
ಮಾಗಡಿ ರಸ್ತೆ ಟೋಟಲ್ ಎನರ್ಜಿ ಗ್ಯಾಸ್ ಸ್ಟೇಷನ್ ಬಂದ್, ಕಂಗಾಲಾದ ಆಟೋ ಚಾಲಕರು, ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಪೂರೈಕೆ ಕೊರತೆಯಿಂದ ಇದೀಗ ಆಟೋ ಚಾಲಕರು, ವಾಹನ ಸವಾರರು ಸಿಎನ್ಜಿ ಸಗದೇ ಕಂಗಾಲಾಗಿದ್ದಾರೆ.
ಬೆಂಗಳೂರು (ಮಾ.22) ಮಧ್ಯಪ್ರಾಚ್ಯ ಯುದ್ಧ ಇನ್ನೇನು ನಿಲ್ಲುತ್ತೆ ಅನ್ನೋವಷ್ಟರಲ್ಲೇ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಏಷ್ಯಾದ ಹಲವು ರಾಷ್ಟ್ರಗಳಿಗೆ ಗ್ಯಾಸ್, ತೈಲ ಪೂರೈಕೆಯಲ್ಲಿ ಕೊರತೆಯಾಗುತ್ತಿದೆ. ಭಾರತದಲ್ಲಿ ಈಗಾಗಲೇ ವಾಣಿಜ್ಯ ಗ್ಯಾಸ್ ಸಮಸ್ಯೆ ತೀವ್ರಗೊಂಡಿದೆ. ಅಡುಗೆಗೆ ಬಳಸುವ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದೀಗ ಸಿಎನ್ಜಿ ಆಟೋ ಹಾಗೂ ವಾಹನಗಳಿಗೂ ಆಟೋ ಗ್ಯಾಸ್ ಸಿಗದೇ ಪರದಾಡುವಂತಾಗಿದೆ. ಮಾಗಡಿ ರಸ್ತೆಯಲ್ಲಿರುವ ಟೋಟಲ್ ಎನರ್ಜಿಸ್ ಗ್ಯಾಸ್ ಸ್ಟೇಷನ್ ಬಂದ್ ಆಗಿದೆ. ಇದರಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ.
ಮಾಗಡಿ ರಸ್ತೆಯಲ್ಲಿರುವ ಟೋಟಲ್ ಎನರ್ಜಿಸ್ ಗ್ಯಾಸ್ ಸ್ಟೇಷನ್ ಕಳೆದ 15 ದಿನಗಳಿಂದ ಬಂದ್ ಆಗಿದೆ. LPG ಗ್ಯಾಸ್ ಸ್ಟೇಷನ್ ಬಂದ್ ಆಗಿರುವ ಕಾರಣ ಆಟೋ ಚಾಲಕರು ಸಿಎನ್ಜಿ ತುಂಬಿಸಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಆಟೋ ಚಾಲನೆ ಮಾಡಲು ಇಂಧನವಿಲ್ಲ. ಗ್ಯಾಸ್ ಸಿಗುತ್ತಿಲ್ಲ.ಬದುಕು ಸಾಗಿಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆಟೋಗೆ LPG ಗ್ಯಾಸ್ ಸಿಗದೇ ಸಾಕಷ್ಟು ಸಮಸ್ಯೆ ಆಗಿದೆ. ಬೆಳಿಗ್ಗೆ ನಾಲ್ಕು ಗ್ಯಾಸ್ ಸ್ಟೇಷನ್ ಗೆ ಹೋಗಿದ್ದೇನೆ. ನಾಲ್ಕರಲ್ಲಿ ಮೂರು LPG ಗ್ಯಾಸ್ ಸ್ಟೇಷನ್ ಬಂದ್ ಆಗಿದೆ. ನಾನು ಕೋರಮಂಗಲದಿಂದ ಬಂದಿದ್ದೇನೆ ಎಂದು ಆಟೋ ಚಾಲಕ ಸಲ್ಮಾನ್ ಹೇಳಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಟೋಟಲ್ ಎನರ್ಜಿಸ್ ಗ್ಯಾಸ್ ಸ್ಟೇಷನ್ ಕೂಡ ಬಂದ್ ಆಗಿದೆ. ಗ್ಯಾಸ್ ಕೊರತೆಯಿಂದ ಈಗಾಗಲೇ ಬೆಲೆ 91 ರೂಪಾಯಿಗೆ ಏರಿಕೆಯಾಗಿದೆ. ಹೀಗಾದರೆ ಆಟೋ ಓಡಿಸಿ ಜೀವನ ಮಾಡೋದು ಹೇಗೆ? ಗ್ಯಾಸ್ ಸಿಗದೇ ಸಾಕಷ್ಟು ಸಮಸ್ಯೆ ಆಗಿದೆ. ನಮಗೆ ಸರ್ಕಾರ ಏನಾದರೂ ಪರಿಹಾರ ಮಾಡಬೇಕು ಎಂದು ಆಟೋ ಚಾಲಕ ಸಲ್ಮಾನ್ ಮನವಿ ಮಾಡಿದ್ದಾರೆ.
