Headlines

Chikkamagaluru: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ಭದ್ರಾ ಹಿನ್ನೀರಿನ ನೂತನ ಸೇತುವೆ ಈಗ ಪ್ರವಾಸಿಗರ ಹಾಟ್‌ಸ್ಪಾಟ್ | Chikkamagalurus Newest Gem The Stunning Bhadra Backwater Bridge Is Now A Tourist Hotspot

Chikkamagaluru: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ಭದ್ರಾ ಹಿನ್ನೀರಿನ ನೂತನ ಸೇತುವೆ ಈಗ ಪ್ರವಾಸಿಗರ ಹಾಟ್‌ಸ್ಪಾಟ್ | Chikkamagalurus Newest Gem The Stunning Bhadra Backwater Bridge Is Now A Tourist Hotspot



Chikkamagaluru: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ಭದ್ರಾ ಹಿನ್ನೀರಿನ ನೂತನ ಸೇತುವೆ ಈಗ ಪ್ರವಾಸಿಗರ ಹಾಟ್‌ಸ್ಪಾಟ್ | Chikkamagalurus Newest Gem The Stunning Bhadra Backwater Bridge Is Now A Tourist Hotspot

Chikkamagaluru Bridge: ಕಾಫಿನಾಡು ಚಿಕ್ಕಮಗಳೂರಿನ ಭದ್ರಾ ಹಿನ್ನೀರಿನಲ್ಲಿ ಅಡಗಿದ್ದ ಈ ಅದ್ಭುತ ನೈಸರ್ಗಿಕ ಲೋಕ, ಈಗ ಪ್ರವಾಸಿಗರ ಹೊಸ ಫೇವರಿಟ್ ತಾಣವಾಗಿ ಹೊರಹೊಮ್ಮುತ್ತಿದೆ. ರೈತರ ದಶಕಗಳ ಕನಸು ಮತ್ತು ಪ್ರವಾಸಿಗರ ಕಣ್ಮನ ಸೆಳೆಯುವ ಈ ಸ್ಥಳದ ಸಂಪೂರ್ಣ ವಿವರ ಇಲ್ಲಿದೆ. 

ಕಾಫಿನಾಡು ಚಿಕ್ಕಮಗಳೂರಿನ ಎನ್.ಆರ್.ಪುರ ಮತ್ತು ಹೊನ್ನೆಕೊಡಿಗೆಯನ್ನು ಸಂಪರ್ಕಿಸುವ ಸಲುವಾಗಿ ಭದ್ರಾ ನದಿಯ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆಯು ಈಗ ಪ್ರವಾಸಿಗರ ಪಾಲಿಗೆ ಒಂದು ಸುಂದರ ಸ್ವರ್ಗವಾಗಿ ಬದಲಾಗಿದೆ. ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಳ್ಳದಿದ್ದರೂ ಸಹ, ಇಲ್ಲಿನ ಮನಮೋಹಕ ನೈಸರ್ಗಿಕ ನೋಟವನ್ನು ಸವಿಯಲು ದಿನನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೂಲಕ ಈ ಸ್ಥಳದ ಸೌಂದರ್ಯದ ಬಗ್ಗೆ ತಿಳಿದು ಜನರು ಶಿವಮೊಗ್ಗ, ಮಂಗಳೂರು ಮತ್ತು ಬೆಂಗಳೂರಿನಂತಹ ನಗರಗಳಿಂದಲೂ ಇಲ್ಲಿಗೆ ತಂಡೋಪತಂಡವಾಗಿ ಬರುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಪ್ರವಾಸೋದ್ಯಮ ಹೊಸ ಕಳೆ ಪಡೆದುಕೊಂಡಿದೆ.

