್ ಮೂಲಕ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗುರುರಾಜ್ ರೆಡ್ಡಿ ಅವರು ಸಹ ನಿರ್ಮಾಪಕರಾಗಿದ್ದರು. ಎಂ.ಎಲ್. ಪ್ರಸನ್ನ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತದ ಜವಬ್ದಾರಿಯನ್ನು ನಿಭಾಯಿಸಿದ್ದಾರೆ.
ಸಚಿತ್ ಫಿಲ್ಮ್ಸ್ ನ ವೆಂಕಟ್ ಗೌಡ ಅವರು ಕ್ರಿಯೇಟಿವ್ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ 11 ಕೇಂದ್ರಗಳಲ್ಲಿ 25 ದಿನಗಳು , 9 ಕೇಂದ್ರಗಳಲ್ಲಿ 50 ದಿನ ಪೂರೈಸಿದ್ದು, ಇಲ್ಲಿಯವರೆಗೂ 2 ಲಕ್ಷ ವಿದ್ಯಾರ್ಥಿಗಳು ಸಿನಿಮಾ ವೀಕ್ಷಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಸಿಹಿಕಹಿ ಚಂದ್ರು, ಕುಮಾರಿ ಯಶಿಕಾ, ಗೋವಿಂದೇಗೌಡ, ದಿವ್ಯಾ ಅಂಚನ್, ಅಶ್ವಿನ್ ಹಾಸನ್, ಬೆನಕಾ ನಂಜಪ್ಪ, ಸೌಜನ್ಯ ಸುನಿಲ್, ರೋಹಿತ್ ರಾಘವೇಂದ್ರ, ಎಂ.ಜೆ. ರಂಗಸ್ವಾಮಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಂ.ಬಿ. ಹಳ್ಳಿಕಟ್ಟಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಸುಜಿತ್ ನಾಯಕ್ ಅವರ ಸಂಕಲನ, ಕಂಬಿ ರಾಜ್ ಅವರ ನೃತ್ಯ ನಿರ್ದೇಶನ ಈ ಸಿನಿಮಾದಲ್ಲಿದೆ.
ನಟ ಕಹಿ ಚಂದ್ರು ಅವರು ಮಾತನಾಡಿ, ‘ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೂ, ಇಷ್ಟು ದೊಡ್ಡ ರೋಲ್ ಸಿಕ್ಕಿರೋದು ಇದೇ ಮೊದಲು. ಇಂತಹ ಪಾತ್ರ ನಿಭಾಯಿಸುತ್ತೇನೆ ಎಂಬ ನಂಬಿಕೆ ಇಲ್ಲ. ನಿರ್ದೇಶಕರು ನನ್ನ ಮೇಲೆ ಭರವಸೆ ಇಟ್ಟುಕೊಂಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಎಲ್ಲರ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾದಲ್ಲಿ ಸಚಿವ ಸಂತೋಷ್ ಲಾಡ್ ನಟನೆ
ವಿ. ನಾಗೇಂದ್ರ ಪ್ರಸಾದ್ ಮಾತನಾಡಿ, ‘ಇಂಥ ಚಿತ್ರವನ್ನು ಜನರಿಗೆ ತಲುಪಿಸುವಂತಹ ಕೆಲಸ ಆಗಬೇಕು. ಆ ಕೆಲಸವನ್ನು ಈ ಚಿತ್ರತಂಡದವರು ಮಾಡಿರುವುದು ಶ್ಲಾಘನೀಯ. ಇಂತಹ ಪ್ರಯತ್ನಗಳು ಮತ್ತೆ ಮತ್ತೆ ಆಗಬೇಕು. ನಾನು ಸಿನಿಮಾ ನೋಡಿದ್ದೇನೆ. ಎಲ್ಲಾ ಪಾತ್ರಗಳ ಪೋಷಣೆಯನ್ನು ಆನಂದಿಸುತ್ತಿದ್ದೇನೆ’ ಎಂದು ಹೇಳಿದರು. 50 ದಿನ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.