ಹೊಟೆಲ್ಗಳಿಗೆ ಸಮಾಧಾನ ಸುದ್ದಿ
ಕಳೆದ ಹಲವು ದಿನಗಳಿಂದ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೇ ಹಲವು ಹೊಟೆಲ್ಗಳು ಮುಚ್ಚಿದೆ. ಇನ್ನು ಉಳಿದಿರುವ ಹೊಟೆಲ್ಗಳಲ್ಲಿ ಹೆಚ್ಚಿನ ಆಹಾರ ಖಾದ್ಯಗಳು ಲಭ್ಯವಿಲ್ಲ. ಇದರ ನಡುವೆ ಭಾರತ ಮಾತುಕತೆ ನಡೆಸಿ ತೈಲ ಹಾಗೂ ಗ್ಯಾಸ್ ಹಡಗು ಭಾರತಕ್ಕೆ ಆಗಮಿಸಿದೆ. ಹೀಗಾಗಿ ನಾಳೆಯಿಂದ ಹೊಟೆಲ್ಗಳಿಗೆ ಶೇಕಡಾ 50ರ್ಟು ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದಾಗಿ ಪೆಟ್ರೋಲಿಯಂ ಇಲಾಖೆ ಹೇಳಿದೆ. ಕಳೆದ 12 ದಿನಗಳಿಂದ ಗ್ಯಾಸ್ ಸಮಸ್ಯೆಯಿಂದ ಹಲವು ಹೊಟೆಲ್ಗಳು ಮುಚ್ಚಿದೆ. ಸದ್ಯ ಕೇಂದ್ರದ ಸೂಚನೆಯಿಂದ ಹೊಟೇಲ್ ಗಳಿಗೆ ಮರುಜೀವ ಸಿಕ್ಕಿದಂತಾಗಿದೆ.
ಶೇಕಡಾ 50ರಷ್ಟು ಸಿಲಿಂಡರ್ ಪೂರೈಕೆ ಕುರಿತು ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಜಿಕೆ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಶೇ50 ರಷ್ಟು ಸರಬರಾಜು ಆಗುತ್ತೆ ಎಂದು ಆದೇಶ ಬಂದಿದೆ. ನಮ್ಮ ಹೋಟೆಲ್ ಉದ್ಯಮಕ್ಕೆ ಶೇ 50 ರಷ್ಟು ಸಿಲೆಂಡರ್ ಲಭ್ಯವಾದರೆ ಸದ್ಯ ಉದ್ಯಮ ನಡೆಸಬಹುದು. ಕ್ಲಿಷ್ಟ ಪರಿಸ್ಥಿತಿಯಲ್ಲಿ ಇದು ನೆರವಾಗುತ್ತೆ ಎಂದಿದ್ದಾರೆ. ಸೋಮವಾರದಿಂದ ಎಲ್ಲ ಹೋಟೆಲ್ ಅವರಿಗೆ ಗ್ಯಾಸ್ ಸರಬರಾಜು ಆಗುತ್ತೆ ಅನ್ನೋ ನಿರೀಕ್ಷೆ ಇದೆ ಎಂದು ಜಿಕೆ ಶೆಟ್ಟಿ ಹೇಳಿದ್ದಾರೆ.