ರೈತರಿಗೆ ಪಾಲಿಗೆ ವರದಾನವಾದ ಸೇತುವೆ

ಪಶ್ಚಿಮ ಘಟ್ಟಗಳ ಹಸಿರು ಸಾಲು ಮತ್ತು ಭದ್ರಾ ನದಿಯ ಶಾಂತವಾದ ಹಿನ್ನೀರಿನ ವಿಶಾಲ ನೋಟವು ಪ್ರವಾಸಿಗರಿಗೆ ಅತ್ಯಂತ ಹಿತವಾದ ಅನುಭವ ನೀಡುತ್ತಿದೆ. ಒಂದು ಕಾಲದಲ್ಲಿ ನಿರ್ಜನವಾಗಿದ್ದ ಈ ಪ್ರದೇಶವು ಈಗ ಪ್ರವಾಸಿ ಚಟುವಟಿಕೆಗಳಿಂದ ಗಿಜಿಗುಟ್ಟುತ್ತಿದೆ. ಈ ಸೇತುವೆಯು ಕೇವಲ ಒಂದು ಪ್ರವಾಸಿ ತಾಣವಾಗಿ ಉಳಿಯದೆ, ಸ್ಥಳೀಯರಿಗೆ ಮತ್ತು ರೈತರಿಗೆ ವರದಾನವಾಗಿದೆ. 1958ರಲ್ಲಿ ಭದ್ರಾ ಅಣೆಕಟ್ಟು ನಿರ್ಮಾಣವಾದಾಗ ಈ ಭಾಗದ ಸಾವಿರಾರು ರೈತರು ತಮ್ಮ ಫಲವತ್ತಾದ ಜಮೀನನ್ನು ಕಳೆದುಕೊಂಡಿದ್ದರು. ಎನ್.ಆರ್. ಪುರ (ನರಸಿಂಹರಾಜಪುರ) ಮತ್ತು ಹೊನ್ನೆಕೊಡಿಗೆ ನಡುವಿನ ನೇರ ಸಂಪರ್ಕ ಕಡಿತಗೊಂಡಿತ್ತು. ಅಷ್ಟೇ ಅಲ್ಲ, ಈ ಹಿಂದೆ ಎನ್.ಆರ್. ಪುರದಿಂದ ಹೊನ್ನೆಕೊಡಿಗೆ ತಲುಪಲು ಸುಮಾರು 30 ಕಿ.ಮೀ ಪ್ರಯಾಣಿಸಬೇಕಿತ್ತು. ಆದರೆ ಈ ಹೊಸ ಸೇತುವೆಯ ನಿರ್ಮಾಣದಿಂದಾಗಿ ಕೇವಲ 5 ಕಿ.ಮೀ ಕ್ರಮಿಸಿದರೆ ಸಾಕು. ಅಂದರೆ ಈ ಸೇತುವೆಯಿಂದಾಗಿ ಸಾರ್ವಜನಿಕರ ಮತ್ತು ರೈತರ ದೈನಂದಿನ ಪ್ರಯಾಣದ ಸಮಯ ಉಳಿಯುವುದಲ್ಲದೆ, ಇಂಧನದ ಮೇಲಿನ ಖರ್ಚು ಕೂಡ ಭಾರಿ ಪ್ರಮಾಣದಲ್ಲಿ ತಗ್ಗಲಿದೆ.

35 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ
ಸುಮಾರು 800 ಮೀಟರ್ ಉದ್ದದ ಈ ಬೃಹತ್ ಸೇತುವೆಯನ್ನು ಸುಮಾರು 35 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದಶಕಗಳ ಕಾಲದ ಜನರ ನಿರಂತರ ಹೋರಾಟ ಮತ್ತು ಬೇಡಿಕೆಯ ಫಲವಾಗಿದೆ ಎನ್ನಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಯಲ್ಲಿ ವಿಶೇಷ ಆಸಕ್ತಿ ವಹಿಸಿ ಕೆಲಸ ಪೂರ್ಣಗೊಳಿಸಲು ಸಹಕರಿಸಿದ್ದಾರೆ. ಮಾಹಿತಿಯ ಪ್ರಕಾರ, ಮುಖ್ಯಮಂತ್ರಿಗಳು ಈ ಸೇತುವೆಯನ್ನು ಇದೇ ಏಪ್ರಿಲ್ 13 ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಕೆ.ಎಸ್.ಟಿ.ಡಿ.ಸಿ (KSTDC) ಅಧ್ಯಕ್ಷ ಎಂ. ಶ್ರೀನಿವಾಸ್ ಅವರ ಪ್ರಕಾರ, ಮುಂದಿನ ದಿನಗಳಲ್ಲಿ ಇಲ್ಲಿ ವಾಟರ್ ಪಾರ್ಕ್ ಸೇರಿದಂತೆ ಹಲವು ಆಧುನಿಕ ಪ್ರವಾಸಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ.

ಭೇಟಿ ನೀಡಲು ಸೂಕ್ತ ಸಮಯ
ನೀವು ಈ ಸೇತುವೆಗೆ ಭೇಟಿ ನೀಡಲು ಬಯಸಿದರೆ ಮುಂಜಾನೆ ಅಥವಾ ಸಂಜೆಯ ಸೂರ್ಯಾಸ್ತದ ಸಮಯವನ್ನು (ಮುಂಜಾನೆ 6 ರಿಂದ 9 ಅಥವಾ ಸಂಜೆ 5 ರಿಂದ 7 ಗಂಟೆಯವರೆಗೆ) ಆರಿಸಿಕೊಳ್ಳಿ. ಹಿನ್ನೀರಿನಲ್ಲಿ ಪ್ರತಿಫಲಿಸುವ ಸೂರ್ಯನ ಚಿನ್ನದ ಬಣ್ಣದ ಕಿರಣಗಳು ನಿಮ್ಮ ಫೋಟೋಗ್ರಫಿಗೆ ಸೂಕ್ತವಾಗಿದೆ.

ಹತ್ತಿರದ ಇತರ ಪ್ರವಾಸಿ ತಾಣಗಳು (Nearby Attractions)

ಸೇತುವೆಗೆ ಭೇಟಿ ನೀಡುವವರು ಇವುಗಳನ್ನೂ ನೋಡಬಹುದು
ಸಿಂಹನಗದ್ದೆ ಜೈನ ಬಸದಿ: ಎನ್.ಆರ್. ಪುರದಲ್ಲಿರುವ ಐತಿಹಾಸಿಕ ಮತ್ತು ಧಾರ್ಮಿಕ ತಾಣ.
ಕುವೆಂಪು ಸ್ಮಾರಕ (ಕುಪ್ಪಳ್ಳಿ): ಇಲ್ಲಿಂದ ಸುಮಾರು 40-50 ಕಿ.ಮೀ ದೂರದಲ್ಲಿದೆ.
ಲಕ್ಕವಳ್ಳಿ ಭದ್ರಾ ಅಣೆಕಟ್ಟು: ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ.



Source link

Leave a Reply

Your email address will not be published. Required fields are marked *