
ಭಾನುವಾರ ರಾಜ್ಯದ ಹಲವೆಡೆ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು, ದೇವನಹಳ್ಳಿ ಮತ್ತು ಧಾರವಾಡದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲದೆ, ವಿಜಯನಗರ ಜಿಲ್ಲೆಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ನಡೆದ ಪ್ರತ್ಯೇಕ ಅಪಘಾತದಲ್ಲಿ 8 ಜನ ಸಾವನ್ನಪ್ಪಿದ್ದರೆ, ಸೋದರರಿಬ್ಬರು ಈಜಲು ತೆರಳಿ ನೀರುಪಾಲಾಗಿದ್ದಾರೆ. ದೇವನಹಳ್ಳಿ, ಬೆಂಗಳೂರು, ಧಾರವಾಡದಲ್ಲಿ ಅಪಘಾತ, ಹರಪ್ಪನಹಳ್ಳಿ ತಾಲೂಕಿನಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ.ಬೆಂಗಳೂರಿನ ಕೆ.ಆರ್.ಪುರದಲ್ಲಿ ಇಂಡಿಕೇಟರ್ ಹಾಕದೆ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಟಾಟಾ ಇಂಟ್ರಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಮೂವರು ದಾರುಣ ಮೃತಪಟ್ಟಿದ್ದಾರೆ. ಸುರೇಶ್ (32), ಮಣಿಕಂಠ (39) ಮತ್ತು ಶ್ರೀನಿವಾಸ್ (35) ಮೃತರು.
ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಟಿ.ಟಿ.ವಾಹನ ಲಾರಿಗೆ ಡಿಕ್ಕಿ ಹೊಡೆದಿದ್ದು ಟಿಟಿ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಯಮ್ಮ (60) ಯಶೋದಮ್ಮ (60) ಮತ್ತು ಗಂಗಾ (38) ಸ್ಥಳದಲ್ಲೇ ಮೃತಪಟ್ಟವರು. ತುಮಕೂರು ಜಿಲ್ಲೆಯ ತಿಪಟೂರಿನ ವಿದ್ಯಾನಗರದ ಸ್ತ್ರೀ ಶಕ್ತಿ ಸಂಘದ 12 ಜನ ಕಾಶಿಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಇನ್ನು, ಧಾರವಾಡ ತಾಲೂಕಿನ ಚಿಕ್ಕಮಲ್ಲಿಗೆವಾಡ ರಸ್ತೆಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಕಮಾಪುರದ ಇಮಾಮ್ ಹೆಬ್ಬಳ್ಳಿ (23) ಅನಾಸ್ ಮುಲ್ಲಾನವರ (17) ಮೃತರಾಗಿದ್ದಾರೆ.
ಸೋದರರಿಬ್ಬರು ನೀರುಪಾಲು
ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಸಹೋದರರಿಬ್ಬರು ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದ ಬಳಿ ಭಾನುವಾರ ನಡೆದಿದೆ. ಎಂ.ಜಿ.ಮನು (19), ಎಂ.ಜಿ.ಪ್ರಜ್ವಲ್ (18) ಮೃತರು.