
ಪಾಕಿಸ್ತಾನದ ಮುರಿದ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಕೇಂದ್ರದೊಳಗೆ, ಅಪರಿಚಿತ ದುಷ್ಕರ್ಮಿಗಳು ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಮುರಿದ್ಕೆ, ಪಾಕಿಸ್ತಾನ (ಮಾ.21): ಪಾಕಿಸ್ತಾನದ ಮುರಿದ್ಕೆಯಲ್ಲಿರುವ ಲಷ್ಕರ್-ಎ-ತೈಬಾ (LeT) ಸಂಘಟನೆಯ ಪ್ರಮುಖ ಕೇಂದ್ರವಾದ ‘ಮರ್ಕಜ್ ತೈಬಾ’ದ ಒಳಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು, ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈದ್ ಉಲ್ ಫಿತರ್ ಪ್ರಾರ್ಥನೆ ಮುಗಿದ ಕೆಲವೇ ಕ್ಷಣಗಳಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಮರ್ಕಜ್ ತೈಬಾದ ಒಳಗೆ ಬಿಲಾಲ್ ಆರಿಫ್ ಸಲಾಫಿ ಇದ್ದ ಸಂದರ್ಭದಲ್ಲಿ ನುಗ್ಗಿದ ಅಪರಿಚಿತ ಬಂದೂಕುಧಾರಿಗಳು ಆತನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಚಾಕುವಿನಿಂದಲೂ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲಾಗಿಲ್ಲ
ವೈರಲ್ ಆದ ವಿಡಿಯೋಗಳು
ಘಟನೆಯ ನಂತರದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಬಿಲಾಲ್ ಆರಿಫ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಮತ್ತು ಸುತ್ತಲೂ ನೆರೆದಿದ್ದ ಜನರು ಗಾಬರಿಯಿಂದ ಆತನನ್ನು ಎತ್ತಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ದಾಳಿ ನಡೆದ ಕೂಡಲೇ ಅಲ್ಲಿ ನೆರೆದಿದ್ದ ಜನರಲ್ಲಿ ತೀವ್ರ ಆತಂಕ ಮತ್ತು ಕಾಲ್ತುಳಿತದಂತಹ ವಾತಾವರಣ ನಿರ್ಮಾಣವಾಗಿತ್ತು.
ದಾಳಿಯ ಹಿಂದಿನ ಉದ್ದೇಶ ನಿಗೂಢ
ಈ ಹತ್ಯೆಯ ಹಿಂದೆ ಯಾರ ಕೈವಾಡವಿದೆ ಮತ್ತು ಹತ್ಯೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಪಾಕಿಸ್ತಾನದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವ ನಿರೀಕ್ಷೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳ ಪ್ರಮುಖ ನಾಯಕರನ್ನು ‘ಅಪರಿಚಿತ ವ್ಯಕ್ತಿಗಳು’ (Unknown Men) ಗುರಿಯಾಗಿಸಿ ಹತ್ಯೆ ಮಾಡುತ್ತಿರುವ ಸರಣಿ ಘಟನೆಗಳ ಮುಂದುವರಿದ ಭಾಗವಾಗಿ ಇದು ಕಂಡುಬಂದಿದೆ.
Scroll to load tweet…